ಸಿದ್ದರಾಮಯ್ಯ- ಅಮಿತ್ ಶಾ ಭೇಟಿ | ಪೊಲೀಸ್ ಪಡೆಯ ಬಲವರ್ಧನೆಗೆ ಸಿ.ಎಂ ಒತ್ತಾಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಜೂ.28) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್ ಪಡೆಯ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳ ಮಂಜೂರಾತಿಗೆ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಜೂ.28) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್ ಪಡೆಯ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳ ಮಂಜೂರಾತಿಗೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಭಾರತ ಸರ್ಕಾರವು 80 ಕೋಟಿ ರೂ. ವೆಚ್ಚದಲ್ಲಿ ಇಂಡಿಯಾ ರಿವರ್ಸ್ ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಿದರು.
ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ತಲಾ 200 ಕೋಟಿ ರೂ. ಗಳಂತೆ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕೆಂದು ಶಾ ಬಳಿ ಸಿದ್ದರಾಮಯ್ಯ ಆಗ್ರಹಿಸಿದರು.
ಹೈಕೋರ್ಟಿನ ಆದೇಶದಂತೆ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ ಬಾಡಿ ಕ್ಯಾಮರಾ ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಇನ್ನೂ 175 ಕೋಟಿ ರೂ. ವೆಚ್ಚದಲ್ಲಿ 58,546 ಬಾಡಿ ಕ್ಯಾಮರಾ ಖರೀದಿಸುವ ಅಗತ್ಯವಿದ್ದು, 100 ಕೋಟಿ ರೂ. ನೆರವು ನೀಡುವಂತೆ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ಬಾಡಿಗೆ ಕಟ್ಟದಲ್ಲಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ 100 ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡವನ್ನು ತಲಾ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 300 ಕೋಟಿ ರೂ. ಅಗತ್ಯವಿದೆ. ಇದಕ್ಕೆ ನೆರವು ಒದಗಿಸುವಂತೆಯೂ ಗೃಹ ಸಚಿವ ಅಮಿತ್ ಶಾ ಬಳಿ ಸಿದ್ದರಾಮಯ್ಯ ಕೋರಿದರು.
ಪೊಲೀಸ್ ಕ್ಯಾಂಟೀನ್ ಸೌಲಭ್ಯ ಮಾದರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗೂ ಕ್ಯಾಂಟೀನ್ ಸ್ಥಾಪನೆಗೆ ಅಗತ್ಯ ಅನುಮತಿಗಳನ್ನು ಒದಗಿಸುವುದು, ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ನೆರವು, ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ಮತ್ತಿತರ ವಿಷಯಗಳ ಕುರಿತು ಸಹ ಚರ್ಚಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು.