ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ, ಬದಲಾವಣೆ ಪ್ರಶ್ನೆಯೇ ಇಲ್ಲ: ಯತೀಂದ್ರ

ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ

Update: 2024-12-05 10:44 GMT
ಯತೀಂದ್ರ ಸಿದ್ದರಾಮಯ್ಯ
Click the Play button to listen to article

ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. 

ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ. ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಖಾಸಗಿ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಅಧಿಕಾರ ಹಂಚಿಕೆಯ ವಿಷಯ ಭಾರೀ ಚರ್ಚೆಗೆ ಒಳಗಾಗಿದೆ. ಶಿವಕುಮಾರ್‌ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಯಾವುದೇ ರೀತಿಯ ಒಪ್ಪಂದವೂ ಆಗಿಲ್ಲ ಎಂದು ಹೇಳಿದ್ದರು.

ಇದೀಗ ಸಿದ್ದರಾಮಯ್ಯ ಅವರ ಪುತ್ರರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಮ್ಮ ತಂದೆಯೇ ಐದು ವರ್ಷಗಳ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ್ದಾರೆ. ಆ ಮೂಲಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ಮಾತನಾಡಿದ ಯತೀಂದ್ರ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದಾರೆ. ಹೀಗಿರುವಾಗ ಸಿಎಂ ಬದಲಾವಣೆ ಎಲ್ಲಿಂದ ಬಂತು? ಚುನಾಯಿತ ಸರ್ಕಾರವನ್ನು ಅಸಾಂವಿಧಾನಿಕವಾಗಿ ಕೆಡವಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಒಪ್ಪಂದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಇಬ್ಬರ ನಡುವೆಯೇ ಎಲ್ಲವೂ ತೀರ್ಮಾನವಾಗುವುದಾದರೆ ನಾವೆಲ್ಲಾ ಯಾಕಾಗಿ ಇರುವುದು? ಎಂಬ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ಹೇಳಿಕೆ. ಅದು ಅಪಸ್ವರ ಏನಿಲ್ಲ, ಎಲ್ಲಾ ಪಕ್ಷಗಳಲ್ಲೂ ಇದ್ದದ್ದೆ ಎಂದು ಹೇಳಿದರು.

ಹಾಸನದಲ್ಲಿ ನಡೆಯುವ ಸಮಾವೇಶ ಜನತೆಗೆ ಸತ್ಯ ಮನವರಿಕೆ ಮಾಡಿಕೊಡಲು, ಮುಡಾ ವಿಚಾರದಲ್ಲಿ ಸಿಎಂ ಪರ ನಿಂತ ಜನತೆಗೆ ಕೃತಜ್ಞತೆ ಸಲ್ಲಿಸಲು ನಡೆಸಲಾಗುತ್ತಿದೆ. ವರಿಷ್ಠರು ಪಕ್ಷದ ವೇದಿಕೆಯಲ್ಲೇ ಮಾಡಿದರೆ ಪಕ್ಷ ಇನ್ನಷ್ಟು ಬಲವಾಗುತ್ತೆ ಅಂತ ಹೇಳಿದರು. ಪಕ್ಷಕ್ಕೆ ಶಕ್ತಿ ಬರಲೆಂದು ಜನ ಕಲ್ಯಾಣ ಸಮಾವೇಶವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದರು.

ಕೋರ್ಟ್‌ಗಳ ಮೇಲೆ ಪ್ರಭಾವ ಬೀರಲು ಇಡಿಯಿಂದ ಲೋಕಾಯುಕ್ತಕ್ಕೆ ಪತ್ರ ಬರೆಯಲಾಗಿದೆ. ಮುಡಾ ಕೇಸ್‌ನಲ್ಲಿ ಇಡಿಗೆ ತನಿಖೆ ನಡೆಸುವ ಅಧಿಕಾರವೇ ಇಲ್ಲ ಎಂದರು.

Tags:    

Similar News