ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣುಮಕ್ಕಳ ಪರ ಕಣ್ಣೀರೇ ಬರಲಿಲ್ಲ: ದೇವೇಗೌಡರನ್ನು ಕೆಣಕಿದ ಸಿದ್ದರಾಮಯ್ಯ
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣು ಮಕ್ಕಳ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದ್ದಾರೆ.;
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣು ಮಕ್ಕಳ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದ್ದಾರೆ.
ಚನಪಟ್ಟಣ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, " ಚನ್ನಪಟ್ಟಣಕ್ಕೆ ಏನು ಮಾಡಿದ್ದೀವಿ ಎಂಬುದನ್ನು ಕ್ಷೇತ್ರದ ಜನತೆ ಕೇಳಬೇಕು. ಬರೀ ಕಣ್ಣೀರು ಹಾಕೋದಲ್ಲ. ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣುಮಕ್ಕಳ ಪರವಾಗಿ ಕಣ್ಣೀರೇ ಬರಲಿಲ್ಲ ಪಾಪ ದೇವೇಗೌಡರಿಗೆ," ಎಂದು ವ್ಯಂಗ್ಯ ಮಾಡಿದ್ದಾರೆ.
ಇಷ್ಟರವರೆಗೆ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಸಂಬಂಧ ಹೆಚ್ಚೇನೂ ಹೇಳಿಕೆಗಳನ್ನು ನೀಡದ ಸಿದ್ದರಾಮಯ್ಯ, ಈ ಬಾರಿ ಆ ವಿಷಯವನ್ನು ಕೆದಕಿದ್ದಾರೆ. ಆ ಮೂಲಕ ದೇವೇಗೌಡರನ್ನು ರಾಜಕೀಯವಾಗಿ ಕೆಣಕಿದ್ದಾರೆ.
ದೇವೇಗೌಡರಿಗೆ ಹೊಟ್ಟೆ ಉರಿ
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದೆ ಅಂತ ದೇವೇಗೌಡರಿಗೆ ಹೊಟ್ಟೆಯುರಿ. ಅದಕ್ಕೇ ನಮ್ಮ ಸರ್ಕಾರ ಕಿತ್ತಾಕುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದ ಜನತೆ ಆರಿಸಿರುವ ನಮ್ಮ ಸರ್ಕಾರವನ್ನು ಕುಮಾರಸ್ವಾಮಿ, ದೇವೇಗೌಡರಿಂದ ಕೀಳಲು ಸಾಧ್ಯವಿಲ್ಲ. ನಿಮ್ಮ ಹೊಟ್ಟೆಯುರಿ ನಿಮ್ಮನ್ನೇ ಸುಡತ್ತೆ ಹೊರತು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ದೇವೇಗೌಡರೇ ಎಂದರು.
ಮೊದಲ ಬಾರಿ ಸಿಎಂ ಆಗಿ ಹತ್ತು ಹಲವು ಭಾಗ್ಯಗಳನ್ನು ನೀಡಿದೆ. ಎರಡನೇ ಬಾರಿ ಸಿಎಂ ಆಗಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ನಮ್ಮ ಸಾಧನೆಯ ಸಾಕ್ಷಿ ರಾಜ್ಯದ ಜನತೆಯ ಎದುರಿಗೆ ಇಟ್ಟಿದ್ದೀವಿ. ನೀವು ಏನು ಸಾಧನೆ ಮಾಡಿದ್ದೀರಿ ಅಂತ ಚನ್ನಪಟ್ಟಣ ಜನತೆಯ ಎದುರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಗ್ಯಾರಂಟಿ ನಿಲ್ಸಲ್ಲ
ಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಸೇರಿ ಗ್ಯಾರಂಟಿಗಳನ್ನು ಸರ್ಕಾರ ಬಂದ್ ಮಾಡ್ತದೆ ಎಂದು ದೇವೇಗೌಡರು ಪರಮ ಸುಳ್ಳು ಹೇಳಿದ್ದಾರೆ. ದೇವೇಗೌಡರೇ ಒಂದು ಮಾತು ಹೇಳ್ತೀನಿ, ಸಿದ್ದರಾಮಯ್ಯ ಒಮ್ಮೆ ಮಾತು ಕೊಟ್ಟರೆ ಯಾವುದೇ ಕಾರಣಕ್ಕೂ ಮಾತು ತಪ್ಪಲ್ಲ. ನಮ್ಮ ಸರ್ಕಾರ ಯಾವ ಗ್ಯಾರಂಟಿಗಳನ್ನೂ ನಿಲ್ಸಲ್ಲ, ನಿಲ್ಸಲ್ಲ, ನಿಲ್ಸಲ್ಲ ಎಂದು ಘೋಷಿಸಿದರು.
ವಕ್ಫ್ ವಿಚಾರದಲ್ಲೂ ಬಿಜೆಪಿ ಜೊತೆ ಸೇರಿ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಅಧಿಕೃತ ಘೋಷಣೆ ಮಾಡಿದ್ದೇವೆ ಎಂದು ಪುನರುಚ್ಚರಿಸಿದರು.