ಜಾತಿ ಗಣತಿ ಜಾರಿ ಸದ್ಯಕ್ಕಿಲ್ಲ! ಒಕ್ಕಲಿಗ , ಲಿಂಗಾಯಿತರ ವಿಶ್ವಾಸ ಪಡೆದ ಬಳಿಕವೇ ನಿರ್ಧಾರ
ಜಾತಿ ಗಣತಿ ಜಾರಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮತ್ತು ಪಂಚಮಸಾಲಿ ಸಮುದಾಯದ ಪ್ರವರ್ಗ 2A ಬೇಡಿಕೆ ಮತ್ತಿತರ ವಿಚಾರಗಳಲ್ಲಿ ವಿವಿಧ ಸಮುದಾಯಗಳ ಬೆಂಬಲ ಪಡೆದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಚಿವರುಗಳ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು;
ಬಹು ನಿರೀಕ್ಷಿತ ಜಾತಿಗಣತಿ ( ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷಾ) ವರದಿ ಜಾರಿ ಸಂಬಂಧ ಅವಸರ ಮಾಡಬಾರದು ಹಾಗೂ ಎಲ್ಲ ಸಮೂದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ಯಾವುದೇ ನಿರ್ಧಾರ ಕೈಗೊಳ್ಳುವ ಸಂಬಂಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಈ ಜಾತಿಗಣತಿ ವರದಿ ಜಾರಿ ಸಂಬಂಧ ಈ ವಾರದ ಸಂಪುಟ ಸಭೆಯಲ್ಲಿ ಚರ್ಚಿಸಿ ಪ್ರಮುಖ ನಿರ್ಧಾರಕ್ಕೆ ಬರುವ ಬಗ್ಗೆ ಮುಖ್ಯಮಂತ್ರಿ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಚಿವರು ಸಭೆಯಲ್ಲಿ ಮುಂದಾಗಬಹುದಾದ ಒಳಿತು ಕೆಡುಕುಗಳ ಲೆಕ್ಕಾಚಾರ ಹಾಕಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾತಿ ಗಣತಿಯನ್ನು ವಿರೋಧಿತ್ತಿರುವ ಸಮುದಾಯಗಳು, ವಿಶೇಷವಾಗಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವವರೆಗೂ ಯಾವುದೇ ನಿರ್ಧಾರಕ್ಕೆ ಬರದಿರಲು ಸಭೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೂರು ಉಪ ಚುನಾವಣೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಿರುವುದರಿಂದ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಾತಿ ಗಣತಿ ಸಂಬಂದ ಯಾವುದೇ ನಿರ್ಧಾರಕ್ಕೆ ಸರ್ಕಾರ ಬರುವಂತಿಲ್ಲ. ಜತೆಗೆ ಒಳ ಮೀಸಲಾತಿಯಂತಹ ಜೇನುಗೂಡಿಗೆ ಕೈಹಾಕುವುದೂ ಈಗಿನ ಸಂದರ್ಭದಲ್ಲಿ ರಾಜಕೀಯ ಕಲ್ಲೋಲಕ್ಕೆ ಕಾರಣವಾಗುವ ಸಾಧ್ಯತೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರೊಬ್ಬರು ಮಾಹಿತಿ ನೀಡಿದರು.
ಜಾತಿ ಗಣತಿ ಜಾರಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮತ್ತು ಪಂಚಮಸಾಲಿ ಸಮುದಾಯದ ಪ್ರವರ್ಗ 2A ಬೇಡಿಕೆ ಮತ್ತಿತರ ವಿಚಾರಗಳಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಹಾಗೂ ಆಯಾ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಬೆಂಬಲ ಪಡೆದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಚಿವರುಗಳ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಬಿಜೆಪಿ ಅಪಪ್ರಚಾರ ಆರೋಪ
ಜಾತಿ ಸಮೀಕ್ಷೆ, ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತಂತೆ ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಾರೆ. ಈ ಎಲ್ಲಾ ವಿಚಾರಗಳ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದ್ದು ಆಯಾ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ನಮ್ಮ ಬೆಂಬಲ ಇರುವುದನ್ನು ಮನದಟ್ಟು ಮಾಡಿಸಿದ್ದೇವೆ. ಆದರೂ ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಭಯಾನಕ ಅಪಪ್ರಚಾರ ಮಾಡುತ್ತದೆ. ಸುಳ್ಳುಗಳ ಹೊರತಾಗಿ ಬಿಜೆಪಿಗೆ ಬೇರೆ ಬಂಡವಾಳ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮುಡಾ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿ ಚುನಾವಣೆ ಮುಗಿಯುವರೆಗೂ, ಇಡಿ, ಐಟಿ ಮತ್ತಿತರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಮಾಣ ಇನ್ನೂ ಹೆಚ್ಚಲಿದೆ. ಇದನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆಯೂ ಸಭೆ ಚರ್ಚೆ ನಡೆಸಿದೆ.
ಪ್ರತೀ ಚುನಾವಣೆ ಸಂದರ್ಭದಲ್ಲೂ ಬಿಜೆಪಿಯ ಪ್ರತಿಯೊಬ್ಬರೂ ಜಿದ್ದಿಗೆ ಬಿದ್ದವರಂತೆ ಸುಳ್ಳುಗಳನ್ನು ಹೇಳುತ್ತಾರೆ. ಅವರ ಸುಳ್ಳುಗಳನ್ನು ಜನರೆದುರು ಬಯಲುಗೊಳಿಸಬೇಕು. ಲೋಕಸಭೆ ಚುನಾವಣೆ ಮುಗಿದ ಮರುದಿನವೇ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಮೋದಿಯವರಿಂದ ಹಿಡಿದು ಸಿ.ಟಿ.ರವಿವರೆಗೂ ಪ್ರತಿಯೊಬ್ಬರೂ ರಾಶಿ ರಾಶಿ ಸುಳ್ಳು ಹೇಳಿದ್ದರು. ಈ ಚುನವಣೆಯಲ್ಲೂ ಹೊಸ ಹೊಸ ಸುಳ್ಳುಗಳನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೇಳುತ್ತಲೇ ಇರುತ್ತಾರೆ. ಇವುಗಳನ್ನು ಸರಿಯಾಗಿ ಕೌಂಟರ್ ಮಾಡಬೇಕು ಎಂಬುದನ್ನು ಸಭೆಯಲ್ಲಿ ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
ಮೂರೂ ಕ್ಷೇತ್ರಗಳ ಉಪಚುನಾವಣೆ ಬಹಳ ಮಹತ್ವದ್ದಾಗಿದ್ದು ನಾವು ಮೂರನ್ನೂ ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಾವು ವಹಿಸಿಕೊಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮೂರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಸಂಪೂರ್ಣ ಶ್ರಮ ಹಾಕಿ ಚುನಾವಣೆ ನಿರ್ವಹಿಸಬೇಕು," ಎಂದು ಸಿದ್ದರಾಮಯ್ಯ ಸಚಿವರಿಗೆ ತಾಕೀತು ಮಾಡಿದರು.