Mysore MUDA Scam | ಯಾಕೆ ರಾಜೀನಾಮೆ ನೀಡಬೇಕು? ಸಿದ್ದರಾಮಯ್ಯ ಪರ ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಟಿ. ದೇವೇಗೌಡ ಬ್ಯಾಟಿಂಗ್
ಎಫ್ಐಆರ್ ದಾಖಲಾಗುತ್ತಿದ್ದಂತೆ ರಾಜೀನಾಮೆ ಕೊಡಬೇಕು ಎಂಬ ಜರೂರತ್ತೇನಿದೆ. ಯಾರ್ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ ಎಲ್ಲರೂ ಬಂದು ರಾಜೀನಾಮೆ ಕೊಡಿ ಎಂದು ವಿರೋಧ ಪಕ್ಷಗಳ ನಾಯಕರಿಗೆ ಸವಾಲು ಹಾಕಿದರು;
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳ ನಡೆಗೆ ಜೆಡಿಎಸ್ ಪಕ್ಷದ ಶಾಸಕ ಜಿ.ಟಿ. ದೇವೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಫ್ಐಆರ್ ದಾಖಲಾಗುತ್ತಿದ್ದಂತೆ ರಾಜೀನಾಮೆ ಕೊಡಬೇಕು ಎಂಬ ಜರೂರತ್ತೇನಿದೆ. ಹಾಗಾದರೆ ಯಾರ್ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ ಅವರೆಲ್ಲರೂ ಬಂದು ರಾಜೀನಾಮೆ ಕೊಡಿ ಎಂದು ವಿರೋಧ ಪಕ್ಷಗಳ ನಾಯಕರಿಗೆ ಸವಾಲು ಹಾಕಿದರು.
ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಕತ್ತಿದ್ದರೆ ಎಲ್ಲರೂ ಬನ್ನಿ. ವಿಧಾನಸೌಧದ ಮುಂದೆ ಸಾಲಾಗಿ ನಿಂತು ರಾಜೀನಾಮೆ ಕೊಡ್ತೀರಾ?, ಮಾತೆತ್ತಿದರೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಬೊಬ್ಬೆ ಹೊಡೆಯುವುದು ಬಿಡಿ. ಯಾವ ಅಭಿವೃದ್ಧಿ ಕಾರ್ಯ ಆಗಬೇಕು, ಕೇಂದ್ರದಿಂದ ಏನು ತರಬೇಕು, ರಾಜ್ಯದಿಂದ ಏನು ಹೋಗಬೇಕು ಅನ್ನೋದು ನೋಡಿ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ತಾಯಿಯ ವರಪುತ್ರರು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಅವರ ಮೇಲಿದೆ ಎಂದು ಹೇಳಿದರು.
ಎಂತಹದ್ದೇ ಸಂದರ್ಭ ಬಂದರೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇರುತ್ತಾರೆ. ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು ನಾವು ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಆ ಚುನಾವಣೆಯಲ್ಲಿ ಗೆದ್ದರು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಗೆಲುವು ಸಾಧ್ಯವಾಯಿತು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಶ್ರಮವೂ ಸಾಕಷ್ಟಿದೆ. ಒಬ್ಬ ದಲಿತ ಸಮುದಾಯದ ನಾಯಕನನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿರುವುದು ಇದೇ ಸಿದ್ದರಾಮಯ್ಯ ಎಂದು ಸಚಿವ ಮಹದೇವಪ್ಪ ಅವರನ್ನು ಶ್ಲಾಘಿಸಿದರು.
ದಸರಾ ಉದ್ಘಾಟಕರ ಆಯ್ಕೆ ತೀರ್ಮಾನವನ್ನು ಸಿಎಂ ಅವರಿಗೆ ಬಿಟ್ಟಿದ್ದೆವು. ಹಂ.ಪ.ನಾಗರಾಜಯ್ಯ ಅವರು ಉತ್ತಮ ಆಯ್ಕೆಯಾಗಿದೆ. ನಿರ್ವಿವಾದ ಸಾಹಿತಿಯಾದ ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು, ಆರೋಗ್ಯ ಕರುಣಿಸಲಿ' ಎಂದು ಜಿ.ಟಿ.ದೇವೇಗೌಡ ಪ್ರಾರ್ಥಿಸಿದರು.
ನಾನು ರಾಜೀನಾಮೆ ಕೇಳಿಲ್ಲ: ಎಚ್ಡಿಕೆ
ಶಾಸಕ ಜಿ.ಟಿ.ದೇವೇಗೌಡ ಅವರು ಮೈಸೂರಿನವರು. ತಾವು ತೊಂದರೆಗೆ ಸಿಲುಕಿಕೊಳ್ಳಬಾರದು ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಎಫ್ಐಆರ್ ಆಗಿದ್ದವರೆಲ್ಲೂ ರಾಜೀನಾಮೆ ಕೊಡಿ ಅಂತ ನಾನು ಕೇಳೊಲ್ಲ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಮೊದಲಿಂದಲೂ ಕೇಳಿಯೇ ಇಲ್ಲ. ಈಗ ಸಿದ್ದರಾಮಯ್ಯ ಅವರು ನಡೆದುಕೊಳ್ಳುತ್ತಿರುವ ರೀತಿಗೆ ರಾಜೀನಾಮೆ ಕೇಳುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಪರ ಮತನಾಡಿದ ಜಿ.ಟಿ.ದೇವೇಗೌಡ ನಡೆಗೆ ಸ್ವಪಕ್ಷದಲ್ಲೇ ಅಸಮಾಧಾನ ಸೃಷ್ಟಿಸಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡರು, ಇಲ್ಲಿವರೆಗೂ ಕುಮಾರಸ್ವಾಮಿಗೆ ದೇವೇಗೌಡರ (ತಮ್ಮನ್ನು) ಅರ್ಥ ಮಾಡಿಕೊಳ್ಳಲು ಆಗಿಲ್ಲ. 18 ವರ್ಷದಲ್ಲಿ ನಾನು ಸಿದ್ದರಾಮಯ್ಯ ಅವರಿಗೆ ಒಂದೇ ಒಂದು ಲೆಟರ್ ಕೊಟ್ಟು ಕೆಲಸ ಮಾಡಿಸಿಕೊಂಡಿಲ್ಲ. ನಾನು ಇರುವುದನ್ನೇ ನೇರವಾಗಿ ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಒಬ್ಬರೇ ಅಲ್ಲ. ಕುಮಾರಸ್ವಾಮಿ ಅವರು ಕೂಡ 2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಹಾಗಾಗಿ ಯಾರೂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.