ಶಿವಾನಂದ ಪಾಟೀಲ್ ಸವಾಲ್ಗೆ ಯತ್ನಾಳ್ ಡಲ್; ʼರಾಜೀನಾಮೆ ಪ್ರಹಸನʼದಿಂದಲೂ ಮುಜುಗರ
ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲುವಂತೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಸವಾಲು ಹಾಕಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಾಟೀಲರ ʼರಾಜೀನಾಮೆ ಪ್ರಹಸನʼ ದಿಂದ ತೀವ್ರ ಮುಜುಗರವಾಗಿದೆ.;
ಬಸವನಬಾಗೇವಾಡಿ ಶಾಸಕರೂ ಆಗಿರುವ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಹಾಗೂ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ʼಸವಾಲಿನ ರಾಜಕಾರಣದ ರಾಜೀನಾಮೆ ಪ್ರಹಸನʼ ಇದೀಗ ನಗೆಪಾಟಲಿಗೀಡಾಗಿದೆ.
ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲುವಂತೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಸವಾಲು ಹಾಕಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಾಟೀಲರ ʼರಾಜೀನಾಮೆ ಪ್ರಹಸನʼದಿಂದ ತೀವ್ರ ಮುಜುಗರವಾಗಿದೆ.
ʼಅಪ್ಪನಿಗೆ ಹುಟ್ಟಿದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿʼ ಎಂದು ಶಿವಾನಂದ ಪಾಟೀಲ್ ಅವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದರು. ಯತ್ನಾಳ್ ಸವಾಲು ಸ್ವೀಕರಿಸಿರುವ ಶಿವಾನಂದ ಪಾಟೀಲರು ಶುಕ್ರವಾರ ಷರತ್ತುಬದ್ಧ ರಾಜೀನಾಮೆ ಪತ್ರವನ್ನು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸಲ್ಲಿಸಿದ್ದರು.
ಯತ್ನಾಳ್ ರಾಜೀನಾಮೆಗೆ ಆಗ್ರಹ
ಶಾಸಕ ಶಿವಾನಂದ ಪಾಟೀಲರು ರಾಜೀನಾಮೆ ನೀಡಿದ್ದಾರೆ. ಸದಾ ಬೆಂಕಿ ಉಗುಳುವ ಯತ್ನಾಳ್ ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಶಿವಾನಂದ ಪಾಟೀಲ್ ಬೆಂಬಲಿಗರು ಹಾಗೂ ನೆಟ್ಟಿಗರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
ಯತ್ನಾಳ್ ಅವರು ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡರೂ ಬುದ್ದಿ ಕಲಿತಿಲ್ಲ. ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಪ್ರಜೆಗಳಿಗೆ ಕ್ಷುಲ್ಲಕ ರಾಜಕಾರಣದ ಮೂಲಕ ದ್ರೋಹ ಎಸಗುತ್ತಿದ್ದಾರೆ. ನಿಮ್ಮ ಸವಾಲು ಸ್ವೀಕರಿಸಿ ಶಿವಾನಂದ ಪಾಟೀಲರು ರಾಜೀನಾಮೆ ನೀಡಿದ್ದಾರೆ. ಈಗ ನಿಮ್ಮ ಸರದಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತು ಉಳಿಸಿಕೊಳ್ಳಿ ಎಂದು ಕುಹಕವಾಡಿದ್ದಾರೆ.
ಯತ್ನಾಳ್ ಉಪಟಳಕ್ಕೆ ಬ್ರೇಕ್
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿ ಪದೇ ಪದೇ ರಾಜೀನಾಮೆ ಕೇಳುವ ಹಾಗೂ ಬಾಯಿ ಬಂದಂತೆ ಟೀಕಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ಸಲುವಾಗಿಯೇ ಶಿವಾನಂದ ಪಾಟೀಲರು ರಾಜೀನಾಮೆ ಅಸ್ತ್ರ ಬಳಸಿದ್ದಾರೆ. ಯತ್ನಾಳ್ ಸವಾಲಿನಂತೆ ರಾಜೀನಾಮೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ಈಗ ಸವಾಲು ಹಾಕಿ ಮುಜುಗರಕ್ಕೆ ಒಳಗಾಗಿರುವ ಯತ್ನಾಳ್ ಮಾತ್ರ ಸವಾಲಿನಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್ ಅವರು ರಾಜೀನಾಮೆ ನೀಡುವುದಿಲ್ಲ. ಆದರೆ, ಶಿವಾನಂದ ಪಾಟೀಲ್ ವಿರುದ್ದ ಮತ್ತೊಮ್ಮೆ ಮಾತನಾಡಲು ಆಗದ ರೀತಿಯ ಪರಿಸ್ಥಿತಿ ತಂದುಕೊಂಡಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ತಮ್ಮ ವಿರುದ್ಧ ಪದೇ ಪದೆ ಮಾತನಾಡುತ್ತಿದ್ದ ಯತ್ನಾಳ್ ಗೆ ಬ್ರೇಕ್ ಹಾಕಲೆಂದೇ ಶಿವಾನಂದ ಪಾಟೀಲ್ ಅವರು ಷರತ್ತುಬದ್ಧ ರಾಜೀನಾಮೆಯ ಅಸ್ತ್ರ ಬಳಸಿದರು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಉಲ್ಟಾ ಹೊಡೆದ ಯತ್ನಾಳ್
ತಮ್ಮ ಮಾತುಗಳಿಂದಲೇ ಬಿಜೆಪಿಯಿಂದ ಉಚ್ಛಾಟಿತರಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಈಗ ಅದೇ ಮಾತುಗಳಿಂದ ಮತ್ತಷ್ಟು ಮುಜುಗರಕ್ಕೀಡಾಗಿದ್ದಾರೆ. ಶಿವಾನಂದ ಪಾಟೀಲರ ರಾಜೀನಾಮೆ ಪ್ರಹಸನಕ್ಕೆ ಹೆದರಿದ ಯತ್ನಾಳ್ ಅವರು ರಾಜೀನಾಮೆ ಪತ್ರ ಸರಿಯಾಗಿಲ್ಲ. ಷರತ್ತು ವಿಧಿಸಿ ರಾಜೀನಾಮೆ ನೀಡುತ್ತಾರೆಯೇ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿ ಕಾರ್ಯಕರ್ತರ ಎದುರು ಮುಜುಗರ ಅನುಭವಿಸಿದ್ದಾರೆ.
ರಾಜೀನಾಮೆ ಸ್ವೀಕಾರಾರ್ಹವಲ್ಲ
ಶಿವಾನಂದ ಪಾಟೀಲರು ಸಲ್ಲಿಸಿರುವ ರಾಜೀನಾಮೆ ಪತ್ರದ ಸ್ವೀಕರಿಸಲು ಅರ್ಹವಾಗಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ. ವೈಯಕ್ತಿಕ ವಿಚಾರಗಳನ್ನು ರಾಜಕಾರಣದಲ್ಲಿ ಬಳಸಬೇಕೇ, ಬೇಡವೇ ಎಂಬುವುದು ಅವರವರ ವಿವೇಚನೆ ಬಿಟ್ಟಿರುವ ವಿಚಾರ. ಯತ್ನಾಳ್ ರಾಜೀನಾಮೆ ಅಂಗೀಕಾರವಾದ ಬಳಿಕ ನನ್ನ ರಾಜೀನಾಮೆ ಅಂಗೀಕರಿಸುವಂತೆ ಶಿವಾನಂದ ಪಾಟೀಲ್ ಅವರು ಮನವಿ ಮಾಡಿದ್ದಾರೆ. ಹಾಗಾಗಿ ಇದನ್ನು ಅಂಗೀಕರಿಸಲಾಗುವುದಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.