ಶಿರೂರು ಗುಡ್ಡ ಕುಸಿತ | ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ

ಕಳೆದ ವಾರ ಅಂಕೋಲದ ಶಿರೂರಿನಲ್ಲಿ ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿ ನದಿಯಲ್ಲಿರುವುದು ಪತ್ತೆಯಾಗಿದೆ.;

Update: 2024-07-24 13:41 GMT
ಗಂಗಾವಳಿ ನದಿಯಲ್ಲಿ ಟ್ರಕ್‌ ಪತ್ತೆಯಾಗಿದೆ.
Click the Play button to listen to article

ಕಳೆದ ವಾರ ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.

ಶಿರೂರಿನಲ್ಲಿ ಕಳೆದ ವಾರ ಸಂಭವಿಸಿದ್ದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್‌ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿರುವಂತೆಯೇ ಪಕ್ಕದ ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಬುಧವಾರ ಖಚಿತಪಡಿಸಿದೆ.

ನೀರಿನಲ್ಲಿ ಮುಳುಗಿರುವ ಟ್ರಕ್ ಅನ್ನು ಈಗ ಗುರುತಿಸಲಾಗಿದೆ ಮತ್ತು ಅದನ್ನು ಮೇಲಕ್ಕೆ ಎತ್ತಲು ಕಾರ್ಯಾಚರಣೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು, 'ಒಂದು ಟ್ರಕ್ ನೀರಿನಲ್ಲಿರುವುದು ಪತ್ತೆಯಾಗಿದೆ. ನೌಕಾಪಡೆಯ ಡೀಪ್ ಡೈವರ್‌ಗಳು ಶೀಘ್ರದಲ್ಲೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ನದಿಯಿಂದ ಮೇಲೆತ್ತಲಿದ್ದಾರೆ. ಅಂತೆಯೇ ನದಿಯಲ್ಲಿನ ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು.

ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರೀಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಟ್ರಕ್‌ನ ಚಾಲಕ ಅರ್ಜುನ್ ಟ್ರಕ್​ನಲ್ಲಿ ಸಿಲುಕಿಕೊಂಡಿದ್ದಾರಾ ಅಥವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರಾ ಎನ್ನುವುದು ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಧಾವಿಸಿದ್ದಾರೆ. ಇನ್ನು ಕಾರವಾರ ಶಾಸಕ ಸತೀಶ್ ಸೈಲ್ ಮತ್ತು ಮಂಜೇಶ್ವರ ಶಾಸಕ ಅಶ್ರಫ್ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಭೂಕುಸಿತ ಸ್ಥಳದಲ್ಲಿಯೇ ಇದ್ದಾರೆ.

ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮಾತನಾಡಿ ಟ್ರಕ್ ಪತ್ತೆಯಾಗಿದೆ ಎಂದು ಖಚಿತಪಡಿಸಿದರು. ದಿನದ ಅಂತ್ಯದ ವೇಳೆಗೆ ಕಾರ್ಯಾಚರಣೆ ಬಹುತೇಕ ಪೂರ್ಣಗೊಳ್ಳುವ ಭರವಸೆ ಇದೆ. ಜಿಲ್ಲಾಡಳಿತವು ನೋಯ್ಡಾದಿಂದ ಭೂಗರ್ಭ ರಾಡಾರ್ ಯಂತ್ರ ತರಿಸಲು ವಿನಂತಿಸಿದೆ. ಇದೀಗ DGCA ಅನುಮತಿ ದೊರೆತ ಹಿನ್ನಲೆಯಲ್ಲಿ ರೈಲಿನ ಮೂಲಕ ತರಿಸಲಾಗುತ್ತಿದೆ. ಟ್ರಕ್‌ನ ನಿಖರವಾದ ಸ್ಥಳವನ್ನು ಖಚಿತಪಡಿಸಲು ಈ ರಾಡಾರ್ ಸಹಾಯ ಮಾಡುತ್ತದೆ. ಏಕೆಂದರೆ ಟ್ರಕ್ ನದಿಯಲ್ಲಿ ಸುಮಾರು 40 ಅಡಿ ಆಳದಲ್ಲಿ ಹೂತುಹೋಗಿದೆ. ಪಾಲಕ್ಕಾಡ್‌ನಿಂದ ಬರುವ ರಾಡಾರ್ ತಜ್ಞರು ರಕ್ಷಣಾ ತಂಡಕ್ಕೆ ನೆರವು ನೀಡಲಿದ್ದಾರೆ ಎಂದರು.

Tags:    

Similar News