ಶಕ್ತಿ ಯೋಜನೆ ನಿಲ್ಲಿಸಲು ಮಹಿಳೆಯರು ಕನಸಿನಲ್ಲಿ ಬಂದು ಹೇಳಿದ್ರಾ?; ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಶಕ್ತಿ ಯೋಜನೆ ಮೂಲಕ ಮಹಿಳೆಯರನ್ನು ಸ್ಥಿತಿವಂತರನ್ನಾಗಿ ಮಾಡಿದ್ದೀರಾ ಎಂದು ಲೇವಡಿ ಮಾಡಿದ ಕುಮಾರಸ್ವಾಮಿ, ಯೋಜನೆಯನ್ನು ದೀರ್ಘಾವಧಿಗೆ ಮುಂದುವರಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಒಂದೊಂದೇ ಗ್ಯಾರಂಟಿ ಯೋಜನೆ ರದ್ದುಗೊಳಿಸಲು ಮೊದಲ ಹಂತದ ಪ್ರಕ್ರಿಯೆ ಇದಾಗಿದೆ ಎಂದು ಹೇಳಿದ್ದಾರೆ.

Update: 2024-10-31 06:27 GMT

ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯನ್ನು ಮರು ಪರಿಶೀಲಿಸುವ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶಕ್ತಿ ಯೋಜನೆ ಮರು ಪರಿಶೀಲಿಸಲು ಡಿ.ಕೆ ಶಿವಕುಮಾರ್ ಅವರಿಗೆ ಮಹಿಳೆಯರು ಕನಸಿನಲ್ಲಿ ಬಂದು ಹೇಳಿದ್ದಾರೋ, ಇಲ್ಲವೇ ದೇವರು ಬಂದು ಜ್ಞಾನೋದಯ ಮಾಡಿದ್ದಾರೋ ಗೊತ್ತಿಲ್ಲ. ಒಂದೊಂದೇ ಗ್ಯಾರಂಟಿ ಯೋಜನೆ ನಿಲ್ಲಿಸಲು ಇದೊಂದು ನೆಪವಷ್ಟೇ. ಟ್ವೀಟ್‌, ಇ-ಮೇಲ್‌ ಮೂಲಕ ಮಹಿಳೆಯರು ತಿಳಿಸಿದ್ದಾರೆಂದು ಹೇಳುತ್ತಾರೆ. ಇವರಿಗೆ ಈಗ ಜ್ಞಾನೋದಯ ಆಗಿದೆಯಾ ಎಂದು ಪ್ರಶ್ನಿಸಿದ್ದಾರೆ.

ಇದು ಮೊದಲ ಹಂತ

ಶಕ್ತಿ ಯೋಜನೆ ಮೂಲಕ ಮಹಿಳೆಯರನ್ನು ಸ್ಥಿತಿವಂತರನ್ನಾಗಿ ಮಾಡಿದ್ದೀರಾ ಎಂದು ಲೇವಡಿ ಮಾಡಿದ ಕುಮಾರಸ್ವಾಮಿ ಅವರು, ಯೋಜನೆಯನ್ನು ದೀರ್ಘಾವಧಿಗೆ ಮುಂದುವರಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಒಂದೊಂದೇ ಗ್ಯಾರಂಟಿ ಯೋಜನೆ ರದ್ದುಗೊಳಿಸಲು ಮೊದಲ ಹಂತದ ಪ್ರಕ್ರಿಯೆ ಇದಾಗಿದೆ ಎಂದು ಹೇಳಿದ್ದಾರೆ.

ಈವರೆಗೆ ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ಜನರ ಬ್ರೈನ್‌ ವಾಷ್‌ ಮಾಡುತ್ತಿದ್ದರು. ಗ್ಯಾರಂಡಿ ಯೋಜನೆಗಳ ಪರಿಣಾಮ ರಾಜ್ಯದ ಅಭಿವೃದ್ಧಿ ನಿಂತಿತ್ತು. ಈಗ ರಾಜಸ್ವ ತೆರಿಗೆಯ ಗುರಿ 10 ಸಾವಿರ ಕೋಟಿ ಹೆಚ್ಚಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.

ಖಾತರಿ ಯೋಜನೆ ಹೆಸರು ಹೇಳಿಕೊಂಡು ಜನರಿಗೆ ಹೊರೆ ಮಾಡಿ, ಜನರ ಹಣದಲ್ಲೇ ಯೋಜನೆ ಮುಂದುವರಿಸುವುದರಲ್ಲಿ ಅರ್ಥ ಇಲ್ಲ. ಹಾಗಂತ ನಾನು ಗ್ಯಾರಂಟಿ ಕೊಡುವುದನ್ನು ನಾನು ವಿರೋಧಿಸುತ್ತಿಲ್ಲ. ಗ್ಯಾರಂಟಿ ಕೊಡಿ, ಆದರೆ ಗ್ಯಾರಂಟಿ ಹೆಸರಲ್ಲಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಬೇಡಿ. ಮುಂದಿನ ಅಧಿಕಾರ ನಡೆಸುವ ಪೀಳಿಗೆಯ ಭವಿಷ್ಯ ಹಾಳು ಮಾಡಬೇಡಿ ಎಂದು ಹೇಳಿದ್ದಾರೆ.

ರಾಜ್ಯವನ್ನು ದಿವಾಳಿ ಮಾಡಬೇಡಿ

ಅನ್ನ ಭಾಗ್ಯ ಯೋಜನೆಗೂ ಷರತ್ತು ವಿಧಿಸಲಾಗಿದೆ. ಅಕ್ಕಿಯ ಪ್ರಮಾಣ ಕಡಿಮೆ ಮಾಡಲಾಗಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡಬೇಕು. ನಮಗೆ ಗ್ಯಾರಂಟಿ ಗಳ ಬಗ್ಗೆ ಹೊಟ್ಟೆ ಉರಿ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ಬೇಕಾದರೆ ದುಪ್ಪಟ್ಟು ಮಾಡಿಕೊಳ್ಳಿ. ಆದರೆ, ರಾಜ್ಯವನ್ನು ದೀವಾಳಿ ಮಾಡಬೇಡಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಜನರ ತೆರಿಗೆ ಹಣವನ್ನು ಗ್ಯಾರಂಟಿ ಹೆಸರಲ್ಲಿ ಖರ್ಚು ಮಾಡಿ, ರಾಜ್ಯದ ಆರ್ಥಿಕ ಶಕ್ತಿ ಕುಂದಿಸಲಾಗುತ್ತಿದೆ. ಬೇರೆ ದೇಶಗಳಲ್ಲಿ ಉದ್ಭವಿಸಿರುವ ಅರಾಜಕತೆ ರಾಜ್ಯಕ್ಕೆ ಬರಬಾರದು ಎಂಬುದಷ್ಟೇ ನಮ್ಮ ಕಳಕಳಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Tags:    

Similar News