ಉಳ್ಳಾಲ ಬೀಚ್‌ ನಲ್ಲಿ ʼಶೈತಾನನ ಉಪಟಳʼ! ವೈರಲ್‌ ಆಯ್ತು ಜಾಗೃತಿ ಸಂದೇಶ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೀಚಿನಲ್ಲಿ ಪಿಶಾಚಿ (ಶೈತಾನ್)‌ ಉಪಟಳ ಇದೆ ಎಂದು ಸಾರ್ವಜನಿಕರಿಗೆ ಎಚ್ಚರಿಸಿ ಹಾಕಲಾಗಿರುವ ಫ್ಲೆಕ್ಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.;

Update: 2024-04-16 11:15 GMT

ದಕ್ಷಿಣಕನ್ನಡದ ಉಳ್ಳಾಲ ಬೀಚ್‌ ದಡದಲ್ಲಿ ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಸಲು ಹಾಕಲಾಗಿರುವ ಫ್ಲೆಕ್ಸ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೀಚ್‌ನಲ್ಲಿ ನೀರಿಗೆ ಇಳಿಯುವ ಪ್ರವಾಸಿಗರು ಸಮುದ್ರ ಪಾಲಾಗುತ್ತಿರುವುದನ್ನು ತಡೆಯಲು ʼಶೈತಾನ್‌ʼ ಭಯವನ್ನು ತೇಲಿ ಬಿಡಲಾಗಿದೆ.

ರಂಝಾನ್‌ ಹಬ್ಬದ ಬಳಿಕ ಇಲ್ಲಿನ ಖ್ಯಾತ ಆಧ್ಯಾತ್ಮಿಕ ಕೇಂದ್ರ ಉಳ್ಳಾಲ ಮದನಿ ದರ್ಗಾಗೆ ಆಗಮಿಸುವ ಭಕ್ತರು ಸಮೀಪದ ಕಡಲ ಕಿನಾರೆಗೆ ಹೋಗುವುದು ವಾಡಿಕೆಯಾಗಿದ್ದು, ಕುಟುಂಬ ಸಮೇತರಾಗಿ ಬರುವ ಭಕ್ತರು ಕತ್ತಲಾದ ಬಳಿಕವೂ ಬೀಚ್‌ ನಿಂದ ತೆರಳದೆ ಇರುವ ಸಂದರ್ಭಗಳೂ ಇವೆ. ಇದನ್ನು ತಡೆಗಟ್ಟಲು ʼಉಳ್ಳಾಲ ನಾಗರಿಕರ ಪರವಾಗಿʼ ಫ್ಲೆಕ್ಸ್‌ ಹಾಕಲಾಗಿದ್ದು, ಪ್ರದೇಶದಲ್ಲಿ ಶೈತಾನನ ಉಪಟಳವಿದೆ ಎಂದು ಎಚ್ಚರಿಸಲಾಗಿದೆ.

ಹಗಲು ಕೊನೆಗೊಳ್ಳುವ ಸೂರ್ಯಾಸ್ತಮಾನ ಸಮಯವನ್ನು ಮುಸ್ಲಿಮರಲ್ಲಿ ಮಗ್ರೀಬ್‌ ಎಂದು ಕರೆಯಲಾಗುತ್ತದೆ. ಸೂರ್ಯಸ್ತಮಾನ ಮುನ್ನವೇ ಸಮುದ್ರ ಕಿನಾರೆಯಿಂದ ತೆರಳಲು ಮನವಿ ಮಾಡಲಾಗಿದ್ದು, ಶೈತಾನನ ಉಪಟಳದಿಂದಾಗಿ ಹಲವು ಮಕ್ಕಳು ರೋಗಗ್ರಸ್ತರಾಗಿ ಜೀವ ಕಳೆದುಕೊಂಡಿದ್ದಾರೆ ಎಂದೂ ಎಚ್ಚರಿಸಲಾಗಿದೆ.

ಸಮುದ್ರವನ್ನು ನೋಡುವುದು ಮುಸ್ಲಿಮರಿಗೆ ಕಣ್ಣಿನ ಆರಾಧನೆಯಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ, ಕಣ್ಣಿನಿಂದ ನೋಡುವ ಆರಾಧನೆಯನ್ನು ಮಾತ್ರ ಮಾಡಿ, ನೀರಿಗೆ ಕಾಲು ಇಳಿಯದೆ, ಕತ್ತಲಾಗುವ ಮುನ್ನ ನಿರ್ಗಮಿಸುವಂತೆ ಮನವಿ ಮಾಡಲಾಗಿದೆ.

ಬೀಚ್‌ ನಲ್ಲಿ ಹಾಕಲಾಗಿರುವ ಎಚ್ಚರಿಕೆ

“ಸಮುದ್ರದ ಕಿನಾರೆಯಲ್ಲಿ ವಿಹಾರಕ್ಕಾಗಿ ಬರುವವರು ಯಾರೂ ಸಮುದ್ರಕ್ಕೆ ಇಳಿಯಬಾರದು, ಹಲವು ಜೀವಗಳು ಈಗಾಗಲೇ ಹೋಗಿವೆ. ಇತ್ತೀಚೆಗೆ 3 ತಿಂಗಳ ಮೊದಲು 2 ಜೀವ ಹೋಗಿರುವುದು ನಮ್ಮ ಕಣ್ಣ ಮುಂದಿದೆ. ತಮ್ಮ ಮಕ್ಕಳು ಸಮುದ್ರ ನೀರಿನ ಬಳಿ ಹೋಗದಂತೆ ಜಾಗೃತರಾಗಿರಿ. ಮಗ್ರಿಬ್‌ ಮೊದಲೇ ಇಲ್ಲಿಂದ ನಿರ್ಗಮಿಸಬೇಕಾಗಿ ವಿನಂತಿ. ಬಳಿಕ ಶೈತಾನನ ಉಪಟಳದಿಂದಾಗಿ ಹಲವು ಮಕ್ಕಳು ರೋಗಗ್ರಸ್ತರಾಗಿ ಜೀವ ಹೋದ ಘಟನೆಗಳು ನಮ್ಮ ಮುಂದಿವೆ. ಆದುದರಿಂದ ಪರವೂರಿನಿಂದ ಬಂದ ತಾವುಗಳು ನೀರಿಗೆ ಕಾಲನ್ನು ಹಾಕದೆ ಆದಷ್ಟು ಬೇಗ ಕಣ್ಣಿನ ಇಬಾದತ್‌ ಆದ ಸಮುದ್ರವನ್ನು ನೋಡಿ ಮಗ್ರಿಬ್‌ ಮೊದಲೇ ಇಲ್ಲಿಂದ ನಿರ್ಗಮಿಸಬೇಕಾಗಿ ತಮ್ಮಲ್ಲಿ ವಿನಂತಿ”

ವೈರಲ್‌ ಆದ ʼಶೈತಾನ್‌ ಉಪಟಳʼ

ಬೀಚಿನಲಿ ತೆಗೆದ ಫೋಟೋದಲ್ಲಿ ಮಹಿಳೆಯೊಬ್ಬರ ಅಸ್ಪಷ್ಟ ರೂಪ ಸೆರೆಯಾಗಿದ್ದನ್ನು ಗುರುತು ಮಾಡಿ ಉಳ್ಳಾಲ ಬೀಚಿನಲ್ಲಿ ಶೈತಾನ್‌ ಉಪಟಳ ಇದೆ ಎಂಬ ಸಂದೇಶವನ್ನು ವೈರಲ್‌ ಮಾಡಲಾಗುತ್ತಿದೆ.

ಈ ಚಿತ್ರವು ಕಾಡ್ಗಿಚ್ಚಿನಂತೆ ವಾಟ್ಸಪ್‌ ನಂತಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಹಲವಾರು ಜನರು ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.

ವೈರಲ್‌ ಆಗುತ್ತಿರುವ ವಾಟ್ಸಪ್‌ ಸಂದೇಶ

ಕ್ಯಾಮೆರಾ ಲೆನ್ಸ್ ರಿಫ್ಲೆಕ್ಷನ್‌ ನಿಂದಾಗಿ ಚಲಿಸುತ್ತಿರುವ ಆಬ್ಜೆಕ್ಟ್‌ ಕೆಲವೊಮ್ಮೆ ಅಸ್ಪಷ್ಟವಾಗಿ ಸೆರೆಯಾಗುವುದಿದೆ. ಇದು ಕೂಡಾ ಅಂತಹದ್ದೇ ಒಂದು ಸಾಂದರ್ಭಿಕ ಚಿತ್ರವಾಗಿರಬಹುದು. ಅಥವಾ, ಜನರನ್ನು ಭಯಪಡಿಸಲು ಅಥವಾ ಮೋಜಿಗಾಗಿ ಎಡಿಟ್‌ ಮಾಡಲಾಗಿರುವ ಚಿತ್ರವಾಗಿರಬಹುದು ಎಂದು ಫೊಟೋಗ್ರಫಿ ತಜ್ಞರೊಬ್ಬರು ʼದಿ ಫೆಡೆರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಅದೇನೇ ಆದರೂ, ಉಳ್ಳಾಲ ಬೀಚಿನಲ್ಲಿ ಶೈತಾನನ ಉಪಟಳವಿದೆ ಎಂದು ಈ ಚಿತ್ರವನ್ನು ವ್ಯಾಪಕವಾಗಿ ಹಂಚಲಾಗುತ್ತಿದೆ.‌ ಆದರೆ, ಸ್ಥಳೀಯ ಪ್ರದೇಶದಲ್ಲಿ ಯಾವುದೇ ಅಗೋಚರ ಶಕ್ತಿಯ ಉಪಟಳ ಇದುವರೆಗೂ ಅನುಭವಕ್ಕೆ ಬಂದಿಲ್ಲ ಎಂದು ಉಳ್ಳಾಲ ಮೂಲದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

2023 ಡಿಸೆಂಬರ್ ನಲ್ಲಿ ಸಮುದ್ರ ಕಿನಾರೆಗೆ ವಿಹಾರಕ್ಕೆಂದು ಬಂದಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲಾಗಿ ಮೃತಪಟ್ಟಿದ್ದರು. ಈ ಬಾರಿ ಹಬ್ಬ ಶಾಲಾ ಕಾಲೇಜುಗಳ ಬೇಸಿಗೆ ರಜೆ ವೇಳೆ ಬಂದಿರುವುದರಿಂದ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅವಾಂತರ ತಡೆಯಲು ಯಾರಾದರೂ ಈ ಫ್ಲೆಕ್ಸ್‌ ಹಾಕಿರಬಹುದು, ಅಷ್ಟೇ. ಪಿಶಾಚಿ ಉಪಟಳ ಇರುವ ಬಗ್ಗೆ ಕೆಲವರು ಹೇಳುತ್ತಾರೆ. ಆದರೆ, ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ವ್ಯಕ್ತಿಯೊಬ್ಬರು ʼದಿ ಫೆಡೆರಲ್‌ʼ ಗೆ ಮಾಹಿತಿ ನೀಡಿದ್ದಾರೆ.

Tags:    

Similar News