Mysore MUDA case | ಸರ್ಚ್‌ ವಾರೆಂಟ್‌ ಮಾಹಿತಿ ಸೋರಿಕೆ 8 ಕೋಟಿಗೆ ಡೀಲ್‌; ಆರ್‌ಟಿಐ ಕಾರ್ಯಕರ್ತ ಗಂಭೀರ ಆರೋಪ

ಸರ್ಚ್‌ ವಾರೆಂಟ್‌ ಮಾಹಿತಿ ಸೋರಿಕೆ ಮಾಡುವ ಮೂಲಕ ಲೋಕಾಯುಕ್ತ ಅಧಿಕಾರಿಗಳೇ ಆರೋಪಿ ಸ್ಥಾನದಲ್ಲಿದ್ದಾರೆ ಎಂದು ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರ ಆರೋಪದ ಬೆನ್ನಲ್ಲೇ 8 ಕೋಟಿ ಡೀಲ್‌ ನಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.;

Update: 2024-11-27 06:55 GMT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳಿಂದಲೇ ಸರ್ಚ್‌ ವಾರೆಂಟ್‌ ಮಾಹಿತಿ ಸೋರಿಕೆಗಾಗಿ 8 ಕೋಟಿ ರೂ. ಡೀಲ್‌ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.

ಸರ್ಚ್‌ ವಾರೆಂಟ್‌ ಮಾಹಿತಿ ಸೋರಿಕೆ ಮಾಡುವ ಮೂಲಕ ಲೋಕಾಯುಕ್ತ ಅಧಿಕಾರಿಗಳೇ ಆರೋಪಿ ಸ್ಥಾನದಲ್ಲಿದ್ದಾರೆ ಎಂದು ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರ ಆರೋಪದ ಬೆನ್ನಲ್ಲೇ 8 ಕೋಟಿ ಡೀಲ್‌ ನಡೆದಿರುವ ಬಗ್ಗೆ ಗಂಗರಾಜು ಆರೋಪಿಸಿದ್ದಾರೆ. ಅಲ್ಲದೇ ಡೀಲ್‌ಗೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಇಂದು ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಇದೇ ವೇಳೆ ಲೋಕಾಯುಕ್ತರಿಂದ ಸರ್ಚ್ ವಾರೆಂಟ್‌ ಮಾಹಿತಿ ಸೋರಿಕೆಗೆ ನಡೆದಿರುವ ಡೀಲ್‌ ಕುರಿತಾದ ದಾಖಲೆ ಒದಗಿಸುತ್ತೇನೆ ಎಂದು ಹೇಳಿದ್ದಾರೆ.

ಮೈಸೂರು ಮುಡಾ ಕಚೇರಿಯಲ್ಲಿ ಶೋಧ ನಡೆಸಲು ಜೂ.28 ರಂದು ಲೋಕಾಯುಕ್ತ ಪೊಲೀಸರು ಸರ್ಚ್‌ ವಾರೆಂಟ್ ಪಡೆದಿದ್ದರು. ಆದರೆ, ಯಾವುದೇ ಶೋಧ ನಡೆಸದೇ ಸರ್ಚ್ ವಾರೆಂಟ್ ವಾಪಸ್ ಕೊಟ್ಟಿದ್ದರು. ಇನ್ನು ಸರ್ಚ್ ವಾರೆಂಟ್ ಪಡೆದಿರುವ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್‌ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಮಾಹಿತಿ ನೀಡಿದ್ದರು. ಸುರೇಶ್‌ ಅವರು ಹಿಂದಿನ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್ ಹಾಗೂ ನಟೇಶ್ ಅವರಿಗೆ ಮಾಹಿತಿ ನೀಡಿ, ಹೆಲಿಕಾಪ್ಟರ್‌ನಲ್ಲಿ ಬಂದು ದಾಖಲೆಗಳನ್ನು ಹೊತ್ತೊಯ್ದಿದ್ದರು. ಸರ್ಚ್‌ ವಾರೆಂಟ್‌ ಮಾಹಿತಿ ಸೋರಿಕೆಗಾಗಿ 8 ಕೋಟಿ ರೂ. ಡೀಲ್ ನಡೆದಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಡಿ ಅಧಿಕಾರಿಗಳಿಗೆ ನೀಡಲಾಗುವುದು. ತನಿಖಾ ದೃಷ್ಟಿಯಿಂದ ಆ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ. ರಾಜ್ಯಪಾಲರಿಗೂ ಮಾಹಿತಿ ಸೋರಿಕೆ ಸಂಬಂಧ ದೂರು ನೀಡಿದ್ದೇನೆ ಎಂದು ಗಂಗರಾಜು ತಿಳಿಸಿದ್ದಾರೆ.

ಸಿಎಂ ಅವರದ್ದು 25 ಕೋಟಿ ರೂ.ಅಕ್ರಮ

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು 20 ರಿಂದ 25 ಕೋಟಿ ರೂ. ಅಕ್ರಮ ನಡೆದಿದೆ. ಆದರೆ, ಪ್ರಕರಣದಲ್ಲಿ ಒಟ್ಟಾರೆ 5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಗಂಗರಾಜು ದೂರಿದ್ದಾರೆ.

50:50 ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಖಾತೆ, ಕಂದಾಯ, ಸೆಟಲ್ಮೆಂಟ್ ಡೀಡ್‌ಗಳ ಮೂಲಕ ಕಿಕ್ ಬ್ಯಾಕ್ ಪಡೆಯಲಾಗಿದೆ. ಇದರ ದಾಖಲೆಗಳನ್ನು ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನೀಡಿದ್ದೇನೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು. ಆಗ ಮಾತ್ರ ಸತ್ಯ ಹೊರಬರಲಿದೆ ಎಂದು ಆಗ್ರಹಿಸಿದ್ದಾರೆ.

ಶೋಧ ನಡೆಸದ ಲೋಕಾಯುಕ್ತ

ಮೈಸೂರು ಮುಡಾ ಕಚೇರಿ ಶೋಧಕ್ಕೆ ಸರ್ಚ್ ವಾರಂಟ್ ಪಡೆದರೂ ದಾಳಿ ಮಾಡಿ ಶೋಧ ನಡೆಸದ ಲೋಕಾಯುಕ್ತ ಪೊಲೀಸರ ಕ್ರಮ ಅನುಮಾನಕ್ಕೆ ಕಾರಣವಾಗಿದೆ.

ಮುಡಾ ಕಚೇರಿ ಮೇಲೆ ದಾಳಿಗೆ ಜೂ.28 ರಂದು ಬೆಂಗಳೂರು ಲೋಕಾಯುಕ್ತದಿಂದ ವಾರಂಟ್ ಪಡೆಯಲಾಗಿತ್ತು. ಮೈಸೂರು ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್ ಹೆಸರಿಗೆ ಸರ್ಚ್ ವಾರಂಟ್ ನೀಡಲಾಗಿತ್ತು. ಅಂದಿನ ಲೋಕಾಯುಕ್ತ ಎಸ್ಪಿ ಸಜಿತ್‌ ಅವರು ಮಾಲತೇಶ್‌ ಅವರಿಗೆ ವಾಟಂಟ್‌ ಪ್ರತಿ ನೀಡಿರಲಿಲ್ಲ. ಆದರೆ, ಇದರ ಮಾಹಿತಿ ಪಡೆದ ಮಾಲತೇಶ್ ಸರ್ಚ್‌ ವಾರೆಂಟ್‌ ಜಾರಿಯಾಗಿರುವುದನ್ನು ಬೈರತಿ ಸುರೇಶ್‌ ಗಮನಕ್ಕೆ ತಂದಿದ್ದರು. ಜೂನ್ 29ರಂದು ಮುಡಾ ಕಚೇರಿಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಬಂದು 140 ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸರ್ಚ್‌ ವಾರೆಂಟ್ ಮಾಹಿತಿ ಸೋರಿಕೆ ಸಂಬಂಧ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಕೂಡ ಆರೋಪಿಸಿದ್ದು, ಸಿಬಿಐಗೆ ತನಿಖೆಗೆ ಒತ್ತಾಯಿಸಿದ್ದರು.

ಈ ಮಧ್ಯೆ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಡಿ. 10ಕ್ಕೆ ಮುಂದೂಡಿದೆ. ಅಲ್ಲದೇ ಪ್ರಕರಣ ಸಂಬಂಧ ಮಧ್ಯಂತರ ವರದಿ ನೀಡುವಂತೆ ಮೈಸೂರು ಲೋಕಾಯುಕ್ತರಿಗೂ ಕೋರ್ಟ್‌ ಸೂಚಿಸಿದೆ.

Tags:    

Similar News