School Re-Open| ಶಾಲೆಗಳು ಆರಂಭ: ಕೊರೊನಾ ಆತಂಕದ ಮಧ್ಯೆ ಮುನ್ನೆಚ್ಚರಿಕೆ ಕ್ರಮಕ್ಕೆ ಸರ್ಕಾರ ಸೂಚನೆ
ಸರ್ಕಾರದಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಶಾಲಾ ಆವರಣ, ಕೊಠಡಿ, ಶೌಚಲಯ, ಮೇಲ್ಚಾವಣಿ, ಬಿಸಿಯೂಟ ಪರಿಕರ ಸೇರಿದಂತೆ ಎಲ್ಲವನ್ನೂ ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ.;
ಇಂದಿನಿಂದ ಶಾಲೆಗಳು ಆರಂಭವಾಗಿವೆ.
ರಾಜ್ಯಾದ್ಯಂತ ಗುರುವಾರದಿಂದ ಶಾಲೆಗಳು ಪುನರಾರಂಭಗೊಂಡಿದ್ದು. ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಮಕ್ಕಳ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರವು ವಿವರವಾದ ಸುತ್ತೋಲೆಯನ್ನು ಹೊರಡಿಸಿದೆ. ಇದರನ್ವಯ, ಶಾಲಾ ಆವರಣ, ಕೊಠಡಿಗಳು, ಶೌಚಾಲಯಗಳು, ಮೇಲ್ಚಾವಣಿ ಮತ್ತು ಬಿಸಿಯೂಟದ ಪರಿಕರಗಳು ಸೇರಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನಿರ್ದೇಶನ ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆಗಳು ಹೆಚ್ಚಾಗುತ್ತಿದ್ದು, ಇದು ಮಕ್ಕಳ ಮೇಲೆ ಬೇಗ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಎಲ್ಲಾ ಶಾಲೆಗಳಿಗೆ ಸರ್ಕಾರ ಸೂಚನೆ ನೀಡಿದೆ.
ಶಾಲೆಗಳ ಪುನರಾರಂಭದ ಮೊದಲ ದಿನವಾದ ಗುರುವಾರ, ಎಲ್ಲಾ ಶಾಲೆಗಳಿಗೂ ತಳಿರುತೋರಣ ಮತ್ತು ರಂಗೋಲಿಗಳಿಂದ ಅಲಂಕಾರ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಜಾಗೃತಿ ವಹಿಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ, ಬಿಸಿಯೂಟ ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.
ಸಿಹಿಯೂಟ, ಮೊಟ್ಟೆ ವಿತರಣೆ ಮತ್ತು ಮಾಸ್ಕ್ ಕಡ್ಡಾಯ
ಮಕ್ಕಳು ಖುಷಿಯಿಂದ ಶಾಲೆಗೆ ಬರುವುದರಿಂದ, ಮೊದಲ ದಿನ ಅವರಿಗೆ ಸಿಹಿಯೂಟ ನೀಡಬೇಕು ಮತ್ತು ಇದರ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಕೆಮ್ಮು, ಶೀತ, ಜ್ವರ ಇರುವ ಮಕ್ಕಳಿಗೆ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಶಾಲಾ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮಾಸ್ಕ್ ಧರಿಸಿ ಕಳುಹಿಸಬೇಕು ಎಂದು ಸಲಹೆ ನೀಡಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೂ ಈ ಸಲಹೆಗಳು ಅನ್ವಯವಾಗಲಿದ್ದು, ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಈ ಎಲ್ಲಾ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ಕ್ರಮಗಳು ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡಲಿವೆ ಎಂದು ಸರ್ಕಾರ ಆಶಿಸಿದೆ.