Prof. Muzaffar Assadi | ಸಾಮಾಜಿಕ ಚಿಂತಕ ಪ್ರೊ.ಅಸ್ಸಾದಿ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ

ಪ್ರೊ.ಮುಝಾಫರ್ ನಿಧನಕ್ಕೆ ಸಿ.ಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ತಿಳಿಸಿದ್ದಾರೆ.;

Update: 2025-01-04 05:31 GMT
ಪ್ರೊ.ಮುಝಾಫರ್ ಅಸ್ಸಾದಿ
Click the Play button to listen to article

ಹಿರಿಯ ವಿದ್ವಾಂಸ, ವಿಶ್ಲೇಷಕ ಹಾಗೂ ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ‌ ಕುಲಪತಿ ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ (63) ಅವರು ಅನಾರೋಗ್ಯದಿಂದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರು ಮೂಲತಃ ಉಡುಪಿ ಜಿಲ್ಲೆಯ ಶಿರ್ವ ಗ್ರಾಮದ ನಿವಾಸಿ. ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಹಾಗೂ ಪಿಎಚ್‌ಡಿ, ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ 2022ರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇದಕ್ಕೂ ಮೊದಲು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ, ಮುಖ್ಯಸ್ಥ ಹಾಗೂ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಆಗಿದ್ದರು.

ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ 11 ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಪ್ರಶಸ್ತಿ ಪಡೆದಿದ್ದಾರೆ.

ಸಿ.ಎಂ ಸಿದ್ದರಾಮಯ್ಯ ಸಂತಾಪ 

ಪ್ರೊ.ಮುಝಾಫರ್ ನಿಧನಕ್ಕೆ ಸಿ.ಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಪ್ರೊ.ಅಸ್ಸಾದಿ ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ.

ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್‌ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದ ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರ. ವರ್ಷಗಳಿಂದ ನನ್ನ ಹಿತೈಷಿಯಾಗಿ ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ. ಪ್ರೊ.ಅಸ್ಸಾದಿ ಅವರನ್ನು ಕಳೆದುಕೊಂಡ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Similar News