ಪತಿಯಿಂದಲೇ ಸ್ಯಾಂಡಲ್‌ವುಡ್ ನಟಿ ಭೀಕರ ಕೊಲೆ
ನಟಿ ವಿದ್ಯಾ ಅವರನ್ನು ಪತಿಯೇ ಹತ್ಯೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.;
‘ಭಜರಂಗಿ’, ವೇದ’, ‘ಜೈ ಮಾರುತಿ 800’, ‘ಅಜಿತ್’ ಇನ್ನೂ ಕೆಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದ ನಟಿ ವಿದ್ಯಾ ಅವರನ್ನು ಅವರ ಪತಿಯೇ ಹತ್ಯೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಟಿ ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ವಾದ ವಿವಾದ ನಡೆದಿದ್ದು ವಿಕೋಪಕ್ಕೆ ಹೋಗಿ ವಿದ್ಯಾ ಹತ್ಯೆಯಲ್ಲಿ ಕೊನೆಯಾಗಿದೆ ಎನ್ನಲಾಗಿದೆ.
ಪತ್ನಿ ಮೇಲೆ ಹಲ್ಲೆ ನಡೆಸಿ ಪತಿ ನಂದೀಶ್ ಪರಾರಿಯಾಗಿದ್ದಾನೆ. ವಿದ್ಯಾ, ನಟಿಯಷ್ಟೆ ಅಲ್ಲದೆ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ಮೈಸೂರು ನಗರ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ವಿದ್ಯಾ ಕೆಲಸ ಮಾಡುತ್ತಿದ್ದರು.
ನಟಿ ವಿದ್ಯಾ, 2018ರಲ್ಲಿ ನಂದೀಶ್ ಜತೆಗೆ ವಿವಾಹವಾಗಿದ್ದರು. ಆರಂಭದ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಆಗಾಗ್ಗೆ ಈ ದಂಪತಿ ಜಗಳ ಮಾಡುತ್ತಲೇ ಇದ್ದರು. ವಿಚ್ಛೇದನಕ್ಕೂ ಸಹ ಇವರು ಪ್ರಯತ್ನಿಸಿದ್ದರು ಆದರೆ ಪೋಷಕರು ಬುದ್ಧಿವಾದ ಹೇಳಿ ಮನವೊಲಿಸಿದ್ದರೂ ಅವರಿಬ್ಬರ ನಡುವೆ ಕಲಹ ಮುಂದುವರೆದಿತ್ತು ಎನ್ನಲಾಗಿದೆ. ಹಾಗಾಗಿ ವಿದ್ಯಾ, ಗಂಡನ ಮನೆಯಿರುವ ಮೈಸೂರಿನ ತುರಗನೂರಿನಿಂದ, ತಮ್ಮ ತವರು ಮನೆಯಾದ ಬೆಂಗಳೂರಿನ ಶ್ರೀರಾಮಪುರಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದ್ದಾರೆ.
ಮೇ 20 ರಂದು ಸಹ ನಂದೀಶ್ ಹಾಗೂ ವಿದ್ಯಾ ನಡುವೆ ಫೋನ್ನಲ್ಲಿ ಜಗಳ ನಡೆದಿತ್ತು. ಜಗಳ ತಾರಕಕ್ಕೆ ಹೋಗಿ ವಿದ್ಯಾ ರಾತ್ರೋರಾತ್ರಿ ಶ್ರೀರಾಮಪುರದಿಂದ ಹೊರಟು ಮೈಸೂರಿನ ತುರುಗನೂರಿಗೆ ತಲುಪಿ ಗಂಡನೊಟ್ಟಿಗೆ ಮುಖಾ-ಮುಖಿ ಜಗಳಕ್ಕೆ ನಿಂತಿದ್ದರು. ಅಲ್ಲಿಯೂ ಸಹ ಜಗಳ ತಾರಕಕ್ಕೆ ಹೋದಾಗ ಪತಿ ನಂದೀಶ್, ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆತದ ರಭಸಕ್ಕೆ ವಿದ್ಯಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬಳಿಕ ನಂದೀಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.