ಭ್ರಷ್ಟಾಚಾರ ಆರೋಪ | ಸೂಪರ್ ಸೀಡ್ ಆಗಲಿದೆಯೇ ಕಸಾಪ ; ಸಾಮಾನ್ಯ ಸಭೆ ಮೇಲೆ ಎಲ್ಲರ ಕಣ್ಣು
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭ್ರಷ್ಟಾಚಾರದ ಆರೋಪಗಳು ಪ್ರಬಲವಾಗಿ ಕೇಳಿಬರುತ್ತಿದ್ದು, ಭಾನುವಾರ ನಡೆಯುವ ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಾಮಾನ್ಯ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿಯ ರಕ್ಷಣೆ, ಪ್ರೋತ್ಸಾಹ ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭ್ರಷ್ಟಾಚಾರದ ಆರೋಪಗಳು ಪ್ರಬಲವಾಗಿ ಕೇಳಿಬರುತ್ತಿವೆ. ಈ ಆರೋಪಗಳಿಂದಾಗಿ ಇದೇ ಭಾನುವಾರ (ಅ.5) ನಡೆಯುವ ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಾಮಾನ್ಯ ಸಭೆಯತ್ತ ಕನ್ನಡಿಗರ ಚಿತ್ತ ನೆಟ್ಟಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಅಲ್ಲದೇ, ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡುವಂತಿಲ್ಲ. ಮೊಬೈಲ್‌ಗಳಲ್ಲಿ ಫೋಟೋ ತೆಗೆಯುವಂತಿಲ್ಲ. ವಿಡಿಯೋ ಮಾಡುವಂತಿಲ್ಲ ಎಂದು ಫರ್ಮಾನು ಹೊರಡಿಸಿರುವುದು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಮಹೇಶ್ ಜೋಶಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದ ಸಭೆಯು ತೀವ್ರ ಕೋಲಾಹಲಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಭೆಯ ಮಾಹಿತಿ ನೀಡಿಲ್ಲ
ಸಾಮಾನ್ಯ ಸಭೆಯ ಮಾಹಿತಿಯನ್ನು ಇದುವರೆಗೆ ಸರ್ವ ಸದಸ್ಯರಿಗೆ ನೀಡಿಲ್ಲ. ಇದು ಕಸಾಪದ ವಾರ್ಷಿಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ತಡೆಗಟ್ಟುವ ಹುನ್ನಾರ ಎಂದು ದೂರಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಪರಿಷತ್ ಸದಸ್ಯರು ಲೆಕ್ಕಪತ್ರಗಳು ಮತ್ತು ಆಡಳಿತ ವೈಖರಿ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲೆಂದೇ ವರ್ಷಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಸಹಕಾರಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಸದಸ್ಯರಿಗೆ ಇರುವ ಪರಮೋಚ್ಚ ಹಕ್ಕು. ಹೀಗಿರುವಾಗ ತಮ್ಮ ವಿರುದ್ಧ ಮಾತನಾಡಿದವರನ್ನು ಹೊರಗೆ ದಬ್ಬುವ, ಅದೂ ಕುತ್ತಿಗೆ ಹಿಡಿದು ದಬ್ಬುವ ಬಗ್ಗೆ ಮಹೇಶ ಜೋಶಿಯ ಆಪ್ತ ಬಾಗಲಕೋಟೆಯ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೆರೆ ಮಾತನಾಡಿದ್ದಾರೆ. ಇವರ ವರ್ತನೆಗೂ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರಿಂದ ಸಭೆ ಕುತೂಹಲ ಮೂಡಿಸಿದೆ. ಹೀಗಾಗಿ ಸದಸ್ಯರೆಲ್ಲರೂ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೇಶ್ ಜೋಶಿಯ ಸರ್ವಾಧಿಕಾರಿ ಧೋರಣೆ ಪ್ರಶ್ನಿಸಲು ಮುಂದಾಗಿದ್ದಾರೆ.
ಸೂಪರ್ ಸೀಡ್ ನಡೆದರೆ ಸರ್ಕಾರದ ನಿಯಂತ್ರಣಕ್ಕೆ
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಾಕಷ್ಟು ಭ್ರಷ್ಟಚಾರದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಇದನ್ನು ಸೂಪರ್ ಸೀಡ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಮಹೇಶ್ ಜೋಶಿ ಅವರ ಅವಧಿಯಲ್ಲಿ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕಿಂತ ಮುನ್ನ ಈ ತನಿಖೆ ನಡೆಯಲಿದ್ದು, ಸಹಕಾರ ಇಲಾಖೆಯ ಜಂಟಿ ನಿಬಂಧಕರು ಹಣಕಾಸು ವ್ಯವಹಾರ ಪರಿಶೀಲಿಸುತ್ತಿದ್ದಾರೆ.
ಉಪ ನಿಯಮಗಳ ತಿದ್ದುಪಡಿ, ಪದಾಧಿಕಾರಿಗಳಿಗೆ ಅಕ್ರಮ ನೋಟಿಸ್ ಜಾರಿ, ಸರ್ಕಾರಿ ಅನುದಾನ ಹಾಗೂ ಇತರ ಅನುದಾನಗಳ ದುರ್ಬಳಕೆ,ವಾಹನ ಖರೀದಿ ಮತ್ತು ಮಾರಾಟದಲ್ಲಿ ಅವ್ಯವಹಾರ, ಸಿಸಿಟಿವಿ ಅಳವಡಿಕೆ ಮತ್ತು ಅಗ್ನಿಶಾಮಕ ಯಂತ್ರಗಳ ಖರೀದಿಯಲ್ಲಿ ಲೋಪಗಳು, ಅಧ್ಯಕ್ಷರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಣ ದುರುಪಯೋಗ ಸೇರಿದಂತೆ ಕೆಲವು ಗುರುತರವಾದ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಸರ್ಕಾರ ಸಾಹಿತ್ಯ ಪರಿಷತ್ ಅನ್ನು ಸೂಪರ್ ಸೀಡ್ ಮಾಡಿ ದಿನನಿತ್ಯದ ಕಾರ್ಯನಿರ್ವಾಹಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತಿಹಾಸದಲ್ಲಿಯೇ ಮೊದಲಬಾರಿಗೆ ಕಪ್ಪುಚುಕ್ಕೆ..!
ಒಂದು ವೇಳೆ ಸರ್ಕಾರ ಸೂಪರ್ ಸೀಡ್ ಮಾಡಿದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡಿಗರ ಆಸ್ತಿಯಂತಿರುವ ಸಾಹಿತ್ಯ ಪರಿಷತ್ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದೆ. ಇದು ಒಂದು ರಿತಿಯಲ್ಲಿ ಪರಿಷತ್‌ಗೆ ಕಪ್ಪು ಚುಕ್ಕೆಯದಂತಾಗಲಿದೆ ಎಂಬುದು ಕನ್ನಡ ಸಾಹಿತ್ಯ ಪ್ರೇಮಿಗಳ ಅಭಿಪ್ರಾಯವಾಗಿದೆ. ಒಂದು ಬಾರಿ ಆಡಳಿತಾಧಿಕಾರಿ ನೇಮಕ ಮಾಡಿದರೆ, ಹಾಲಿ ಇರುವ ಸಮಿತಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಸಾಹಿತ್ಯ ಪರಿಷತ್ ಸುಧಾರಣೆಯಾಗಬೇಕು ಎಂದು ಕೆಲವು ಸಾಹಿತಿಗಳು ಒತ್ತಾಯಿಸಿದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಕೆಲವರು ಮಹೇಶ್ ಜೋಶಿ ಅವರ ಧೋರಣೆಯನ್ನು ಖಂಡಿಸಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಮತ್ತು ಡಾ.ಪದ್ಮನಿ ನಾಗರಾಜು ಅವರು ತಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಲವು ತಿದ್ದುಪಡಿ ಮಾಡುವ ನಿರೀಕ್ಷೆ
ಭಾನುವಾರ ನಡೆಯುವ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಮಹೇಶ್ ಜೋಶಿ ತಮಗೆ ಬಂದಂತೆ ಬೈಲಾ ತಿದ್ದುಪಡಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಹೇಶ್ ಜೋಶಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ತಿದ್ದುಪಡಿ ತರಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪರಿಷತ್‌ನಲ್ಲಿಒಮ್ಮೆ ಅಧ್ಯಕ್ಷರಾದವರು ಸತತವಾಗಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬರುವುದಿಲ್ಲ. ಆದರೆ ಬೈಲಾಗೆ ತಿದ್ದುಪಡಿ ತಂದು ಮತ್ತೊಮ್ಮೆ ಅಧ್ಯಕ್ಷರಾಗುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೇ, ಈ ಹಿಂದೆ ಅಧ್ಯಕ್ಷರ ಅವಧಿಯು ಮೂರು ವರ್ಷಗಳ ಕಾಲಾವಕಾಶ ಇತ್ತು. ಮಹೇಶ್ ಜೋಶಿ ಅದನ್ನು ಐದು ವರ್ಷಕ್ಕೆ ಹೆಚ್ಚಳ ಮಾಡಿಕೊಂಡರು. ಅಲ್ಲದೇ, ಸಚಿವ ಸಂಪುಟದ ಸ್ಥಾನಮಾನವನ್ನು ಪಡೆದುಕೊಂಡರು. ಈ ಬಗ್ಗೆಯೂ ಪರಿಷತ್‌ನ ಸದಸ್ಯರಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮೂರನೇ ಬಾರಿಗೆ ಬೈಲಾ ತಿದ್ದುಪಡಿ ತರುತ್ತಿದ್ದು, ಸಾಹಿತ್ಯ ಸಮೇಳನ ಸುಸೂತ್ರವಾಗಿ ನಡೆಯಲು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರು ತಾವೇ ನೇರವಾಗಿ ಅಥವಾ ಮಾರ್ಗಸೂಚಿ ಉಪಸಮಿತಿಯನ್ನು ರಚಿಸಿ, ಮಾರ್ಗಸೂಚಿಗಳನ್ನು ಹೊರಡಿಸಬಹುದಾಗಿದೆ. ಹೀಗೆ ರಚಿಸಿದ ಮಾರ್ಗಸೂಚಿಗಳನ್ನು ಸಮೇಳನ ನಡೆಯುವ ಜಿಲ್ಲೆಯ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.ಈ ಹಿಂದೆ 2022ರಲ್ಲಿ ಪರಿಷತ್ತಿನ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿತ್ತು. 2023ರಲ್ಲಿ ಎರಡನೇ ಬಾರಿ ತಿದ್ದುಪಡಿ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಮಹೇಶ್ ಜೋಶಿ ವಿರುದ್ಧ ಅಸಮಾಧಾನ ಭುಗಿಲೇಳಲು ಕಾರಣ
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಪತ್ರಕರ್ತ ಮತ್ತು ಲೇಖಕ ಜಾಣಗೆರೆ ವೆಂಕಟರಾಮಯ್ಯ ಹಾಗೂ ಲೇಖಕಿ ಡಾ.ವಸುಂಧರಾ ಭೂಪತಿ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರದ್ದುಪಡಿಸಿ ಸಹಕಾರ ಸಂಘಗಳ ಉಪನಿಬಂಧಕರು 2025ರ ಜೂನ್ 27ರಂದು ಆದೇಶ ಹೊರಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿ ಹಾಗೂ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2025ರ ಜೂ. 26 ಹಾಗೂ 30ರಂದು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಎನ್.ಹನುಮೇಗೌಡ ಹಾಗೂ ಇತರರು ನೀಡಿದ ದೂರಿನ ಹಿನ್ನೆಲೆಯಲ್ಲಿ, 2023-24ರಿಂದ ಇಲ್ಲಿವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿರುವ ನೋಟಿಸ್‌ಗಳು, 2023-24ನೇ ಸಾಲಿನಲ್ಲಿ ಪರಿಷತ್ತಿಗೆ ಸಂಗ್ರಹವಾಗಿರುವ ಆದಾಯವನ್ನು ದುರುಪಯೋಗ ಪಡಿಸಿಕೊಂಡಿರುವುದು, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತ್ತರ ವಿಷಯಗಳನ್ನು ಪರಿಶೀಲಿಸಿ, ಸೂಕ್ತ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡಿ, ಜೂ. 30ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶಗಳನ್ನು ರದ್ದುಪಡಿಸಬೇಕು ಎಂದು ಮಹೇಶ್ ಜೋಶಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪರಿಷತ್‌ನ ಸದಸ್ಯರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
ರಾಜೀನಾಮೆ ನೀಡಿ ಹೊರ ಬರಲಾಗಿದೆ
ಪರಿಷತ್‌ನಲ್ಲಿನ ಭ್ರಷ್ಟಾಚಾರ ವ್ಯಾಪಕವಾಗಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ನಿಕಟಪೂರ್ವ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಈ ಹಿಂದೆ ನಾನು ಮತ್ತು ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದೇವೆ. ರಾಜ್ಯಾಧ್ಯಕ್ಷರು ಏಕಪಕ್ಷೀಯವಾಗಿ ತಾವೇ ಮಾತನಾಡಿ, ಕಾರ್ಯಕಾರಿ ಸಮಿತಿಯ ಚುನಾಯಿತ ಜಿಲ್ಲಾಧ್ಯಕ್ಷರಿಗೆ ಹಾಗೂ ಇತರ ಯಾರಿಗೂ ಮಾತನಾಡದಂತೆ ಕಾರ್ಯಕಾರಿ ಸಭೆ ನಡೆಸುತ್ತಿದ್ದ ನಡವಳಿಕೆಗೆ ನಾವು ಪ್ರತ್ಯಕ್ಷ ಸಾಕ್ಷಿಯಾಗಿ, ರಾಜೀನಾಮೆ ನೀಡಿ ಹೊರಬಂದೆವು ಎಂದಿದ್ದಾರೆ.
ಮಂಡ್ಯದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ನಾಡೋಜ ಗೊರುಚ ಅವರು ಒಂದು ಸಭೆಯಲ್ಲಿ ʻಸಭೆ ನಡೆಸುವುದು ಹೀಗಲ್ಲ, ರಾಜ್ಯಾಧ್ಯಕ್ಷರು ಆವೇಶಕ್ಕೆ ಒಳಗಾಗಬಾರದು ಮತ್ತು ಇತರರು ಕೂಡ ಸಹನೆಯಿಂದ ವರ್ತಿಸಬೇಕುʼ ಎಂದು ಮುಖಕ್ಕೆ ರಾಚಿದ ಹಾಗೆ ಹೇಳಿ, ಬೇಸರಗೊಂಡು ಹೊರ ಹೋಗಿದ್ದರು. ಸಭೆಗಳಲ್ಲಿ ರಾಜ್ಯಾಧ್ಯಕ್ಷರ ನಡೆಯನ್ನು ಪ್ರಶ್ನಿಸುತ್ತಿದ್ದ ಕೆಲವು ಜಿಲ್ಲಾಧ್ಯಕ್ಷರಿಗೆ ಇನ್ನಿಲ್ಲದ ಕಿರುಕುಳಗಳನ್ನು ನೀಡುತ್ತಿದ್ದ ಸನ್ನಿವೇಶಗಳಿಗೆ ನಾವು ಸಾಕ್ಷಿಯಾಗಿದ್ದೆವು. ಕಾರ್ಯಕಾರಿ ಸಭೆಯಾಗಲಿ, ಪತ್ರಿಕಾಗೋಷ್ಠಿಯಾಗಲಿ ಹಾಗೂ ಕಾರ್ಯಕ್ರಮಗಳಲ್ಲಿ ಎಲ್ಲ ಕಡೆಯೂ ತಮ್ಮದೆ ಮಾತುಗಳನ್ನು ಇತರರು ಕೇಳಿಸಿಕೊಳ್ಳಬೇಕು ಮತ್ತು ತಮ್ಮ ಮಾತುಗಳೇ ದಾಖಲಾಗಬೇಕು ಎನ್ನುವ ರಾಜ್ಯಾಧ್ಯಕ್ಷರ ನಡೆಯನ್ನು ಅನೇಕ ಬಾರಿ ಪ್ರಶ್ನಿಸಿ ವಿರೋಧಿಸಿದ್ದೆವು. ರಾಜ್ಯಾಧ್ಯಕ್ಷರ ಸರ್ವಾಧಿಕಾರಿ ನಡೆಯನ್ನು ನಾವಿಬ್ಬರು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.