ಶಾಸಕರ ಭ್ರಷ್ಟಾಚಾರದ ವಿರುದ್ಧ ಸವಾಲು ಹಾಕಿದ್ದ ಆರ್‌ಟಿಐ ಕಾರ್ಯಕರ್ತ ನಿಗೂಢ ಸಾವು!
ಕಾಂಗ್ರೆಸ್ ಕಾರ್ಯಕರ್ತರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು, ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿರುವ ವ್ಯಕ್ತಿಯ ನಿಗೂಢ ಸಾವಿನ ಹಿಂದಿನ ಕಾರಣ ಏನು ಎನ್ನುವುದು ಬಯಲಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.;
ದಕ್ಷಿಣಕನ್ನಡದ ಬಂಟ್ವಾಳ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿರುವ ಆರ್ ಟಿಐ ಕಾರ್ಯಕರ್ತರೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬಂಟ್ವಾಳದ ಪದ್ಮನಾಭ ಸಾಮಂತ್ ಎಂಬವರ ಮೃತದೇಹ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಪದ್ಮನಾಭ ಸಾಮಂತ್ ಅವರು ಸ್ಥಳೀಯ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದು, ಈ ಬಗ್ಗೆ ದಾಖಲೆಯನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಬಂಟ್ವಾಳ ಶಾಸಕರ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆಗಳಿಗೂ ಮುಂದಾಳತ್ವ ವಹಿಸಿದ್ದರು.
ಬಂಟ್ವಾಳ ಕ್ಷೇತ್ರದ ಭೂ ಹಗರಣ, ಮರಳು ಮಾಫಿಯಾ, ಅಕ್ರಮ ಸಕ್ರಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಸೇರಿದಂತೆ ವಿವಿಧ ಹಗರಣಗಳನ್ನು ಬಯಲಿಗೆಳೆದಿದ್ದ ಪದ್ಮನಾಭ ಅವರು, ಕಳೆದ ಬಾರಿ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕಳಪೆ ಡಾಂಬರೀಕರಣ ಮಾಡಲಾಗಿದೆ ಎಂದು ವಿಡಿಯೋ ಮಾಡಿ ವೈರಲ್ ಆಗಿದ್ದರು. ಹೀಗಾಗಿ, ಸ್ಥಳೀಯ ಅನೇಕ ಪ್ರಭಾವಿಗಳ ವಿರೋಧವನ್ನು ಕಟ್ಟಿಕೊಂಡಿದ್ದರು ಎಂದು ಪದ್ಮನಾಭ ಅವರ ಆಪ್ತರು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
“ಹಲವು ಬಾರಿ ಬೆದರಿಕೆಯನ್ನೂ ಅವರು ಎದುರಿಸಿದ್ದರು. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಲಾಗಿತ್ತು” ಎಂದು ಪದ್ಮನಾಭ ಅವರ ಆಪ್ತರು ಹೇಳಿದ್ದಾರೆ.
“ಪದ್ಮನಾಭ ಅವರನ್ನು ಸುಮ್ಮನಿರಿಸಲು ಹಲವಾರು ಬಾರಿ ಪ್ರಯತ್ನಗಳನ್ನು ನಡೆಸಲಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರಿಗೆ ಕಿರುಕುಳ ನೀಡಲಾಗಿದೆ. ಪದ್ಮನಾಭ ಅವರು ಪ್ರಭಾವಿಗಳನ್ನು ಎದುರು ಹಾಕಿಕೊಳ್ಳುವಂತಹ ಧೈರ್ಯಶಾಲಿಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ” ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಭ್ರಷ್ಟರಿಗೆ ಸವಾಲು ಹಾಕಿ ಫೇಸ್ಬುಕ್ ಪೋಸ್ಟ್
ಇತ್ತೀಚೆಗೆ (ಮಾ.15) ಶಾಸಕ ರಾಜೇಶ್ ನಾಯ್ಕ್ ಅವರು ಅಕ್ರಮ-ಸಕ್ರಮದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದ ಪದ್ಮನಾಭ ಅವರು, “ಈ ಹೋರಾಟದಲ್ಲಿ ಯಾವುದೇ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ. ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಹಾಗೂ ಸದಸ್ಯರು ಮತ್ತು ಭ್ರಷ್ಟ ಅಧಿಕಾರಿಗಳು ನನ್ನ ಮುಂದಿನ ಸಂವಿಧಾನದ ಕಾನೂನಿನ ಹೋರಾಟಕ್ಕೆ ಉತ್ತರಿಸಲು ತಯಾರಾಗಿರಿ” ಎಂದು ಸವಾಲು ಹಾಕುವ ರೀತಿಯಲ್ಲಿ ಪೋಸ್ಟ್ ಹಾಕಿದ್ದರು.
ಪದ್ಮನಾಭ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾದ ದಿನದ ಮುನ್ನಾದಿವೂ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಪೋಸ್ಟ್ ಮಾಡಿದ್ದು, “ಭ್ರಷ್ಟಾಚಾರಿ ಎಷ್ಟೇ ಪ್ರಭಾವಿಯಾಗಿರಲಿ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಬಂಟ್ವಾಳದ ಭ್ರಷ್ಟಾಚಾರದ ಅಕ್ರಮ- ಸಕ್ರಮದ ಸಮಿತಿ ನಡೆಸಿದ ಭೂ ಮಂಜೂರಾತಿಯಿಂದ ಕಾನೂನು ಉಲ್ಲಂಘನೆಯಾಗಿ ಭ್ರಷ್ಟರ ಪಾಲಾಗಿದ್ದ ಸರ್ಕಾರಿ ಭೂಮಿಯನ್ನು ವಾಪಸ್ ಸರ್ಕಾರಕ್ಕೆ ಒಪ್ಪಿಸಿ ಬಡವರಿಗೆ ಮನೆ ನಿರ್ಮಾಣದ ಕನಸು ಅನುಷ್ಠಾನಗೊಳ್ಳುವ ತನಕ ಹೋರಾಟ” ಎಂದು ಫೇಸ್ಬುಕಿನಲ್ಲಿ ಬರೆದಿದ್ದರು.
ಪದ್ಮನಾಭ ವಿರುದ್ಧವೇ ವಂಚನೆ ದೂರು
ಆದರೆ, ಆ ಪೋಸ್ಟ್ ಹಾಕಿದ ಮರುದಿನ ಪದ್ಮನಾಭ ಅವರ ವಿರುದ್ಧವೇ ವಂಚನೆ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಯುವಕನೊರ್ವನಿಗೆ 1.5 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. “ಈ ದೂರು ಪೊಲೀಸ್ ಠಾಣೆಯಲ್ಲಿ ಇತ್ಯರ್ಥವೂ ಆಗಿದ್ದು, ಒಂದುವರೆ ಲಕ್ಷ ರೂ. ಹಣವನ್ನು ಮರಳಿಸುವುದಾಗಿ ಪದ್ಮನಾಭ ಅವರು ಒಪ್ಪಿಕೊಂಡಿದ್ದರು” ಎಂದು ಗುರುತು ಬಹಿರಂಗಪಡಿಸಲು ಇಚ್ಛಿಸದ ಅವರ ಆಪ್ತರು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ. “ಅಲ್ಲದೆ, ಪದ್ಮನಾಭ ಅವರ ಮೈಮೇಲೆ ಇರುವ ಆಭರಣದ ಮೌಲ್ಯವೇ 3 ಲಕ್ಷ ರೂ.ಗಿಂತ ಅಧಿಕ ಇದೆ. 1.5 ಲಕ್ಷದ ವಿಚಾರಕ್ಕೆಲ್ಲಾ ಅವರು ಆತ್ಮಹತ್ಯೆ ಮಾಡಿಕೊಳ್ಳುವವರು ಅಲ್ಲ. ಈ ಸಾವಿನ ಹಿಂದೆ ಇರುವ ಸತ್ಯಾಸತ್ಯತೆ ಬಯಲಿಗೆ ಬರಬೇಕೆಂದು” ಅವರು ಹೇಳಿದ್ದಾರೆ.
ಶಾಸಕರ ಪ್ರತಿಕ್ರಿಯೆ
ತಮ್ಮ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಹೊರಿಸಿರುವ ಹಾಗೂ ಅದರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದ ಕಾರ್ಯಕರ್ತರೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಬಗ್ಗೆ ʼದಿ ಫೆಡೆರಲ್ ಕರ್ನಾಟಕʼ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, “ಅವರು ಕಳೆದ ಐದಾರು ವರ್ಷಗಳಿಂದ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರದ್ದು ಕೊಲೆಯೋ, ಆತ್ಮಹತ್ಯೆಯೋ ಗೊತ್ತಿಲ್ಲ. ಶಾಸಕರು ಅಂತಾದ ಮೇಲೆ ಆರೋಪಗಳನ್ನು ಮಾಡುವುದು ಸಹಜ. ಅವರ ಸಾವಿನ ಹಿಂದಿನ ಕಾರಣ ಏನು ಅನ್ನುವುದರ ಬಗ್ಗೆ ತನಿಖೆ ನಡೆಯಬೇಕು. ಕೊಲೆ ಆದರೆ, ಅದರ ಹಿಂದಿನ ಉದ್ದೇಶ ಏನು? ಅದರ ಹಿಂದೆ ಯಾರಿದ್ದಾರೆ ಅನ್ನುವುದು ಬಯಲಿಗೆ ಬರಬಬೇಕು. ಒಂದು ವೇಳೆ ಆತ್ಮಹತ್ಯೆ ಆದರೂ ಅದರ ಹಿಂದಿನ ಉದ್ದೇಶ ಬಯಲಿಗೆ ಬರಬೇಕು. ಯಾಕೆಂದರೆ, ಆತ್ಮಹತ್ಯೆ ಮಾಡಿಕೊಳ್ಳಲೂ ಒಂದು ಕಾರಣವಿರಬೇಕಲ್ಲ. ಅದು ಬಯಲಿಗೆ ಬರಬೇಕಿದೆ, ತನಿಖೆ ನಡೆಯಲು ನಾವೂ ಆಗ್ರಹಿಸುತ್ತೇವೆ” ಎಂದು ಹೇಳಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆಗ್ರಹ
ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು, ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿರುವ ವ್ಯಕ್ತಿಯ ನಿಗೂಢ ಸಾವಿನ ಹಿಂದಿನ ಕಾರಣ ಏನು ಅನ್ನವುದು ಬಯಲಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.
ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಎಸ್ ಡಿ ಪಿ ಐ ಬಂಟ್ವಾಳ ಅಧ್ಯಕ್ಷ ಮೂನಿಷ್ ಆಲಿ ಕೂಡಾ ಆಗ್ರಹಿಸಿದ್ದು, “ಬಂಟ್ವಾಳದ ವಾಮದಪದವಿನ ಸಾಮಾಜಿಕ ಹೋರಾಟಗಾರ ಪದ್ಮನಾಭ ಸಾಮಂತ ಆತ್ಮಹತ್ಯೆ ಪ್ರಕರಣ ಸಂಶಯಾಸ್ಪದವಾಗಿದ್ದು. ಬಂಟ್ವಾಳ ಆಶ್ರಯ ಯೋಜನೆ ಭ್ರಷ್ಟಾಚಾರ ವಿಚಾರವಾಗಿ ಈ ಹಿಂದೆ ಒಬ್ಬ ದಕ್ಷ ಮಹಿಳಾ ಅಧಿಕಾರಿಯೊಬ್ಬರನ್ನು ರಾತ್ರೋ ರಾತ್ರಿ ಎತ್ತಂಗಡಿ ಮಾಡಲಾಗಿದೆ. ಇದೀಗ ಈ ಯೋಜನೆಯ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದವನ ನಿಗೂಢ ಸಾವಾಗಿದೆ. ರಾಜ್ಯ ಸರ್ಕಾರ ಆತ್ಮಹತ್ಯೆ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ಆಶ್ರಯ ಯೋಜನೆಯ ಭ್ರಷ್ಟಾಚಾರ ದ ಹಿಂದ ದೊಡ್ಡ ದೊಡ್ಡ ಕುಳಗಳ ಕೈವಾಡವಿದೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವುದರಿಂದ ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.