KIADB SCAM | ಒಂದೇ ಜಾಗಕ್ಕೆ ಎರಡೆರಡು ಬಾರಿ ಪರಿಹಾರ: 72 ಕೋಟಿ ರೂ ಅಕ್ರಮ ಪತ್ತೆ ಮಾಡಿದ ಇ.ಡಿ
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) 2021-22ರಲ್ಲಿ ಒಂದೇ ಜಮೀನಿಗೆ ಎರಡು ಬಾರಿ ಪರಿಹಾರ ನೀಡಿದ ಪ್ರಕರಣಗಳಲ್ಲಿ ಒಟ್ಟು 72 ಕೋಟಿ ರೂ .ಗೂ ಹೆಚ್ಚು ಅಕ್ರಮವಾಗಿದೆ ಜಾರಿ ನಿರ್ದೇಶನಾಲಯ ಹೇಳಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) 2021-22ರಲ್ಲಿ ಒಂದೇ ಜಮೀನಿಗೆ ಎರಡೆರೆಡು ಬಾರಿ ಪರಿಹಾರ ನೀಡಿದ ಪ್ರಕರಣಗಳಲ್ಲಿ ಒಟ್ಟು ರೂ.72 ಕೋಟಿಗಿಂತಲೂ ಹೆಚ್ಚು ಅಕ್ರಮವಾಗಿದೆ. ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯವು(ಇಡಿ) ಹೇಳಿದೆ.
ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಮಂಡಳಿಯು ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ಒದಗಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, 2021-22ನೇ ಆರ್ಥಿಕ ವರ್ಷದಲ್ಲಿ ಹಲವು ಜಮೀನುಗಳಿಗೆ ಎರಡನೇ ಬಾರಿಗೆ ಒಟ್ಟು 19.99 ರೂ ಕೋಟಿ ಪರಿಹಾರ ನೀಡಲಾಗಿತ್ತು. ಈ ಸಂಬಂಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರದ ದಿನಗಳಲ್ಲಿ ಪ್ರಕರಣವು ಸಿಐಡಿಗೆ ವರ್ಗಾವಣೆಯಾಗಿತ್ತು. ದೊಡ್ಡ ಮೊತ್ತದ ಪ್ರಕರಣವಾದ ಕಾರಣ ಜಾರಿ ನಿರ್ದೇಶನಾಲಯವು (ಇ.ಡಿ) ಇಸಿಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಇದೇ ಆಗಸ್ಟ್ 9 ಮತ್ತು 10ರಂದು ರಾಜ್ಯದ 12 ಸ್ಥಳಗಳಲ್ಲಿ ಇಡಿ, ಶೋಧ ಕಾರ್ಯ ನಡೆಸಿತ್ತು.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಇಡಿ, 'ಆರಂಭದಲ್ಲಿ ಅಂದಾಜಿಸಿರುವುದಕ್ಕಿಂತಲೂ ಹಲವು ಪಟ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಪರಿಹಾರ ದೊರೆತಿಲ್ಲ ಎಂದು ನಕಲಿ ದಾಖಲೆ ಸೃಷ್ಟಿಸಿ ರೂ.72 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಸಿದ ಶೋಧ ಕಾರ್ಯದ ವೇಳೆ ಈ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ದೊರೆತಿವೆ' ಎಂದು ಹೇಳಿದೆ.
'ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಎಲ್ಲ ಖಾತೆಗಳ ವಿವರಗಳನ್ನು ಕಲೆಹಾಕಲಾಗುತ್ತಿದೆ. ತನಿಖೆ ಮುಂದುವರಿದಿದೆ' ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.