ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರ ಗುರು ಇನ್ನಿಲ್ಲ.
ಪ್ರತಿಷ್ಠಿತ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರ ಗುರು (68) ಹೃದಯಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.;
ಮೈಸೂರು: ಪ್ರತಿಷ್ಠಿತ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರ ಗುರು (68) ಹೃದಯಘಾತದಿಂದ ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ. ಮಹೇಶ್ ಚಂದ್ರ ಗುರು ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ 7.30 ರ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.
೮೦ ರ ದಶಕದಲ್ಲಿ ಹೈದರಬಾದ್ ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಹುದ್ದೆ ಆರಂಭಿಸಿದ ಪ್ರೊ.ಮಹೇಶ್ ಚಂದ್ರ ಗುರು ಬಳಿಕ ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದರು. ಬಳಿಕ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಮಹೇಶ್ ಚಂದ್ರ ಗುರು ಅವರು 2019 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಡಾ.ಮಹೇಶ್ ಚಂದ್ರಗುರು ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಿದ್ದು, ತಮ್ಮ ಎಕ್ಸ್ ಪೋಸ್ಟ್ ನಲ್ಲಿ ನನಗೆ ಆತ್ಮೀಯರಾಗಿದ್ದ ಮೈಸೂರಿನ ಪ್ರಗತಿಪರ ಚಿಂತಕ ಡಾ.ಮಹೇಶ್ ಚಂದ್ರಗುರು ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.
ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಮಹೇಶ್ ಚಂದ್ರ ಗುರು ಅವರು ತರಗತಿಗಳಿಂದ ಹೊರಗೆ ಕೂಡಾ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು.
ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಡಾ.ಮಹೇಶ್ ಚಂದ್ರ ಗುರು ಎಂದೂ ಮೌನಕ್ಕೆ ಮೊರೆಹೋಗದೆ ಮತ್ತು ಪರಿಣಾಮವನ್ನೂ ಲೆಕ್ಕಿಸದೆ ನೇರವಾಗಿ ಮತ್ತು ನಿಷ್ಠುರವಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು. ಡಾ.ಮಹೇಶ್ ಚಂದ್ರ ಗುರು ಅವರ ನಿಧನದಿಂದ ಸಮಾಜ ಒಬ್ಬ ಚಿಂತನಶೀಲ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಿವೃತ್ತಿ ಬಳಿಕ ಪ್ರಗತಿಪರ ಚಳವಳಿಗಳಲ್ಲಿ ಗಣನೀಯವಾಗಿ ಗುರುತಿಸಿಕೊಂಡಿದ್ದ ಪ್ರೊ.ಮಹೇಶ್ ಚಂದ್ರ ಗುರು ಅವರು ಎಡಪಂಥೀಯ ವಾದವನ್ನು ಪ್ರತಿಪಾದಿಸುತ್ತಿದ್ದರು. ನಾಡ ಹಬ್ಬ ದಸರಾ ವೇಳೆ ಮಹಿಷಾ ದಸರಾ ಆಚರಣೆಗೊಳ್ಳಲು ಇವರ ಪಾತ್ರ ಪ್ರಮುಖವಾದದ್ದು.