ಈಜುಕೊಳದಲ್ಲಿ ಯುವತಿಯರ ಸಾವು | ರೆಸಾರ್ಟ್‌ ಮಾಲೀಕ, ವ್ಯವಸ್ಥಾಪಕನ ಬಂಧನ

ಕಡಿಮೆ ಆಳವಿರುವ ಕಡೆಯಿಂದ ನೀರಿಗೆ ಇಳಿದ ವಿದ್ಯಾರ್ಥಿನಿಯರು ಈಜುಕೊಳಗೆ ಮಧ್ಯಭಾಗಕ್ಕೆ ಹೋದಾಗ ಈಜು ಬಾರದೇ ಒದ್ದಾಡಿ ಮೃತಪಟ್ಟಿದ್ದರು.;

Update: 2024-11-18 06:42 GMT

ಮಂಗಳೂರು ಸಮೀಪದ ಉಲ್ಲಾಳದ ವಾಸ್ಕೋ ರೆಸಾರ್ಟ್ ಈಜುಕೊಳದಲ್ಲಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆಗೆ ಸಂಬಂಧಿಸಿ ಸೋಮವಾರ ಉಲ್ಲಾಳ ಠಾಣೆ ಪೊಲೀಸರು ರೆಸಾರ್ಟ್ ಮಾಲೀಕ ಹಾಗೂ ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ.

ರೆಸಾರ್ಟ್ ಮಾಲೀಕ ಮನೋಹರ್ ವಿ. ಪುತ್ರನ್ ಹಾಗೂ ವ್ಯವಸ್ಥಾಪಕ ಭರತ್ ಬಂಧಿತರು.

ಸೋಮೇಶ್ವರದ ಪೆರಿಪೈಲ್ ಬೆಟ್ಟಪ್ಪಾಡಿ ಕ್ರಾಸ್ನಲ್ಲಿರುವ ಈ ರೆಸಾರ್ಟಿಗೆ ಶನಿವಾರ ಬಂದಿದ್ದ ಮೈಸೂರಿನ ವಿಜಯನಗರ ನಿವಾಸಿ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ, ಕುರುಬರಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ ಹಾಗೂ ರಾಮಾನುಜ ರಸ್ತೆ 11ನೇ ಕ್ರಾಸ್ ನಿವಾಸಿ ಎಂ.ಎನ್. ಶ್ರೀನಿವಾಸ ಅವರ ಪುತ್ರಿ ಪಾರ್ವತಿ ಎಸ್ ಎಂಬುವರು ಅಲ್ಲಿಯೇ ತಂಗಿದ್ದರು.

ಭಾನುವಾರ ಬೆಳಿಗ್ಗೆ ಈಜುಕೊಳದ ಬಳಿ ಮೊಬೈಲ್ ವಿಡಿಯೊ ಆನ್ ಮಾಡಿ, ಮೂವರು ನೀರಿಗೆ ಇಳಿದಿದ್ದರು.

ಕಡಿಮೆ ಆಳವಿರುವ ಕಡೆಯಿಂದ ನೀರಿಗೆ ಇಳಿದ ವಿದ್ಯಾರ್ಥಿನಿಯರು ಈಜುಕೊಳಗೆ ಮಧ್ಯಭಾಗಕ್ಕೆ ಹೋದಾಗ ಈಜು ಬಾರದೇ ಒದ್ದಾಡಿ ಮೃತಪಟ್ಟಿದ್ದರು. ಅವರು ಅಲಾರಾಮ್‌ ಒತ್ತಿ ಸಹಾಯಕ್ಕೆ ಕೋರಿದರೂ ರೆಸಾರ್ಟಿನ ಯಾವ ಸಿಬ್ಬಂದಿಯೂ ಅತ್ತ ಸುಳಿದಿರಲಿಲ್ಲ. ಭಾನುವಾರ ಬೆಳಿಗ್ಗೆ 10-30ರ ಸುಮಾರಿಗೆ ವಿದ್ಯಾರ್ಥಿನಿಯರು ಮೃತಪಟ್ಟಿರುವುದು ಗೊತ್ತಾಗಿತ್ತು.

ಮೈಸೂರಿನ ಜೆಎಸ್ಎಸ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿನಿಯರು ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯೇ ಪೊಲೀಸರು ರೆಸಾರ್ಟ್ ಮಾಲೀಕ ಹಾಗೂ ವ್ಯವಸ್ಥಾಪಕರನ್ನು ವಶಕ್ಕೆ ಪಡೆದಿದ್ದರು.

ಇನ್ನು ರೆಸಾರ್ಟ್ ಈಜುಕೊಳದ ಬಳಿ ಆಳವಿರುವ ಬಗ್ಗೆ ಯಾವುದೇ ನಾಮಫಲಕ ಅಳವಡಿಸಿರಲಿಲ್ಲ. ಜೊತೆಗೆ ರೆಸಾರ್ಟ್ ನಡೆಸಲು ಸೂಕ್ತ ಪರವಾನಗಿ ಕೂಡ ಪಡೆದಿರಲಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ಈ ಕುರಿತಂತೆ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿದ್ಯಾರ್ಥಿನಿಯರ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

Tags:    

Similar News