ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್ ಬಂಧನ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದು, ಈ ಕೇಸ್‌ಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದೆ ಅಂತ ಮಾಹಿತಿ ಇದೆ. ಅದರ ಮೇಲೆ ತನಿಖೆ ಆಗುವವರೆಗೂ ಕೂಡ ಏನು ಹೇಳೋಕಾಗಲ್ಲ, ಅವರು ನೇರವಾಗಿ ಭಾಗಿಯಾಗಿದ್ದಾರಾ ಇಲ್ವಾ? ಯಾವ ಕಾರಣಕ್ಕೆ ಮರ್ಡರ್ ಆಗಿದೆ? ಇವರ ಹೆಸರು ಯಾಕೆ ಬಂದಿದೆ? ಅನ್ನೋದು ತನಿಖೆ ನಂತರ ಗೊತ್ತಾಗುತ್ತೆ. ಈ ಸಂದರ್ಭದಲ್ಲಿ ಬೇರೆ ಏನೂ ಹೇಳಲು ಸಾಧ್ಯವಿಲ್ಲ" ಎಂದು ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
"ತನಿಖೆ ಆದ ಮೇಲೆ ಎಲ್ಲವೂ ಗೊತ್ತಾಗುತ್ತೆ, ಅದಕ್ಕೂ ಮೊದಲು ಏನೂ ಹೇಳಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾ ಕಾಮೆಂಟ್ ಬಗ್ಗೆ ಗೊತ್ತಿಲ್ಲ, ಮೈಸೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮ ಇಲಾಖೆಯ ಸುಪರ್ದಿಯಲ್ಲಿಇಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ. ಮೊದಲು ಅರೆಸ್ಟ್ ಮಾಡಿದ ವ್ಯಕ್ತಿಗಳು ದರ್ಶನ್ ಅವರ ಹೆಸರು ಹೇಳಿದ್ದಾರೆ. ಇದು ಮರ್ಡರ್ ಕೇಸ್ ಆಗಿರೋದ್ರಿಂದ ಸೀರಿಯಸ್ ಆಗಿ ತನಿಖೆ ಮಾಡಬೇಕಾಗುತ್ತೆ. ಹಾಗಾಗಿ ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಪವಿತ್ರಾ ಗೌಡ ಮೇಲೂ ದರ್ಶನ್ ಹಲ್ಲೆ
ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಈಗಾಗಲೇ ಬಂಧಿಸಿದ್ದು, ದರ್ಶನ್ ಆಪ್ತೆ ಪವಿತ್ರ ಗೌಡ ಅವರನ್ನು ಪೊಲೀಸರು ವಿಚಾರಣೆಗೆ ವಶಪಡಿಸಿಕೊಂಡಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ವೊಂದು ಸಿಕ್ಕಿದ್ದು, ರೇಣುಕಾಸ್ವಾಮಿ ಕೊಲೆ ಮಾಡುವ ವೇಳೆ ದರ್ಶನ್ ಹಾಗೂ ಟೀಂ ಮತ್ತು ಪವಿತ್ರಗೌಡ ಒಟ್ಟಿಗೆ ಇದ್ದರು ಎನ್ನಲಾಗಿದೆ.
ತೀವ್ರ ಹಲ್ಲೆಗೊಳಗಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದಾಗ ಕೊಪಗೊಂಡ ದರ್ಶನ್ ‘ನಿನ್ನಿಂದ ಹೀಗೆಲ್ಲಾ ಆಯಿತು’ ಎಂದು ಪಕ್ಕದಲ್ಲೇ ಇದ್ದ ಪವಿತ್ರಾ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಪವಿತ್ರಾಗೆ ಬೆಂಗಳೂರಿನ ಆರ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ (ಜೂ.10) ಪವಿತ್ರಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ.