ಬಾಕಿ ಹಣ ವಿಚಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ; ಆರು ಮಂದಿ ಬಂಧನ
ಉದ್ಯಮಿ ಮನೋಜ್ ಕುಮಾರ್ ಮತ್ತು ಆರೋಪಿಗಳ ನಡುವೆ ಹಣಕಾಸಿನ ವಿವಾದವೇ ಅಪಹರಣಕ್ಕೆ ಕಾರಣವಾಗಿದೆ.;
ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗವು ಆರು ಆರೋಪಿಗಳ ವಿರುದ್ಧ ಅಪಹರಣ ಮತ್ತು ಸುಲಿಗೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ 2.96 ಲಕ್ಷ ರೂ. ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ರೌಡಿ ಶೀಟರ್‌ಗಳಾಗಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜೇಶ್ ಕುಮಾರ್ ಅಲಿಯಾಸ್ ಅಪ್ಪಿ ಅಥವಾ ಜೆಡಿ ಮಾರ ಅಪ್ಪಿ (32), ಶ್ರೀನಿವಾಸ್ ಅಲಿಯಾಸ್ ಬಾಂಬೆ ಸೀನಾ (43), ನವೀನ್ (35), ಲೋಕೇಶ್ ಅಲಿಯಾಸ್ ಲೋಕಿ (34), ಸೋಮಯ್ಯ (31), ಮತ್ತು ಯುಕೇಶ್ (28) ಬಂಧಿತರಾಗಿದ್ದಾರೆ. ಇವರಲ್ಲಿ ನವೀನ್ ಮತ್ತು ಯುಕೇಶ್ ಹೊರತುಪಡಿಸಿ ಉಳಿದ ನಾಲ್ವರು ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್‌ಗಳಾಗಿದ್ದಾರೆ.
ಉದ್ಯಮಿ ಮನೋಜ್ ಕುಮಾರ್ ಮತ್ತು ಆರೋಪಿಗಳ ನಡುವೆ ಹಣಕಾಸಿನ ವಿವಾದವೇ ಅಪಹರಣಕ್ಕೆ ಕಾರಣವಾಗಿದೆ. ಮನೋಜ್, ಕಳೆದ ವರ್ಷ ರಾಜೇಶ್ ಮೂಲಕ ಚಲನಚಿತ್ರ ನಿರ್ದೇಶಕ ನಂದ ಕಿಶೋರ್ ಅವರಿಗೆ 1.2 ಲಕ್ಷ ರೂ. ಸಾಲ ನೀಡಿದ್ದರು. ಸಾಲ ಮರುಪಾವತಿಸುವಂತೆ ಮನೋಜ್ ಒತ್ತಾಯಿಸಿದಾಗ, ರಾಜೇಶ್ ತನ್ನ ಹಣವನ್ನು ಹಿಂದಿರುಗಿಸುವ ಬದಲು ಅವನನ್ನು ಅಪಹರಿಸಲು ಸಂಚು ರೂಪಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ
ಆಗಸ್ಟ್ 26ರಂದು ರಾಜೇಶ್, ಸಾಲದ ಹಣ ಹಿಂತಿರುಗಿಸುವ ನೆಪದಲ್ಲಿ ಮನೋಜ್ ಅವರನ್ನು ಬೆಂಗಳೂರಿನ ಮೋದಿ ಆಸ್ಪತ್ರೆ ರಸ್ತೆ ಬಳಿ ಬರುವಂತೆ ಹೇಳಿದ್ದಾನೆ. ಅಲ್ಲಿಗೆ ಬಂದ ಮನೋಜ್ ಅವರನ್ನು ಆರೋಪಿಗಳು ಬಲವಂತವಾಗಿ ಕಾರಿನಲ್ಲಿ ಕೊಂಡೊಯ್ದಿದ್ದಾರೆ. ನೆಲಮಂಗಲ ಮತ್ತು ದಾಬಸ್ ಪೇಟೆ ಸೇರಿ ಹಲವು ಸ್ಥಳಗಳಲ್ಲಿ ತಿರುಗಾಡಿಸಿದ ಬಳಿಕ, ಅವರನ್ನು ಲಾಡ್ಜ್‌ನಲ್ಲಿ ಒತ್ತೆಯಾಳಾಗಿ ಇರಿಸಿ 2.96 ಲಕ್ಷ ರೂ.ಗಳನ್ನು ಖಾತೆಯಿಂದ ವರ್ಗಾಯಿಸಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಮನೋಜ್ ಅವರನ್ನು ಮರುದಿನ 10 ಲಕ್ಷ ರೂ. ಹೆಚ್ಚುವರಿ ಬೇಡಿಕೆ ಇಟ್ಟ ಬಳಿಕ ಬಿಡುಗಡೆ ಮಾಡಲಾಗಿದೆ. ಬಳಿಕ ಕುಟುಂಬದವರ ಸಲಹೆ ಮೇರೆಗೆ ಮನೋಜ್ ಪೊಲೀಸ್ ದೂರು ದಾಖಲಿಸಿದ್ದಾರೆ.ಈ ಬಗ್ಗೆ ಕೇಂದ್ರ ಅಪರಾಧ ವಿಭಾಗವು ಆರು ಮಂದಿಯ ವಿರುದ್ಧ ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.