Rape Case | ಅಪ್ರಾಪ್ತೆ ಮೇಲೆ ಅತ್ಯಾಚಾರ; ರಾಯಬಾಗದ ಸ್ವಾಮೀಜಿ ಬಂಧನ

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂಡಲಗಿ ಪೊಲೀಸರು ಮೇಖಳಿಯ ರಾಮಮಂದಿರದ ಲೋಕೇಶ್ವರ ಸ್ವಾಮೀಜಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.;

Update: 2025-05-24 08:08 GMT

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆಯ ಲಾಡ್ಜ್‌ವೊಂದರಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬಗ್ಗೆ ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬಾಗಲಕೋಟೆ ಪೊಲೀಸರು ಮೂಡಲಗಿ ಠಾಣೆಗೆ ವರ್ಗಾಯಿಸಿದ್ದರು. ಅದರಂತೆ, ಮೂಡಲಗಿ ಪೊಲೀಸರು ಮೇಖಳಿಯ ರಾಮಮಂದಿರಕ್ಕೆ ಆಗಮಿಸಿ ಲೋಕೇಶ್ವರ ಮಹಾರಾಜ ಸ್ವಾಮೀಜಿ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಮೇ 13 ರಂದು ಮೂಡಲಗಿ ವ್ಯಾಪ್ತಿಯ ಭಕ್ತರ ಮಗಳನ್ನು ಡ್ರಾಪ್ ಕೊಡುವ ನೆಪದಲ್ಲಿ ಅಪಹರಿಸಿ ರಾಯಚೂರಿಗೆ ಕರೆದೋಯ್ದಿದ್ದರು. ಅಲ್ಲಿ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿ, ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ಮೇ 15ರಂದು ರಾತ್ರಿ ಮತ್ತೆ ಬಾಗಲಕೋಟೆಗೆ ಕರೆದುಕೊಂಡು ಹೋಗಿ, ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು.ಅಲ್ಲಿಯೂ ಅಪ್ರಾಪ್ತೆ ಮೇಲೆ ಸ್ವಾಮೀಜಿ ಅತ್ಯಾಚಾರ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಅತ್ಯಾಚಾರದ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. 

ಬಸ್‌ ನಿಲ್ದಾಣದಲ್ಲಿ ಬಿಟ್ಟುಹೋದ ಸ್ವಾಮೀಜಿ

ಬಾಗಲಕೋಟೆಯ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯನ್ನು ಸ್ವಾಮೀಜಿ ಮಹಾಲಿಂಗಪುರದ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಬಸ್‌ ನಿಲ್ದಾಣದಲ್ಲಿ ಯುವತಿಯ ತಂದೆ ಹಾಗೂ ಸಂಬಂಧಿಕರು ಇರುವುದನ್ನು ಕಂಡ ಯುವತಿ, ಅವರ ಬಳಿ ಹೋಗಿ ಸ್ವಾಮೀಜಿಯ ಕೃತ್ಯದ ಬಗ್ಗೆ ವಿಷಯ ತಿಳಿಸಿದ್ದಾರೆ. ಆಗ ಬಾಲಕಿಯ ಪೋಷಕರು ಬಾಗಲಕೋಟೆ ಮಹಿಳಾ ಠಾಣೆಗೆ ದೂರು ನೀಡಿದ್ದರು. 

ಮಠದಲ್ಲಿ ಮಾರಕಾಸ್ತ್ರ ಪತ್ತೆ

ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಗಾರಾಯಣ್ ಭೂಮಿಯಲ್ಲಿ ಲೋಕೇಶ್ವರ ಸ್ವಾಮೀಜಿ ರಾಮಮಂದಿರ ನಿರ್ಮಿಸಿದ್ದು, ಮಠದಿಂದಲೇ ಸ್ವಾಮೀಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

ಪೊಲೀಸರ ದಾಳಿಯ ವೇಳೆ ಮಠದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಕೂಡ ಲೋಕೇಶ್ವರ ಸ್ವಾಮೀಜಿ ವಿರುದ್ಧ ಗ್ರಾಮಸ್ಥರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. 

2019 ರಲ್ಲಿ ಲೋಕೇಶ್ವರ ಸ್ವಾಮೀಜಿ ಮೇಖಳಿ ಗ್ರಾಮಕ್ಕೆ ಬಂದು ಮಠ ಕಟ್ಟಿದರು. 2021 ರಲ್ಲಿ ಮಠದ ವಿರುದ್ಧ ಆರೋಪಗಳು ಕೇಳಿ ಬಂದಾಗ ಗ್ರಾಮಸ್ಥರು ಗಲಾಟೆ ಮಾಡಿದ್ದೆವು. ಆದರೂ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತಿರಲಿಲ್ಲ. ಈಗ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಪೊಲೀಸರು ಬಂಧಿಸಿದ್ದಾರೆ. ಕೂಡಲೇ ಮಠವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

Tags:    

Similar News