Caste Census: ರಾಹುಲ್ ಗಾಂಧಿಯ ಕನಸಿನ ಹಾದಿಯಲ್ಲಿ ಕರ್ನಾಟಕ ಕಾಂಗ್ರೆಸ್‌ನ ಧೈರ್ಯದ ನಡಿಗೆ
ಕಳೆದ ಕೆಲವು ವರ್ಷಗಳಿಂದ ದೇಶದೆಲ್ಲೆಡೆ ಯಾವುದೇ ಚುನಾವಣೆಗಳು ನಡೆದರೂ ರಾಹುಲ್ ಅವರು ಜಾತಿಗಣತಿ ವಿಚಾರ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಸಾಧ್ಯವಿದ್ದ ಕಡೆಯೆಲ್ಲ ಈ ವಿಷಯವನ್ನು ಪುನರುಚ್ಚರಿಸುತ್ತಲೇ ಇದ್ದರು.;
ಎ ಐ ರಚಿತ ಚಿತ್ರ.
"ಜಾತಿ ಗಣತಿ ನನಗೆ ರಾಜಕೀಯ ಅಲ್ಲ, ಅದು ನನ್ನ ಜೀವನದ ಧ್ಯೇಯ. ಜಾತಿ ಗಣತಿಯನ್ನು ನಿಲ್ಲಿಸಲು ಈ ಜಗತ್ತಿನ ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾವು ಮಾಡುವ ಮೊದಲ ಕೆಲಸ ಜಾತಿ ಗಣತಿ. ಇದು ನನ್ನ ಭರವಸೆ."
2024ರ ಏಪ್ರಿಲ್ನಲ್ಲಿ ದೆಹಲಿಯಲ್ಲಿ ನಡೆದ 'ಸಾಮಾಜಿಕ ನ್ಯಾಯ ಸಮ್ಮೇಳನ'ದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವ ಮಾತುಗಳಿವು. ಆದರೆ, ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ರಾಹುಲ್ ನೇತೃತ್ವದ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 100ಕ್ಕೆ ಸಮೀಪಿಸಿತು. ಆದಾಗ್ಯೂ ರಾಹುಲ್ ಅವರ ಜಾತಿ ಗಣತಿ ಮತ್ತು ಸಮುದಾಯಗಳ ಜನಸಂಖ್ಯೆಗೆ ತಕ್ಕುದಾಗಿ ಮೀಸಲಾತಿ ಎಂಬ ದೃಢ ನಿಲುವು ಹಾಗೆಯೇ ಮುಂದುವರಿದಿದೆ.
ಇದೀಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (Karnataka State Commission for Backward Classes) ಸಲ್ಲಿಸಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (Socio-Economic and Educational Survey) ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಏಪ್ರಿಲ್ 11ರಂದು ನಡೆದ ಸಂಪುಟ ಸಭೆಯಲ್ಲಿ ಮಂಡಿಸಿದೆ. ಜಾತಿಗಣತಿ ಎಂದು ಕರೆಯಲಾಗುವ ಈ ವರದಿಯು ಈಗ ರಾಜ್ಯಾದ್ಯಂತ ಸಂಚಲನಕ್ಕೂ ಕಾರಣವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಸ್ವಾಮೀಜಿಗಳು, ಸಂಘಟನೆಗಳು ಹಾಗೂ ಸಚಿವರ ಒತ್ತಡದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯ ವಿಚಾರದಲ್ಲಿ ಮುಂದುವರಿಯಲು ಧೈರ್ಯ ಮಾಡಿದ್ದಾರೆ ಎಂದರೆ ಅದರ ಹಿಂದಿರುವುದು ರಾಹುಲ್ ಗಾಂಧಿಯೇ ಹೊರತು ಬೇರಾರೂ ಅಲ್ಲ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಜಾತಿಗಣತಿ ಮಂಡನೆಯು ನಾಯಕ ರಾಹುಲ್ ಗಾಂಧಿಯವರ ದೀರ್ಘಕಾಲದ ಕನಸಾದ 'ರಾಷ್ಟ್ರವ್ಯಾಪಿ ಜಾತಿ ಗಣತಿಯ' ಹಾದಿಯಲ್ಲಿ ಹಾಗೂ ಅವರು ಈ ಹಿಂದೆಯೇ ಹೇಳಿರುವಂತೆ “ಜಿತ್ನಿ ಆಬಾದಿ, ಉತ್ನಾ ಹಕ್” (ಜನಸಂಖ್ಯೆಗೆ ತಕ್ಕಂತೆ ಹಕ್ಕು) ಎಂಬ ಘೋಷಣೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ. ಏ.11ರಂದು ಸಂಪುಟ ಸಭೆಯಲ್ಲಿ ವರದಿ ಮಂಡನೆ ಮಾಡುವ ವೇಳೆ, “ಇದು ರಾಹುಲ್ ಗಾಂಧಿಯವರ ಸೂಚನೆ” ಎಂಬರ್ಥದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಕೂಡ ಇದಕ್ಕೆ ಪೂರಕವಾಗಿದೆ.
ರಾಹುಲ್ ಗಾಂಧಿಯ ಸತತ ಒತ್ತಡ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಳೆದ ಒಂದು ವರ್ಷದಿಂದ ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ತಮ್ಮ ಪಕ್ಷದ ಪ್ರಮುಖ ರಾಜಕೀಯ ಘೋಷಣೆಯನ್ನಾಗಿ ಮಾಡಿಕೊಂಡಿದ್ದಾರೆ. ಜಾತಿ ಗಣತಿಯನ್ನು ಅವರು 'ದೇಶದ ಎಕ್ಸ್-ರೇ” ಎಂದೂ ಕರೆದಿದ್ದಾರೆ. ದೇಶದ ಸಂಪತ್ತು, ಅವಕಾಶಗಳು ಮತ್ತು ಹಕ್ಕುಗಳ ವಿತರಣೆಯನ್ನು ಸಮಾನಗೊಳಿಸುವ ಗುರಿ ನಮ್ಮದು ಎನ್ನುತ್ತಾ ಬಂದಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ತೆಲಂಗಾಣ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಜಾತಿ ಗಣತಿಯನ್ನು ಜಾರಿಗೊಳಿಸುವಂತೆಯೂ ಅವರು ಸೂಚಿಸಿದ್ದಾರೆ. ಅಹಮದಾಬಾದ್‌ನಲ್ಲಿ ವಾರದ ಹಿಂದೆ ನಡೆದ ಎಐಸಿಸಿ ಮಹಾ ಅಧಿವೇಶನದಲ್ಲೂ ಅವರು ಕರ್ನಾಟಕದ ಜಾತಿ ಗಣತಿ ವರದಿಯನ್ನು ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚಿಸಿದ್ದರು ಎನ್ನಲಾಗಿದೆ.
"ತೆಲಂಗಾಣದಲ್ಲಿ ಜಾರಿಗೊಳಿಸಿದಂತೆ ಜಾತಿಗಣತಿಯನ್ನು ನಾವು ದೇಶಾದ್ಯಂತ ಪುನರಾವರ್ತಿಸುತ್ತೇವೆ" ಎಂದು ರಾಹುಲ್ ಈ ಅಧಿವೇಶನದಲ್ಲೇ ಘೋಷಿಸಿದ್ದರು. ಅವರು ಈ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಈ ವರದಿಯನ್ನು ಒಪ್ಪಿಕೊಳ್ಳಲು ಮತ್ತು ಚರ್ಚಿಸಲು ಸ್ಪಷ್ಟ ಸಂದೇಶ ರವಾನಿಸಿದ್ದರು.
ಕ್ಯಾಬಿನೆಟ್‌ನಲ್ಲಿ ಮಂಡನೆ
ಏಪ್ರಿಲ್ 11, 2025ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ತಯಾರಿಸಲಾದ ಜಾತಿ ಗಣತಿ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಮಂಡಿಸಲಾಗಿದೆ. ಮರು ದಿನವೇ ಅದರ ಮಾಹಿತಿಯೂ ಸೋರಿಕೆಯಾಗಿ ಚರ್ಚೆಗೆ ಗ್ರಾಸವಾಗಿದೆ. ಇದು ಸರ್ಕಾರದ 'ಸಿದ್ಧ' ತಂತ್ರ ಎಂಬ ಮಾತುಗಳೂ ಕೇಳಿಬರುತ್ತಿವೆ. ವರದಿ ಕ್ಯಾಬಿನೆಟ್‌ನಲ್ಲಿ ಮಂಡನೆಯಾದ ದಿನ ಕೆಲವು ಸಚಿವರು ಅದನ್ನು ಓದಲು ಸಮಯ ಕೇಳಿದ್ದರು. ಆದರೆ, ಈಗ ವರದಿ ಸೋರಿಕೆಯಾಗುವ ಮೂಲಕ ಇಡೀ ದೇಶವೇ ಅಂಕಿ- ಅಂಶಗಳನ್ನು ಓದಿ ಚರ್ಚಿಸುವಂತಾಗಿದೆ.
ಪ್ರಭಾವಕ್ಕೂ ಮಣಿಯಲಿಲ್ಲ, ವಿರೋಧಕ್ಕೂ ಬಗ್ಗಲಿಲ್ಲ
ವರದಿಯ ಮಂಡನೆಗೆ ಮುಂಚೆಯೇ, ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಒಕ್ಕಲಿಗರ ಸಂಘ ಮತ್ತು ವೀರಶೈವ ಮಹಾಸಭಾದಂತಹ ಸಂಘಟನೆಗಳು ಈ ಸಮೀಕ್ಷೆಯು ತಮ್ಮ ಜನಸಂಖ್ಯೆಯನ್ನು ಕಡಿಮೆ ತೋರಿಸಿವೆ ಎಂದು ಆರೋಪಿಸಿದ್ದವು. ಅಲ್ಲದೆ, ಕರ್ನಾಟಕದ 23 ಮುಖ್ಯಮಂತ್ರಿಗಳಲ್ಲಿ 16 ಜನ ಈ ಎರಡು ಪ್ರಬಲ ಜಾತಿಗಳ ಪ್ರತಿನಿಧಿಗಳು! ಆದರೆ, ರಾಹುಲ್ ಗಾಂಧಿ ಮಾತ್ರ ಯಾವುದೇ ಒತ್ತಡಕ್ಕೂ ಮಣಿದಂತೆ ಕಾಣಿಸುತ್ತಿಲ್ಲ. ಸರ್ಕಾರವನ್ನೂ ಮಣಿಯಲು ಬಿಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇದೇ ವೇಳೆ, ಸಿದ್ದರಾಮಯ್ಯನವರು ತಮ್ಮ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಮತಬ್ಯಾಂಕ್‌ಭದ್ರ ಮಾಡುವ ನಿಟ್ಟಿನಲ್ಲಿ ಈ ವರದಿಯನ್ನು ಮಂಡಿಸಿ ತಮ್ಮ ರಾಜಕೀಯ ಸ್ಥಾನವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಇದ್ಯಾವುದಕ್ಕೂ ರಾಹುಲ್ ಕಿವಿಯಾಗಿಲ್ಲ.
ರಾಹುಲ್ ಗಾಂಧಿಯ ದೃಷ್ಟಿಕೋನವೇನು?
ಜಾತಿ ಗಣತಿಯನ್ನು ಕೇವಲ ಜನಸಂಖ್ಯೆಯ ಲೆಕ್ಕಾಚಾರವಾಗಿ ಪರಿಗಣಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹಲವು ಬಾರಿ ಹೇಳಿದ್ದಾರೆ. ಈ ಅಂಕಿ ಅಂಶಗಳು ನೀತಿ ರೂಪಿಸುವ ಒಂದು ಅಳತೆಗೋಲು ಎಂದೂ ಅವರು ಹೇಳಿದ್ದಾರೆ. “ದೇಶದ 90% ಜನರು ಸಮಾಜದ ಮುಖ್ಯವಾಹಿನಿಯಿಂದ ಹೊರಗಿದ್ದು, ಜಾತಿ ಗಣತಿಯ ಮೂಲಕ ದಲಿತ, ಒಬಿಸಿ, ಆದಿವಾಸಿಗಳು ಈ ಆಡಳಿತ ಮತ್ತು ನೀತಿ ನಿರೂಪಣೆಯಲ್ಲಿ ಭಾಗವಹಿಸುವಂತಾಗಬೇಕು. ಸಂವಿಧಾನವು ಕೇವಲ ಶೇಕಡಾ 10ರಷ್ಟು ಜನರಿಗೆ ಸೇರಿದ್ದಲ್ಲ. ಅದು ಎಲ್ಲರ ಸ್ವತ್ತು. ಹೀಗಾಗಿ ಜಾತಿ ಗಣತಿಯಿಂದ ಶೇಕಡಾ 90ರಷ್ಟು ಜನರಿಗೆ ಸಮಪಾಲು ಒದಗಿಸಬಹುದು,” ಎಂದು ಅವರು ವಾದಿಸುತ್ತಲೇ ಇದ್ದಾರೆ.
ಕರ್ನಾಟಕ ಸರ್ಕಾರದ ಈ ನಿರ್ಧಾರವು ರಾಷ್ಟ್ರವ್ಯಾಪಿ ಜಾತಿಗಣತಿಯ ಕನಸನ್ನು ಕಾಣುತ್ತಿರುವ ರಾಹುಲ್ ಗಾಂಧಿಯವರಿಗೆ ಒಂದು ಮಹತ್ವದ ಗೆಲುವು. ಆದರೆ, ಈ ಕನಸು ಸಾಕಾರಗೊಳಿಸಲು ತಮ್ಮ ಪಕ್ಷದೊಳಗಿನ ಸಾಮರಸ್ಯ, ಸಾಮಾಜಿಕ ಸಮತೋಲನ ಮತ್ತು ಆಡಳಿತಾತ್ಮಕ ಸಾಮರ್ಥ್ಯ ಕುಂದದಂತೆ ನೋಡಿಕೊಳ್ಳಬೇಕಾದ ಸವಾಲೂ ಅವರ ಮುಂದಿದೆ.
ಇತರ ರಾಜ್ಯಗಳಿಗೂ ಮಾದರಿ
ಕರ್ನಾಟಕದ ಜಾತಿಗಣತಿಯು ಭಾರತದ ಇತರ ರಾಜ್ಯಗಳಿಗೆ ಒಂದು ಮಾದರಿಯಾಗಿದೆ ಎಂಬುದು ವಿಶೇಷ. ಕೆಲವು ರಾಜ್ಯಗಳು ಈಗಾಗಲೇ ತಮ್ಮದೇ ಆದ ಜಾತಿಗಣತಿಯನ್ನು ನಡೆಸಿದ್ದು ಅವುಗಳಿಗೆ ಕರ್ನಾಟಕವೇ ಪ್ರೇರಣೆ. 2023ರಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಸರ್ಕಾರ ಕೂಡ ಜಾತಿಗಣತಿಯ ವರದಿಯನ್ನು ಪ್ರಕಟಿಸಿತ್ತು. ಇದು ದೇಶದ ಮೊದಲ ಸಾರ್ವಜನಿಕ ಜಾತಿಗಣತಿ ವರದಿಯಾಯಿತು. ಈ ಸಮೀಕ್ಷೆಯು 215 ಜಾತಿಗಳನ್ನು ಒಳಗೊಂಡಿತ್ತು ಮತ್ತು ಒಬಿಸಿ, ದಲಿತ ಮತ್ತು ಆದಿವಾಸಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ದಾಖಲಿಸಿತು. ಕರ್ನಾಟಕದ ಸಮೀಕ್ಷೆಯಂತೆ, ಬಿಹಾರದ ಗಣತಿಯೂ ಸರ್ಕಾರದ ನೀತಿಗಳಿಗೆ ದಿಕ್ಸೂಚಿಯಾಯಿತು.
ಅದರ ಬಳಿಕ, ತೆಲಂಗಾಣವು 2024ರಲ್ಲಿ ಜಾತಿಗಣತಿಯನ್ನು ಯಶಸ್ವಿಯಾಗಿ ನಡೆಸಿ, ರಾಜ್ಯದ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ದಾಖಲಿಸಿತು. ಕರ್ನಾಟಕದ ಸಮೀಕ್ಷೆಯಿಂದ ಪ್ರೇರಿತವಾದ ಈ ಕ್ರಮವು, ರಾಜ್ಯದ ಮೀಸಲಾತಿ ವ್ಯವಸ್ಥೆಯನ್ನು ಪರಿಷ್ಕರಿಸಲು ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರ 2023ರಲ್ಲಿ ಜಾತಿಗಣತಿ ಆರಂಭಿಸಿತು. ಇದು ಹಿಂದುಳಿದ ಜಾತಿಗಳ ಜೀವನೋಪಾಯ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ನೆರವಾಯಿತು. ಕರ್ನಾಟಕದ ಸಮೀಕ್ಷೆಯ ವಿಧಾನವನ್ನು ಒಡಿಶಾ ಕೂಡ ಕೆಲವು ಭಾಗಗಳಲ್ಲಿ ಅನುಸರಿಸಿತ್ತು.
ರಾಹುಲ್ ಕಾರ್ಯತಂತ್ರವೇನು?
ಒಟ್ಟಿನಲ್ಲಿ ಈ ಜಾತಿಗಣತಿಯ ಹಿಂದಿನ ಸೂತ್ರಧಾರ ರಾಹುಲ್ ಗಾಂಧಿಯೇ ಆಗಿದ್ದಾರೆ ಎನ್ನುವುದು ಸ್ಪಷ್ಟ. ಕಳೆದ ಕೆಲವು ವರ್ಷಗಳಿಂದ ದೇಶದೆಲ್ಲೆಡೆ ಯಾವುದೇ ಚುನಾವಣೆಗಳು ನಡೆದರೂ ರಾಹುಲ್ ಅವರು ಜಾತಿಗಣತಿ ವಿಚಾರ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಸಾಧ್ಯವಿದ್ದ ಕಡೆಯೆಲ್ಲ ಈ ವಿಷಯವನ್ನು ಪುನರುಚ್ಚರಿಸುತ್ತಲೇ ಇದ್ದರು. ಅಷ್ಟೇ ಅಲ್ಲ, ದೇಶದಲ್ಲಿ ಮೀಸಲಾತಿಗಿರುವ ಶೇ.50ರ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದೂ ಅವರು ಒತ್ತಾಯಿಸುತ್ತಿದ್ದಾರೆ. ಇದೆಲ್ಲವೂ ಪಕ್ಷಕ್ಕೆ ಪ್ಲಸ್ ಆಗಿ ಪರಿಣಮಿಸುತ್ತದೋ, ಮೈನಸ್ ಆಗುತ್ತದೋ ಎಂಬುದನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ರಾಹುಲ್ ಅವರ ಈ “ಜಾತಿ” ತಂತ್ರಗಾರಿಕೆಯ ಹಿಂದೆ ದೀರ್ಘಕಾಲದ ರಾಜಕೀಯ ದಾಳ ಅಡಗಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.