Guided Tour | ಪ್ರವಾಸಿಗರೇ, ವಿಧಾನಸೌಧದ ಒಳಗೂ ಬನ್ನಿ! ಸರ್ಕಾರದಿಂದಲೇ ಗೈಡೆಡ್ ಟೂರ್
ವಿಧಾನಸೌಧ ಪರಂಪರೆ, ಕಟ್ಟಡ ಶೈಲಿ, ಅಳವಡಿಸಿದ ತಂತ್ರಜ್ಞಾನ, ಮುಖ್ಯ ಗೋಪುರದ ಮೇಲ್ಭಾಗದ ಚಿತ್ತಾರಗಳ ಮಧ್ಯೆ ಇರುವಅಶೋಕಸ್ತಂಭ, ಇಂಡೋ ಇಸ್ಲಾಮಿಕ್ ಶೈಲಿ, ಹೀಗೆ ಎಲ್ಲಾ ವಿವರಗಳನ್ನು ಪ್ರವಾಸೋದ್ಯಮ ಇಲಾಖೆಯ ಗೈಡ್, ಶುಲ್ಕ ತೆತ್ತು ಬರುವ ಪ್ರವಾಸಿಗರಿಗೆ ಮನದಟ್ಟು ಮಾಡಲಿದ್ದಾನೆ!;
ಸಂಜೆ ವೇಳೆಯ ಲೈಟಿಂಗ್ನಲ್ಲಿ ಕಂಗೊಳಿಸುತ್ತಿರುವ ವಿಧಾನಸೌಧ (ಎಕ್ಸ್ನಿಂದ ಪಡೆದ ಚಿತ್ರ)
ನಾಡಿನ ಪಾರಂಪರಿಕ ಕಟ್ಟಡ ಹಾಗೂ ಶಕ್ತಿಕೇಂದ್ರ ವಿಧಾನಸೌಧದ ಪರಂಪರೆ, ಇತಿಹಾಸ ಹಾಗೂ ಶೈಲಿಯನ್ನು ನೋಡಲು ಬರುವ ಪ್ರವಾಸಿಗರಿಗೆ ಶುಲ್ಕ ತೆತ್ತು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.
ಸಾರ್ವತ್ರಿಕ ರಜಾ ದಿನಗಳಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಗೈಡೆಡ್ (Guided Tour) ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಾರಿಗೆ ತರಲು ಷರತ್ತಬದ್ಧ ಮಂಜೂರಾತಿಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಗೈಡೆಡ್ ಟೂರ್ ಮತ್ತು ಶುಲ್ಕ ನಿಗದಿ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸದ್ಯದಲ್ಲೇ ಪ್ರಕಟಣೆ ಹೊರಡಿಸಲಿದೆ. ಆದರೆ, ಪ್ರಜಾಪ್ರಭುತ್ವದ ದೇವಾಲಯವಾದ ವಿಧಾನಸೌಧ ವೀಕ್ಷಣೆಗೆ ಗೈಡೆಡ್ ಟೂರ್ ಮೂಲಕ ಅವಕಾಶ ಸೃಷ್ಟಿಸಿರುವುದು ಒಳ್ಳೆಯ ನಿರ್ಧಾರವಾಗಿದ್ದರೂ, ಶುಲ್ಕ ನಿಗದಿಪಡಿಸಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಅಪಸ್ವರ ಕೇಳಿಬಂದಿದೆ.
ವಿಧಾನಸೌಧ, ಬೆಂಗಳೂರು ನಗರದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡುವ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರು ವಿಧಾನಸೌಧಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಪ್ರತಿ ಪ್ರವಾಸಿಗರು ಕಟ್ಟಡದ ಹೊರಭಾಗದಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದು, ಛಾಯಾ ಚಿತ್ರ ತೆಗೆದುಕೊಳ್ಳುತ್ತಾರೆ. ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕಟ್ಟಡದ ಪಾರಂಪರಿಕತೆ, ಇತಿಹಾಸ, ಹಾಗೂ ಮಹತ್ವ ತಿಳಿಸುವ ಮೂಲಕ ಅದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ದೆಹಲಿಯ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಕಟ್ಟಡಗಳಿಗೆ ಏರ್ಪಡಿಸಿರುವಂತೆ ವಿಧಾನಸೌಧಕ್ಕೂ ಗೈಡೆಡ್ ಟೂರ್ ಏರ್ಪಡಿಸಿದಲ್ಲಿ ಪ್ರವಾಸಿಗರ ಮನಸೆಳೆಯಬಹುದಾಗಿದ್ದು, ಈ ಸಂಬಂಧ ವಿಧಾನಸೌಧಕ್ಕೆ ಗೈಡೆಡ್ ಟೂರ್ ವ್ಯವಸ್ಥೆ ಕಲ್ಪಿಸಿಕೊಡಲು ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿತ್ತು.
ಈ ಪ್ರಸ್ತಾಪವನ್ನು ಅಂಗೀಕರಿಸಿರುವ ಸರ್ಕಾರ, ಗೈಡೆಡ್ ಟೂರ್ ವ್ಯವಸ್ಥೆ ಜಾರಿಗೊಳಿಸಲು ಆದೇಶ ನೀಡಿದೆ. "ವಿಧಾನಸೌಧಕ್ಕೆ ಪ್ರಸ್ತುತ ಶಾಶ್ವತ ದೀಪಾಲಂಕಾರ ವವ್ಯಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಇದರಿಂದ ಕಟ್ಟಡದ ಸೌಂದರ್ಯವು ಹೆಚ್ಚುವುದರ ಮೂಲಕ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು,'' ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.
ವಿಧಾನಸೌಧ ವಿಕ್ಷಣೆಗೆ ಆಗಮಿಸಿಸುವ ಪ್ರವಾಸಿಗರನ್ನು ತಲಾ ೩೦ ಮಂದಿಯಂತೆ ವಿಂಗಡಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸುವುದು, ಪ್ರತಿ ತಂಡಗಳ ಮೇಲ್ವಿಚಾರಣೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಅಧಿಕಾರಿಗಳನ್ನು (tourist officer) ನೇಮಿಸಬೇಕು, ಪ್ರವಾಸಿಗರು ಆನ್‌ಲೈನ್ ಮೂಲಕ ಟಿಕೆಟ್ ಪಡೆಯಲು ಪ್ರವಾಸೋದ್ಯಮ ಇಲಾಖೆ ತಂತ್ರಾಂಶ ಅಭಿವೃದ್ಧಿಪಡಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರವು ಜನಸ್ನೇಹಿಯಾಗಿರತಕ್ಕದ್ದು ಹಾಗೂ ವಸೂಲಿ ಅದರಲ್ಲಿ ನಿರ್ದಿಷ್ಟ ಪ್ರಮಾಣವನ್ನು ಪ್ರವಾಸೋದ್ಯಮ ಇಲಾಖೆ ಜಮಾ ಮಾಡಬೇಕು ಎಂದು ಅದೇಶದಲ್ಲಿ ಹೇಳಲಾಗಿದೆ. ವಿಧಾನಸೌಧ ಭದ್ರತೆ ವಿಭಾಗದ ಉಪ ಪೊಲೀಸ್ ಆಯುಕ್ತರು ಭದ್ರತೆಯ ಮೇಲ್ವಿಚಾರಣೆ ಮಾಡಲಿದ್ದಾರೆ. ವೀಕ್ಷಣೆಗೆ ಅನುಕೂಲ ಆಗುವ ರೀತಿಯಲ್ಲಿ ರೂಟ್ ಮ್ಯಾಪ್ ಸಿದ್ಧಗೊಳ್ಳಲಿದ್ದು ಅದಕ್ಕೆ ತಕ್ಕದಾಗಿ ಮಾತ್ರ ಸಂಚರಿಸಬೇಕಾಗುತ್ತದೆ.
ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹಾಗೂ ವಿವರಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ (ಕಾರ್ಯಕಾರಿ) ಹಾಗೂ ವಿಧಾನಸೌಧದ ಭದ್ರತಾ ವಿಭಾಗಕ್ಕೆ ಆಯಾದಿನವೇ ಸಲ್ಲಿಸಬೇಕಾಗುತ್ತದೆ. ಪ್ರವಾಸಿಗರಿಗೆ ಆನ್‌ಲೈನ್ ಮೂಲಕ ಟಿಕೆಟ್ ವಿತರಣೆಯಾಗಲಿದ್ದು, ಅದಕ್ಕಾಗಿ ಆ್ಯಪ್ ಶೀಘ್ರ ಬಿಡುಗಡೆಯಾಗಲಿದೆ.
ಪ್ರವಾಸಿಗರು ಯಾವ ರೀತಿಯಲ್ಲಿ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು, ಪಾಲಿಸಬೇಕಾದ ನಿಯಮಗಳು ಇತ್ಯಾದಿಗಳನ್ನು ಆದೇಶಪ್ರತಿಯಲ್ಲಿ ವಿವರಿಸಲಾಗಿದ್ದು, ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಯದುಕುಮಾರ್ ಆದೇಶ ಹೊರಡಿಸಿದ್ದಾರೆ.
ಯಾವಾಗ ಜಾರಿಗೆ?
ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಶುಲ್ಕ ಮತ್ತು ಪ್ರವೇಶ ಮಾರ್ಗಸೂಚಿಗಳು ಶೀಘ್ರದಲ್ಲೇ ಪ್ರಕಟವಾಗಲಿದೆ. ಸರ್ಕಾರವು ಈ ಯೋಜನೆಯನ್ನು 2025ರ ಮಧ್ಯಭಾಗದ ವೇಳೆಗೆ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭವಾಗಲಿದ್ದು, ಶೀಘ್ರವೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಉಭಯ ಸದನಗಳು ನಡೆಯುವ ಶಕ್ತಿಕೇಂದ್ರ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಳಿತದ ಅವಧಿಯಲ್ಲಿ ರಚನೆಗೊಂಡ ಈ ಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಶಂಕುಸ್ಥಾಪನೆ ಮಾಡಿದ್ದರು. 1952ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾಗಿದ್ದವು. 5000ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ. ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದರು. ಇದರ ವಾಸ್ತುಶಿಲ್ಪವನ್ನು, ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ. ಇನ್ನು ಕೆಲವರು ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ.
ಆದೇಶ ಪ್ರತಿ ಇಲ್ಲಿದೆ.