ರಾಜಕೀಯ ಜಟಾಪಟಿಗೆ ಕಾರಣವಾದ ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಪ್ರಸ್ತಾಪ
ಶಿವಾಜಿ ನಗರದಲ್ಲಿರುವ ಚರ್ಚ್ ಶಿವಾಜಿಯಷ್ಟೇ ಹಳೆಯದು. ಹಾಗಾಗಿ ಚರ್ಚ್ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದು ಸರಿಯಾಗಿದೆ" ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.;
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್
ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿಸ್ ಬೆಸಿಲಿಕಾ ಚರ್ಚ್ ಹೆಸರು ನಾಮಕರಣ ಮಾಡುವ ವಿಚಾರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್ ಆಗಿರುವ ಸೇಂಟ್ ಮೇರಿಸ್ ಬೆಸಿಲಿಕಾ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ನಾಮಕರಣ ಮಾಡಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಆದರೆ, ಇದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯ ಪ್ರವೇಶಿಸಿದ್ದು, ಶಿವಾಜಿನಗರದ ಹೆಸರು ಬದಲಿಸದಂತೆ ಆಗ್ರಹಿಸಿದ್ದಾರೆ. ಹಾಗಾಗಿ, ಇದು ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, “ಶಿವಾಜಿ ನಗರದಲ್ಲಿರುವ ಚರ್ಚ್ ಶಿವಾಜಿಯಷ್ಟೇ ಹಳೆಯದು. ಹಾಗಾಗಿ ಚರ್ಚ್ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದು ಸರಿಯಾಗಿದೆ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಶಿವಾಜಿಗೆ ಮಾಡಿದಷ್ಟು ಅವಮಾನವನ್ನು ಬೇರೆ ಯಾರೂ ಮಾಡಿಲ್ಲ. ಮಹಾರಾಷ್ಟ್ರದ ವಿಚಾರಗಳನ್ನು ಅವರು ನೋಡಿಕೊಳ್ಳಲಿ. ಕರ್ನಾಟಕದ ವಿಚಾರಗಳಿಗೆ ಅವರು ಮೂಗು ತೂರಿಸುವುದು ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಕರಾವಳಿ ಭಾಗವನ್ನು ಬಿಜೆಪಿಯು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಿತ್ತು. ಆದರೆ, ಸಿಎಂ ದಿಟ್ಟ ಅಧಿಕಾರಿಗಳನ್ನು ನಿಯೋಜಿಸಿದ ನಂತರ ಪರಿಸ್ಥಿತಿ ಬದಲಾಗಿದೆ. ಈಗ ಯಾರೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿಲ್ಲ. ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯವರ ಧೋರಣೆ ಟೀಕಿಸಿದ ಹರಿಪ್ರಸಾದ್ ಅವರು, ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಅವರಿಗೆ ಧರ್ಮದ ಮೇಲೆ ನಂಬಿಕೆ ಇದ್ದರೆ ತಮ್ಮ ಮಕ್ಕಳನ್ನೇ ಹೋರಾಟಕ್ಕೆ ಮುಂದೆ ತಳ್ಳಲಿ. ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿಯವರು ನಿರುದ್ಯೋಗಿಗಳು, ಅದಕ್ಕಾಗಿ ಮೈಸೂರು ಭಾಗಕ್ಕೆ ಬಂದು ಹಣ ಕೊಟ್ಟು ಜನರನ್ನು ಹೋರಾಟಕ್ಕೆ ಕರೆಯಿಸುತ್ತಿದ್ದಾರೆ. ನೇಪಾಳಕ್ಕೆ ಬಂದಿರುವ ಪರಿಸ್ಥಿತಿ ರಾಜ್ಯಕ್ಕೂ ಬರಬಹುದು, ಕೇಂದ್ರ ಸರ್ಕಾರಕ್ಕೆ ಬರಬಹುದು ಎಂದು ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ವಾದವೇನು?
ಕರ್ನಾಟಕದ ಮೆಟ್ರೋ, ಬಸ್ ನಿಲ್ದಾಣ ಅಥವಾ ಇನ್ಯಾವುದೋ ನಿಲ್ದಾಣಕ್ಕೆ ಇಟ್ಟಿರುವ ದಾರ್ಶನಿಕರ ಹೆಸರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದಲಾಯಿಸಲು ಹೊರಟಿದೆ. ಶಿವಾಜಿ ಮಹಾರಾಜರ ಹೆಸರಿನಲ್ಲಿರುವ ಪ್ರದೇಶದಲ್ಲಿ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿಸ್ ಬೆಸಿಲಿಕಾ ಹೆಸರಿಡಲು ನಮ್ಮ ವಿರೋಧವಿದೆ. ಸಿದ್ದರಾಮಯ್ಯನವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ದೇವೇಂದ್ರ ಫಡ್ನವೀಸ್ ವ್ಯಂಗ್ಯವಾಡಿದ್ದರು.