ವಕ್ಫ್‌ ಆಸ್ತಿ ರಾಷ್ಟ್ರೀಕರಣಕ್ಕೆ ಒತ್ತಾಯ | ಶಾಸಕ ಯತ್ನಾಳ್‌ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಉತ್ತರ

ವಕ್ಫ್ ಮಂಡಳಿಯು ರೈತರು, ಮಠ, ದೇವಸ್ಥಾನದ ಭೂಮಿಗೆ ವಕ್ಫ್‌ ಆಸ್ತಿ ನೋಟಿಸ್‌ ನೀಡಿದ್ದ ಹಿನ್ನೆಲೆ ಹಾಗೂ ರಾಜ್ಯವ್ಯಾಪಿ ವಿವಾದ ವಿಸ್ತರಿಸಿದ ಕಾರಣ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅ.30 ರಂದು ಪತ್ರ ಬರೆದಿದ್ದರು.

Update: 2024-11-20 13:20 GMT

ವಕ್ಫ್ ಆಸ್ತಿ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಪ್ರಧಾನಿ ಕಚೇರಿ ಪ್ರತಿಕ್ರಿಯಿಸಿದೆ. 

ಪ್ರಧಾನಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿ ಅರವಿಂದ್‌ ಶ್ರೀವಾಸ್ತವ್‌ ಅವರ ಯತ್ನಾಳ್‌ಗೆ ಪತ್ರ ಬರೆದಿದ್ದು, ನೀವು ಬರೆದ ಪತ್ರ ಕಚೇರಿಗೆ ತಲುಪಿದೆ. ಪ್ರಧಾನಿಯವರಿಗೆ ನಿಮ್ಮ ಪತ್ರ ತಲುಪಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ವಕ್ಫ್ ಮಂಡಳಿಯು ರೈತರು, ಮಠ, ದೇವಸ್ಥಾನದ ಭೂಮಿಗೆ ವಕ್ಫ್‌ ಆಸ್ತಿ ನೋಟಿಸ್‌ ನೀಡಿದ್ದ ಹಿನ್ನೆಲೆ ಹಾಗೂ ರಾಜ್ಯವ್ಯಾಪಿ ವಿವಾದ ವಿಸ್ತರಿಸಿದ ಕಾರಣ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅ.30 ರಂದು ಪತ್ರ ಬರೆದಿದ್ದರು. 

ವಕ್ಫ್‌ ಮಂಡಳಿ ನೀಡಿರುವ ನೋಟಿಸ್‌ ಸಂವಿಧಾನದ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ. ಪ್ರಸಕ್ತ ವಕ್ಫ್ ಕಾಯ್ದೆಯಿಂದಾಗಿ ಕೃಷಿ ಭೂಮಿ, ಐತಿಹಾಸಿಕ ಸ್ಥಳ, ಹಾಗೂ ಸ್ವಾತಂತ್ರ್ಯ ಪೂರ್ವದ ಆಸ್ತಿಗಳು ಕಾನೂನುಬಾಹಿರವಾಗಿ ಒತ್ತುವರಿಯಾಗಲಿವೆ. ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ನಿವೇದಿಸಿಕೊಂಡಿದ್ದರು.  


ವಕ್ಫ್ ಆಸ್ತಿಗಳ ರಾಷ್ಟ್ರೀಕರಣದಿಂದ ಪಾರದರ್ಶಕತೆ ಜತೆಗೆ ಅರ್ಹ ಭೂಮಾಲೀಕರ ಭೂಮಿಯ ಹಕ್ಕು ಸಿಕ್ಕಂತಾಗುತ್ತದೆ. ಯಾವುದೇ ಜಾತಿ, ಧರ್ಮಾತೀತವಾಗಿ  ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರ ನಿರ್ಮಿಸಲು ಸಹಕಾರಿಯಾಗಲಿದೆ. ಹೀಗಾಗಿ ದೇಶದ ನಾಗರಿಕ ಹಕ್ಕನ್ನು ರಕ್ಷಿಸಲು ಕೂಡಲೇ ವಕ್ಫ್ ಆಸ್ತಿಗಳ ನಿರ್ವಹಣೆಗೆ ನೀತಿ ರೂಪಿಸುವಂತೆ ಕೋರಿದ್ದರು. 

ವಕ್ಫ್ ಕಾನೂನಿನಂತೆ ಹಿಂದೂ, ಜೈನ್, ಸಿಖ್ ಮುಂತಾದ ಸಮುದಾಯಗಳಲ್ಲಿ ಪ್ರತ್ಯೇಕ ಕಾನೂನು ಇಲ್ಲ. ವಕ್ಫ್ ಕಾಯ್ದೆ ಜಾತ್ಯತೀತತೆ, ಏಕತೆ, ಸಮಗ್ರತೆಗೆ ವಿರುದ್ಧವಾಗಿದೆ. ಯಾವುದೇ ಆಸ್ತಿ ದಾನ ಮಾಡಿದರೆ ಅದು ವಕ್ಫ್ ಆಸ್ತಿಯಾಗಲಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್‌ ಅಸ್ತ್ರವನ್ನಾಗಿ ಮಾಡಿಕೊಂಡಿದೆ.  ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿಯ ವಿರಕ್ತ ಮಠಕ್ಕೆ 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ದಾನ ನೀಡಿದ್ದ ಆಸ್ತಿಯನ್ನೂ ಈಗ ವಕ್ಫ್‌ ಆಸ್ತಿ ಎಂದು ಹೇಳುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು.

Tags:    

Similar News