ಹೆಸರು, ಉದ್ದು, ಶೇಂಗಾ ತಕ್ಷಣ ಖರೀದಿಗೆ ಕೇಂದ್ರಕ್ಕೆ ಸಚಿವ ಚಲುವರಾಯಸ್ವಾಮಿ ಒತ್ತಾಯ

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ ಚಲುವರಾಯಸ್ವಾಮಿ, ರಾಜ್ಯದ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಸಮ್ಮೇಳನದ ಗಮನಕ್ಕೆ ತಂದರು.;

Update: 2025-09-16 14:08 GMT

ಕೃಷಿ ಸಚಿವ ಚಲುವರಾಯಸ್ವಾಮಿ

Click the Play button to listen to article

ರಾಜ್ಯದಲ್ಲಿ ಹೆಸರುಕಾಳು, ಉದ್ದು, ಸೋಯಾಬೀನ್, ಸೂರ್ಯಕಾಂತಿ ಮತ್ತು ಶೇಂಗಾ ಬೆಳೆಗಳ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ (MSP) ಕುಸಿದಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಬೆಳೆಗಳನ್ನು ತಕ್ಷಣವೇ ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ಖರೀದಿಸಲು ಅನುಮೋದನೆ ನೀಡಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯೋಜಿಸಿದ್ದ 'ರಾಷ್ಟ್ರೀಯ ರಬಿ ಅಭಿಯಾನ ಸಮ್ಮೇಳನ'ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ ಚಲುವರಾಯಸ್ವಾಮಿ, ರಾಜ್ಯದ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಸಮ್ಮೇಳನದ ಗಮನಕ್ಕೆ ತಂದರು. ಕರ್ನಾಟಕದ ರೈತರು ಯಾಂತ್ರೀಕೃತ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದು, ಕೃಷಿ ಯಾಂತ್ರೀಕರಣದ ಉಪ ಅಭಿಯಾನ (SMAM) ಯೋಜನೆಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ 2025-26ನೇ ಸಾಲಿಗೆ ರಾಜ್ಯಕ್ಕೆ ಹೆಚ್ಚುವರಿಯಾಗಿ 200 ಕೋಟಿ ರೂಪಾಯಿ ಅನುದಾನ ಒದಗಿಸಬೇಕೆಂದು ಅವರು ಕೋರಿದರು.

ಏಪ್ರಿಲ್‌ನಿಂದ ಸೆಪ್ಟೆಂಬರ್ 2025ರ ಅವಧಿಗೆ ರಾಜ್ಯಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಇನ್ನೂ ಬಾಕಿ ಇದೆ. ದಯವಿಟ್ಟು ಆದಷ್ಟು ಬೇಗ ಇದನ್ನು ಪೂರೈಸಲು ಕ್ರಮ ಕೈಗೊಳ್ಳಿ," ಎಂದು ಅವರು ಒತ್ತಾಯಿಸಿದರು.

ಮಂಡ್ಯ ಕೃಷಿ ವಿವಿಗೆ ಮಾನ್ಯತೆ

"ಮಂಡ್ಯದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ನಿಂದ ಔಪಚಾರಿಕ ಮಾನ್ಯತೆ ಮತ್ತು ಅಗತ್ಯ ಅನುದಾನ ನೀಡಬೇಕು. ಅಲ್ಲದೆ, ಬೆಂಗಳೂರು ಕೃಷಿ ವಿವಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳನ್ನು (KVK) ಮಂಡ್ಯ ವಿವಿಗೆ ವರ್ಗಾಯಿಸಬೇಕು," ಎಂದು ಅವರು ಕೋರಿದರು.

ರೈತರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಗಳಿಗೆ ಹೆಚ್ಚಿನ ಮಹತ್ವ ನೀಡಿ, ಅಗತ್ಯವಿರುವ ಹೆಚ್ಚುವರಿ ನಿಧಿಯನ್ನು ಮಂಜೂರು ಮಾಡುವಂತೆಯೂ ಚಲುವರಾಯಸ್ವಾಮಿ ಮನವಿ ಮಾಡಿದರು.

"ಕಳೆದ ಹಲವು ವರ್ಷಗಳಿಂದ ರಾಜ್ಯಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಇದೇ ರೀತಿ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು. ನಮ್ಮ ರಾಜ್ಯದ ರೈತರ ಹಿತ ಕಾಪಾಡುವ ಈ ನಿಟ್ಟಿನಲ್ಲಿ ಕೇಂದ್ರದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ," ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಕೇಂದ್ರ ಕೃಷಿ ರಾಜ್ಯ ಸಚಿವ ಭಗೀರಥ ಚೌಧರಿ ಹಾಗೂ ವಿವಿಧ ರಾಜ್ಯಗಳ ಕೃಷಿ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

Tags:    

Similar News