ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 6ನೇ ಆರೋಪಿ ಶರೀಫ್ ಬಂಧನ
ಮಹಮ್ಮದ್ ಶರೀಫ್ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ಅವರ ತಂಡದಲ್ಲಿ ಇದ್ದ ಎನ್ನಲಾಗಿದೆ. ಜೊತೆಗೆ ಈತ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನೂ ಆಗಿದ್ದು, ಈತನ ಪತ್ತೆಗಾಗಿ ಎನ್ಐಎ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ಆರೋಪಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್(55) ಬಂಧಿತ ಆರೋಪಿ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನದಲ್ಲಿ ಆತನನ್ನು ಬಂಧಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈನಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆರೋಪಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿಯ ಬಂಧನವಾಗಿದ್ದು ಈ ಮೂಲಕ ಬಂಧಿತರ ಸಂಖ್ಯೆ 20ಕ್ಕೆ ಏರಿದೆ.
ಮಹಮ್ಮದ್ ಶರೀಫ್ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ಅವರ ತಂಡದಲ್ಲಿ ಇದ್ದ ಎನ್ನಲಾಗಿದೆ. ಜೊತೆಗೆ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನೂ ಈತ ಆಗಿದ್ದು, ಈತನ ಪತ್ತೆಗಾಗಿ ಎನ್ಐಎ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಏನಿದು ಪ್ರಕರಣ?
2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಕೊಲೆ ನಡೆದಿತ್ತು.
ತಮ್ಮ ಕೋಳಿ ಅಂಗಡಿ ಮುಚ್ಚಿ ತೆರಳುವ ವೇಳೆ ಪ್ರವೀಣ್ ನೆಟ್ಟಾರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಹಿಂದೂ ಮುಖಂಡನ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಪ್ರಕರಣ ರಾಜಕೀಕರಣಗೊಂಡು ರಾಜ್ಯಾದ್ಯಾಂತ ದೊಡ್ಡಪಟ್ಟದ ಸದ್ದು ಮಾಡಿತ್ತು. ಅದರ ಗಂಭೀರತೆ ಅರಿತ ಅಂದಿನ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಈವರೆಗೆ ಒಟ್ಟು 19 ಜನರನ್ನು ಬಂಧಿಸಿತ್ತು.