ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್‌ಐಟಿ ತನಿಖೆ ದಿಕ್ಕುತಪ್ಪುತ್ತಿದೆ: ಬಸವರಾಜ ಬೊಮ್ಮಾಯಿ
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.;
ʻಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕುʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ʻಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾರೂ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ, ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ನೀಡಿದವರನ್ನೇ ಬಂಧಿಸಲಾಗುತ್ತಿದೆ. ಎಸ್ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದ್ದು, ಸಮರ್ಪಕ ತನಿಖೆಗೆ ಸಿಬಿಐಗೆ ಪ್ರಕರಣ ಹಸ್ತಾಂತರ ಮಾಡಬೇಕುʼ ಎಂದು ಒತ್ತಾಯಿಸಿದರು.
ʻಎಸ್ಐಟಿ ಅಧಿಕಾರಿಗಳು ಅಪರಾಧಿಗಳನ್ನು ಬಂಧಿಸುತ್ತಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ, ಸಿಬಿಐಗೆ ಒಪ್ಪಿಸಬೇಕು. ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯೂ ನಡೆಯಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲರ ತನಿಖೆಯನ್ನೂ ಮಾಡಬೇಕು. ಇದೇ ಕಾರಣಕ್ಕೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಕೇಳುತ್ತಿದ್ದೇವೆʼ ಎಂದರು.
ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಹಲವರು ಆಕಾಂಕ್ಷಿಗಳು ಇದ್ದರು. ಟಿಕೆಟ್ ಕೈತಪ್ಪಿದಾಗ ಸಹಜವಾಗಿ ಬೇಸರ ಆಗುತ್ತದೆ. ಎಲ್ಲವೂ ಸರಿ ಹೋಗುತ್ತದೆ. ಈಗಾಗಲೇ ಮೈತ್ರಿ ಬಗ್ಗೆ ವರಿಷ್ಠರು ಯಾವ ರೀತಿ ತೀರ್ಮಾನ ಮಾಡಿದ್ದಾರೋ ಅದೇ ಮುಂದುವರಿಯಲಿದೆ ಎಂದರು.
ಎಸ್.ಎಂ ಕೃಷ್ಣ ಆರೋಗ್ಯ ವಿಚಾರಿಸಿದ ಬೊಮ್ಮಾಯಿ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಆರೋಗ್ಯವನ್ನು ಮಾಜಿ ಸಿಎಂ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ ವಿಚಾರಿಸಿದರು. ʻಎಸ್.ಎಂ ಕೃಷ್ಣ ಅವರ ಆರೋಗ್ಯ ಎರಡು ದಿನಗಳಿಂದ ಕ್ಷೀಣಿಸಿದೆ. ಅವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆʼ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.