ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮ, ಕೈಮಗ್ಗ ಅಭಿವೃದ್ಧಿ ನಿಗಮ ವಿಲೀನಕ್ಕೆ ಚಿಂತನೆ

ನೇಕಾರರು ರಾಜ್ಯದಲ್ಲಿ 40 ಸಾವಿರ ಜನ ಇದ್ದರು. ಈಗ 20 ಸಾವಿರಕ್ಕೆ ಬಂದಿದೆ. ಈಗ ಮತ್ತೊಮ್ಮೆ ಕೈಮಗ್ಗ ನೇಕಾರರ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ.;

Update: 2025-06-20 13:49 GMT

ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮ ಎರಡನ್ನೂ ವಿಲೀನಗೊಳಿಸಿ ಏಕ ನಿಗಮ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ನೇಕಾರ ಸಮುದಾಯ ತೀವ್ರ ಸಂಕಷ್ಟದಲ್ಲಿದ್ದು, ಎರಡರೆಡು ನಿಗಮಗಳಿಂದ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಿರುವುದು ಮನಗಂಡು ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. 

ಈ ಹಿಂದೆ ಹತ್ತಿ, ರೇಷ್ಮೆ, ಉಣ್ಣೆ ಕೈಮಗ್ಗ ನೇಕಾರರು ರಾಜ್ಯದಲ್ಲಿ 40 ಸಾವಿರ ಜನ ಇದ್ದರು. ಈಗ 20 ಸಾವಿರಕ್ಕೆ ಬಂದಿದೆ. ಈಗ ಮತ್ತೊಮ್ಮೆ ಕೈಮಗ್ಗ ನೇಕಾರರ  ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರಕಟಿಸಿದ್ದಾರೆ. 

ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ಯುಗದಲ್ಲಿ ಪಾರಂಪರಿಕ ಉದ್ಯೋಗವನ್ನೂ ಉಳಿಸಿ ಬೆಳೆಸುವ ಅಗತ್ಯವಿದೆ.  ಸಾಂಪ್ರದಾಯಿಕ ನೇಕಾರಿಕೆಗೆ ಸರ್ಕಾರ ಉತ್ತೇಜನ ನೀಡಲಾಗುವುದು. ಔದ್ಯೋಗಿಕ ಬೆಳವಣಿಗೆ ಮತ್ತು ವೈಜ್ಞಾನಿಕ ಬೆಳವಣಿಗೆ ಮುಖ್ಯವಾದರೂ ಪ್ರಕೃತಿ ಸಂರಕ್ಷಣೆಯೊಂದಿಗೆ ಈ ಚಟುವಟಿಕೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಹೆಗ್ಗೋಡಿನ ಚರಕ ಸಂಸ್ಥೆ ಸಾಂಪ್ರದಾಯಿಕ ನೇಕಾರಿಕೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದು, ಸಂಸ್ಥೆಗೆ ಸರ್ಕಾರ ಅಗತ್ಯ ನೆರವು ಸಹಕಾರ ನೀಡಲು ಬದ್ಧವಿದೆ ಎಂದು ಹೇಳಿದರು.

ಕೈಮಗ್ಗದ ಬಟ್ಟೆಗಳನ್ನು ಸರ್ಕಾರದ ಇಲಾಖೆಗಳು ಖರೀದಿಸಬೇಕೆಂಬ ನಿಯಮ ಇದೆ. ಆದರೆ, ಕೆಲವು ಇಲಾಖೆ ಅಧಿಕಾರಿಗಳ ಹಾಗೂ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಇದಕ್ಕೆ ಚಾಲನೆ ಸಿಕ್ಕಿಲ್ಲ. ಇವರಿಗೆ ಮನವರಿಕೆ ಮಾಡುವ ಕೆಲಸ ನಡೆದಿದೆ. ಈ ಹಿಂದೆ ನರ್ಬಾಡ್ ನೇಕಾರ ಸಮುದಾಯಕ್ಕೆ ಹೆಚ್ಚಿನ‌ ಅನುದಾನ ನೀಡುತ್ತಿತ್ತು. ಈಗ ಅದು ಕಡೆಗಣಿಸಿದೆ. ನಬಾರ್ಡ್‌ ಕೂಡ ವಾಣಿಜ್ಯ ಬ್ಯಾಂಕುಗಳ ಸ್ವರೂಪ ಪಡೆದುಕೊಳ್ಳತೊಡಗಿದೆ. ಕೃಷಿಗೆ ನೀಡುತ್ತಿದ್ದ ನೆರವಿನ ಪ್ರಮಾಣವನ್ನೂ ಕಡಿಮೆ ಮಾಡಿದೆ. ಇದು ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಭಾರತ ದೇಶ ಹತ್ತಿ ಕೈಮಗ್ಗದಲ್ಲಿ ಅತ್ಯಂತ ಪ್ರಖ್ಯಾತಿ ಹೊಂದಿದ್ದು, ಬ್ರಿಟಿಷರ ಕಾಲದಲ್ಲೇ ಗರಿಷ್ಠ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ಸಾಂಪ್ರದಾಯಕ ನೇಕಾರಿಕೆ ಸಂಕಷ್ಟದಲ್ಲಿದೆ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಚರಕ ಸಂಸ್ಥೆ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದರು. 

Tags:    

Similar News