ರಸ್ತೆಗುಂಡಿ ರಾಷ್ಟ್ರೀಯ ಸಮಸ್ಯೆ, ಕರ್ನಾಟಕವನ್ನು ಮಾತ್ರ ದೂಷಿಸಬೇಡಿ: ಡಿ.ಕೆ. ಶಿವಕುಮಾರ್
ಬಿಹಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಳೆ ಇದ್ದರೂ ನಾವು ಗುಂಡಿಗಳನ್ನು ಮುಚ್ಚುತ್ತಿದ್ದೇವೆ" ಎಂದರು
ರಸ್ತೆ ಗುಂಡಿಗಳ ಸಮಸ್ಯೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಇದು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ದೇಶವನ್ನು ಕಾಡುತ್ತಿರುವ ರಾಷ್ಟ್ರೀಯ ಸಮಸ್ಯೆ. ಆದರೆ, ಕೇವಲ ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಇದೆಯೆಂಬಂತೆ ಮಾಧ್ಯಮಗಳಲ್ಲಿ ಬಿಂಬಿಸುವುದು ಸರಿಯಲ್ಲ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್, ರಸ್ತೆಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ ಹೊರ ವರ್ತುಲ ರಸ್ತೆಯಲ್ಲಿರುವ (ORR) ಬೆಳ್ಳಂದೂರಿನ ಕಳಪೆ ರಸ್ತೆ ಹಾಗೂ ಸಂಚಾರ ಸಮಸ್ಯೆಯಿಂದಾಗಿ 'ಬ್ಲ್ಯಾಕ್‌ಬಕ್' ಎಂಬ ಆನ್‌ಲೈನ್ ಟ್ರಕ್ಕಿಂಗ್ ಸಂಸ್ಥೆಯು ಸ್ಥಳಾಂತರಗೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಮತ್ತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರಂತಹ ಉದ್ಯಮ ಕ್ಷೇತ್ರದ ಗಣ್ಯರು ಸರ್ಕಾರದ ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಳೆ ಇದ್ದರೂ ನಾವು ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಬೆಂಗಳೂರಿನ ಐದು ಕಾರ್ಪೊರೇಷನ್‌ಗಳ ವ್ಯಾಪ್ತಿಯಲ್ಲಿ ಪ್ರತಿದಿನ ಸಾವಿರಾರು ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ," ಎಂದರು
"ನಾನು ದೆಹಲಿಗೆ ಹೋಗಿದ್ದೆ, ಅಲ್ಲಿನ ರಸ್ತೆಗಳನ್ನು ನೋಡಿದ್ದೇನೆ. ಪ್ರಧಾನಮಂತ್ರಿ ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ ಎಂದು ದಯವಿಟ್ಟು ಅಲ್ಲಿನ ನಿಮ್ಮ ವರದಿಗಾರರನ್ನು ಕೇಳಿ. ಈ ಸಮಸ್ಯೆ ಎಲ್ಲೆಡೆ ಇದೆ, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಆದರೆ, ಇದು ಕೇವಲ ಕರ್ನಾಟಕದ ಸಮಸ್ಯೆ ಎಂಬಂತೆ ಬಿಂಬಿಸುವುದು ಸರಿಯಲ್ಲ," ಎಂದು ಅವರು ಪುನರುಚ್ಚರಿಸಿದರು
ಬಿಜೆಪಿ ವಿರುದ್ಧ ವಾಗ್ದಾಳಿ
ಬಿಜೆಪಿ ವಿರುದ್ಧ ಹರಿಹಾಯ್ದ ಶಿವಕುಮಾರ್, "ಅವರು (ಬಿಜೆಪಿ) ಅಧಿಕಾರದಲ್ಲಿದ್ದಾಗ ರಸ್ತೆಗಳನ್ನು ನಿರ್ವಹಣೆ ಮಾಡಲಿಲ್ಲ. ಈಗ ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಸ್ತೆಗಳನ್ನು ಸರಿಯಾಗಿ ನಿರ್ವಹಿಸಿದ್ದರೆ, ಇಂದು ಇಂತಹ ಪರಿಸ್ಥಿತಿ ಏಕೆ ಬರುತ್ತಿತ್ತು? ಅವರು ಮಾಡಲಿಲ್ಲ, ನಾವು ನಮ್ಮ ಕರ್ತವ್ಯವನ್ನು ಮಾಡುತ್ತೇವೆ," ಎಂದು ಹೇಳಿದರು.
ಇದೇ ವೇಳೆ, ರಾಜ್ಯಾದ್ಯಂತ ರಸ್ತೆಗಳ ದುಸ್ಥಿತಿಯನ್ನು ಖಂಡಿಸಿ, ಬೆಂಗಳೂರಿನಲ್ಲಿ ಸೆಪ್ಟೆಂಬರ್ 24 ರಂದು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 24 ರಂದು ಪಾಟ್ನಾದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಭಾಗವಹಿಸಲಿದ್ದಾರೆ.