ಮತದಾರರು ಎಚ್ಚೆತ್ತುಕೊಳ್ಳದೇ ಇದ್ದರೆ ದೇಶದ ಭವಿಷ್ಯ ಊಹಿಸಲಾಗದು: ಪರಕಾಲ ಪ್ರಭಾಕರ್

ಬಡವರಿಗೆ ಐದು ಕೆ.ಜಿ. ಉಚಿತ ಅಕ್ಕಿ ಕೊಟ್ಟು, ಐದು ವಿಮಾನ ನಿಲ್ದಾಣಗಳನ್ನು ಸ್ನೇಹಿತರಿಗೆ ನೀಡುವುದೇ ಪ್ರಧಾನಿಯವರ ದೊಡ್ಡ ಆರ್ಥಿಕ ನೀತಿಯಾಗಿದೆ.

Update: 2024-04-20 10:20 GMT
ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್
Click the Play button to listen to article

ಬೆಂಗಳೂರು: 'ಬಡವರಿಗೆ ಐದು ಕೆ.ಜಿ. ಉಚಿತ ಅಕ್ಕಿ ಕೊಟ್ಟು, ದೇಶದ ಐದು ವಿಮಾನ ನಿಲ್ದಾಣಗಳನ್ನು ತಮ್ಮ ಮಿತ್ರರಿಗೆ ನೀಡುವುದೇ ಪ್ರಧಾನಿಯವರ ದೊಡ್ಡ ಆರ್ಥಿಕ ನೀತಿಯಾಗಿದೆʼʼ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.

ಶುಕ್ರವಾರ ( ಏಪ್ರಿಲ್‌ 19) ನಡೆದ ಅವರು, 'ಸಮುದಾಯದ ಹಾದಿಯಲ್ಲಿ' ಸಂಘಟನೆಯು 2024ರ ಲೋಕಸಭಾ ಚುನಾವಣೆ ಪ್ರಚಲಿತ ರಾಷ್ಟ್ರೀಯ ವಿದ್ಯಮಾನಗಳ ಕುರಿತು 'ದೇಶದ ದನಿ' ಉಪನ್ಯಾಸ ಹಾಗೂ ಕರ್ನಾಟಕದ 28 ಸಂಸದರ 'ರಿಪೋರ್ಟ್ ಕಾರ್ಡ್‌' ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಗತ್ಯವಸ್ತುಗಳ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಬೀದಿಪಾಲು ಮಾಡಿದೆ. ಹಸಿವಿನಿಂದ ಜನರು ಕಂಗಾಲಾಗಿದ್ದಾರೆ. ಜನರ ಕಷ್ಟದ ಬಗ್ಗೆ ಕೇಳುವ ಮನಸ್ಥಿತಿ ದೇಶವನ್ನು ಆಳುವ ನಾಯಕರಿಗೆ ಇಲ್ಲ. ಹಸಿವಿನ ಸೂಚ್ಯಂಕದಲ್ಲಿ ಭಾರತ 142 ಸ್ಥಾನದಲ್ಲಿದ್ದರೂ ದೇಶದಲ್ಲಿ ಒಬ್ಬರೂ ಹಸಿವಿನಿಂದ ಬಳಲುತ್ತಿಲ್ಲವೆಂದು ಪ್ರಧಾನಿ ಮೋದಿ ಅವರ ಸಂಪುಟದ ಸಚಿವರೇ ಹೇಳುತ್ತಾರೆ. ಹಸಿವಿನ ಸಮಸ್ಯೆ ಇಲ್ಲದ ಮೇಲೆ 83 ಕೋಟಿ ಜನರಿಗೆ ಐದು ಕೆ.ಜಿ. ಆಹಾರ ಧಾನ್ಯ ಪೂರೈಸುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಶೇ 40ರಷ್ಟು ಸಂಪತ್ತು ಶೇ 1ರಷ್ಟು ಮಂದಿಯ ಕೈಯಲ್ಲಿರುವ ಆರ್ಥಿಕ ವ್ಯವಸ್ಥೆ ನಮ್ಮದು. ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವುದಲ್ಲದೇ, ಸಾರ್ವಜನಿಕ ಆಸ್ತಿಯನ್ನೂ ಅವರಿಗೆ ನೀಡುತ್ತಿದೆ. ಕಳೆದ 10 ವರ್ಷಗಳಲ್ಲಿ ಅಸಮಾನತೆಯ ಅಂತರ ಗಣನೀಯವಾಗಿ ಹೆಚ್ಚಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದ ಭಾರತದ ಸ್ಥಿತಿ ಊಹಿಸಲೂ ಅಗದು ಎಂದರು.

ಮಹಿಳಾ ಮೀಸಲಾತಿ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಿದರೂ, ಜಾರಿಗೆ 2029ರವರೆಗೆ ಗಡುವು ಹಾಕಿಕೊಂಡಿದ್ದಾರೆ. ಬ್ರಿಟನ್ ಹಿಂದಿಕ್ಕಿ ಭಾರತ ಐದನೇ ಅರ್ಥವ್ಯವಸ್ಥೆಯಾಗಿ ಬೆಳೆದಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಇನ್ನೊಂದೆಡೆ ಭಾರತ ಅಭಿವೃದ್ಧಿ ರಾಷ್ಟ್ರವಾಗಲು 2047ರವರೆಗೆ ಕಾಯಬೇಕು ಎನ್ನುತ್ತಾರೆ. ಮೀಸಲಾತಿಗಾಗಿ ಮಹಿಳೆಯರು, ಸಮಾನತೆಯ ದಿನಗಳಿಗಾಗಿ ಜನರು ಇನ್ನು ಎಷ್ಟು ವರ್ಷಗಳು ಕಾಯಬೇಕು ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಉಳಿತಾಯ ಶೇ 5 ಇದ್ದರೆ, ಸಾಲದ ಪ್ರಮಾಣ ಶೇ 40ರಷ್ಟಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಭಾರತ ಹೇಗೆ ಅಭಿವೃದ್ಧಿ ರಾಷ್ಟ್ರವಾಗಲಿದೆ ಎನ್ನುವ ಪ್ರಶ್ನೆಗಳಿಗೆ ಅವರ ಬಳಿ ಉತ್ತರವೇ ಇಲ್ಲ. ದೇಶದ ಆರ್ಥಿಕ ಸಮೃದ್ಧತೆಯ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಉದ್ಯಮಿಗಳು ದೇಶ ತೊರೆಯುತ್ತಿದ್ದಾರೆ. ಪ್ರತಿ ವರ್ಷ 1.50 ಲಕ್ಷ ಜನರು ದೇಶದ ಪೌರತ್ವವನ್ನೇ ತ್ಯಜಿಸುತ್ತಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಸಲೀಲ್ ಶೆಟ್ಟಿ, ಲೇಖಕ ಆಕಾರ್ ಪಟೇಲ್, ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಶಿಕ್ಷಣ ತಜ್ಞ ವಿ.ಪಿ. ನಿರಂಜನ ಆರಾಧ್ಯ, ಪತ್ರಕರ್ತ ಇಂದೂಧರ ಹೊನ್ನಾಪುರ, ನಿರ್ಮಲಾ, ಸಂಶೋಧಕಿ ಎ.ಆರ್. ವಾಸವಿ, ಚಿಂತಕಿ ಜಾನಕಿ ನಾಯ‌ರ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

Tags:    

Similar News