ಸೈಬರ್ ಅಪರಾಧ ತಡೆಯಲು ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಆರಂಭ

Update: 2024-07-21 01:30 GMT

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತಿಚೆಗೆ ಸೈಬರ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿ ವರ್ಷ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​​ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್​ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್​ ಇಲಾಖೆಯು 1930 ಎಂಬ ಸಹಾಯವಾಣಿ ಆರಂಭಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ರಾಜ್ಯ ಪೊಲೀಸ್​ ಇಲಾಖೆ, ʻʻಆತ್ಮೀಯ ಆನ್​ಲೈನ್​ ಬಳಕೆದಾರರೇ ಸೈಬರ್​ ವಂಚನೆಯಿಂದ ದೂರ ಇರಲು ನಿಮ್ಮ ನಡೆಯ ಯಾವುದೇ ಸುಳಿವು ವಂಚಕರಿಗೆ ನೀಡಬೇಡಿ. ಒಂದು ವೇಳೆ ನೀವು ಸೈಬರ್​ ಬಲೆಯಲ್ಲಿ ಸಿಲುಕಿದ್ದರೆ ಹತ್ತಿರದ ಪೊಲೀಸ್​ ಠಾಣೆಗೆ ದೂರು ನೀಡಿ. ಅಥವಾ ಸೈಬರ್​ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿʼʼ ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಡಿಜಿಟಲ್ ಹಣಕಾಸು ವಂಚನೆಗಳು ನಡೆದಿವೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ವರದಿ ಮಾಡಿದೆ. 2023 ರಲ್ಲಿ 13,000 ಕ್ಕೂ ಹೆಚ್ಚು ಸೈಬರ್ ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅರ್ಧದಷ್ಟು ಡಿಜಿಟಲ್ ಪಾವತಿ ವಂಚನೆ (ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್) ಆಗಿದೆ. ಡಿಜಿಟಲ್ ಹಣಕಾಸು ವಂಚನೆಯ ಸಂತ್ರಸ್ತರು ಕನಿಷ್ಠ 10,319 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ವಾಟ್ಸಾಪ್ ವಂಚನೆಯನ್ನು ಹೇಗೆ ಮತ್ತು ಎಲ್ಲಿ ವರದಿ ಮಾಡುವುದು?

ಸಂಚಾರ್ ಸಾಥಿ ಪೋರ್ಟಲ್‌ನ (www.sancharsathi.gov.in) ‘I-Report Spected Fraud Communications’ ವೈಶಿಷ್ಟ್ಯದ ಮೇಲೆ ಇಂತಹ ಮೋಸದ ಸಂವಹನಗಳನ್ನು ವರದಿ ಮಾಡುವಂತೆ DoT ನಾಗರಿಕರಿಗೆ ಸಲಹೆ ನೀಡಿದೆ. ಸೈಬರ್ ಅಪರಾಧಗಳು, ಹಣಕಾಸು ವಂಚನೆಗಳು ಇತ್ಯಾದಿಗಳಿಗಾಗಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗವನ್ನು ತಡೆಗಟ್ಟುವಲ್ಲಿ ಇಂತಹ ಪೂರ್ವಭಾವಿ ವರದಿಗಳು DoT ಗೆ ಸಹಾಯ ಮಾಡುತ್ತದೆ.

ಹೆಚ್ಚುವರಿಯಾಗಿ ನಾಗರಿಕರು ಸಂಚಾರಸತಿ ಪೋರ್ಟಲ್‌ನ (www.sancharsathi.gov.in) ನಿಮ್ಮ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ ವೈಶಿಷ್ಟ್ಯದಲ್ಲಿ ತಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕವನ್ನು ಪರಿಶೀಲಿಸಬಹುದು ಮತ್ತು ಅವರು ಪಡೆಯದ ಅಥವಾ ಅಗತ್ಯವಿಲ್ಲದ ಯಾವುದೇ ಮೊಬೈಲ್ ಸಂಪರ್ಕವನ್ನು ವರದಿ ಮಾಡಬಹುದು. ನಾಗರಿಕರು ಸೈಬರ್ ಅಪರಾಧ ಅಥವಾ ಆರ್ಥಿಕ ವಂಚನೆಗೆ ಬಲಿಯಾದ ಸಂದರ್ಭದಲ್ಲಿ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಅಥವಾ www.cybercrime.gov.in ನಲ್ಲಿ ವರದಿ ಮಾಡುವಂತೆ ದೂರಸಂಪರ್ಕ ಇಲಾಖೆ ನಾಗರಿಕರಿಗೆ ಸಲಹೆ ನೀಡಿದೆ.

Tags:    

Similar News