ಪ್ರಧಾನಿ ಹುದ್ದೆಗೆ ಪೈಪೋಟಿ | ವಿವಾದದ ಕಿಡಿಹೊತ್ತಿಸಿದ ಸಿಎಂ ಸಿದ್ದರಾಮಯ್ಯ ಹೇಳಿಕೆ
ದಲಿತ ನಾಯಕ ಹಾಗೂ ಅನುಭವಿ ನೇತಾರ ಎಂಬುದು ಖರ್ಗೆ ಅವರಿಗೆ ಪೂರಕ ಅಂಶಗಳಾಗಿದ್ದು, ಅದೇ ಮಾನದಂಡಗಳ ಮೇಲೆ ಒಕ್ಕೂಟದ ಒಮ್ಮತದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆಗಳೂ ಇವೆ. ಅಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ದಿಢೀರ್ ಹೇಳಿಕೆ ಸಹಜವಾಗೇ ಕಾಂಗ್ರೆಸ್ ವಲಯದಲ್ಲಿ ಕಂಪನ ಮೂಡಿಸಿದೆ.;
ಪ್ರಧಾನಿ ಮಂತ್ರಿ ಹುದ್ದೆಯ ಆಕಾಂಕ್ಷಿಗಳ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ವಿವಾದಕ್ಕೆ ಎಡೆಯಾಗಿದೆ.
"ಕರ್ನಾಟಕದಿಂದ ಯಾರೂ ಪ್ರಧಾನಮಂತ್ರಿ ಹುದ್ದೆಯ ಪೈಪೋಟಿಯಲ್ಲಿ ಇಲ್ಲ" ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪೈಕಿ ಪ್ರಮುಖವಾಗಿ ಹೆಸರು ಕೇಳಿಬರುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಉದ್ದೇಶಿಸಿ ಹೇಳಲಾಗಿದೆ. ಹಾಗೆ ಹೇಳುವ ಮೂಲಕ ಸಿದ್ದರಾಮಯ್ಯ ಅವರು ಖರ್ಗೆಯವರನ್ನು ಮತ್ತೊಮ್ಮೆ ಕಡೆಗಣಿಸಿದ್ದಾರೆ ಎಂಬ ವ್ಯಾಖ್ಯಾನಕ್ಕೆ ಈ ಹೇಳಿಕೆ ಕಾರಣವಾಗಿದೆ.
ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು, ತಮ್ಮ ಅವಧಿಯ ಗುಜರಾತ್ ಅಭಿವೃದ್ಧಿಯನ್ನೇ ಗುಜರಾತ್ ಮಾದರಿ ಎಂದು ಬಿಂಬಿಸಿ ಪ್ರಧಾನಿ ಹುದ್ದೆಗೆ ಏರಿದ್ದರು. ಸದ್ಯ ದೇಶದಲ್ಲಿ ನಿಮ್ಮ ಗ್ಯಾರಂಟಿ ಯೋಜನೆಗಳ ಕರ್ನಾಟಕ ಮಾದರಿ ಹೆಚ್ಚು ಚಾಲ್ತಿಯಲ್ಲಿದೆ. ಒಂದು ವೇಳೆ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿಯ ಬಲದ ಮೇಲೆ ನೀವು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೇ? ಎಂಬುದು ಪತ್ರಕರ್ತರ ಪ್ರಶ್ನೆಯಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ದೇಶದಲ್ಲಿ ಈಗ ಕರ್ನಾಟಕ ಮಾದರಿ ಚಾಲ್ತಿಯಲ್ಲಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಯಶಸ್ವಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟ ಕೂಡ ಗ್ಯಾರಂಟಿ ಯೋಜನೆಗಳ ʼಕರ್ನಾಟಕ ಮಾಡೆಲ್ʼ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದೆ. ಆದರೆ, ನನ್ನನ್ನೂ ಸೇರಿದಂತೆ ಕರ್ನಾಟಕದಿಂದ ಯಾರೂ ಪ್ರಧಾನಮಂತ್ರಿ ಹುದ್ದೆಯ ಪೈಪೋಟಿಯಲ್ಲಿ ಇಲ್ಲ" ಎಂದು ಹೇಳಿದ್ದರು.
ತಮ್ಮ ಆಡಳಿತಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಇನ್ನೂ ಎರಡು ಸುತ್ತಿನ ಲೋಕಸಭಾ ಚುನಾವಣೆ ಬಾಕಿ ಇರುವಾಗ, ದೇಶದ ಪ್ರಮುಖ ರಾಜ್ಯಗಳಲ್ಲಿ ಈ ಹೇಳಿಕೆ ಚುನಾವಣಾ ವಿಷಯವಾಗಿ ಬದಲಾಗಬಹುದು. ದಲಿತ ನಾಯಕರನ್ನು ಪ್ರಧಾನಿ ಹುದ್ದೆಗೆ ಏರಿಸಲು ಕಾಂಗ್ರೆಸ್ ಸಿದ್ಧವಿಲ್ಲ ಎಂಬುದನ್ನು ಪರೋಕ್ಷವಾಗಿ ಈ ಹೇಳಿಕೆ ಸೂಚಿಸುತ್ತಿದೆ ಎಂಬ ಚರ್ಚೆಗೆ ಗ್ರಾಸವಾಗಬಹುದು ಎಂಬ ಆತಂಕ ಕಾಂಗ್ರೆಸ್ ರಾಷ್ಟ್ರೀಯ ನಾಯಕರನ್ನು ಕಾಡುತ್ತಿದೆ.
ಖರ್ಗೆಯವರ ಹಿರಿತನ ಕಡಗಣನೆ?
ಪ್ರಮುಖವಾಗಿ 2013ರಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ದಲಿತ ಮುಖ್ಯಮಂತ್ರಿಯ ಕೂಗಿನೊಂದಿಗೆ ಖರ್ಗೆ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಆಗ ತಮ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದನ್ನೇ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಿದ್ದ ಸಿದ್ದರಾಮಯ್ಯ, ಇದೀಗ ಪ್ರಧಾನಿ ಹುದ್ದೆಯ ವಿಷಯದಲ್ಲಿಯೂ ಖರ್ಗೆಯವರ ಹಿರಿತನ ಮತ್ತು ಅನುಭವನ್ನು ಕಡೆಗಣಿಸಿ ಈ ಹೇಳಿಕೆ ನೀಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಸ್ವತಃ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿಗಳೇ ಅವರ ಮಾತಿಗೆ ಆಕ್ಷೇಪವೆತ್ತಿದ್ದು ʼಮುಖ್ಯಮಂತ್ರಿಗಳ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಹುದ್ದೆಗೆ ಅರ್ಹ ನಾಯಕರುʼ ಎಂದು ಖರ್ಗೆ ಪರ ಬ್ಯಾಟಿಂಗ್ ಬೀಸಿದ್ದಾರೆ.
ಲೋಕೋಪಯೋಗಿ ಸಚಿವ ಮತ್ತು ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ಹಿರಿಯ ಸಂಪುಟ ಸಹೋದ್ಯೋಗಿ ಹಾಗೂ ಉತ್ತರಕರ್ನಾಟಕದ ಪ್ರಮುಖ ನಾಯಕ ಎಚ್ ಕೆ ಪಾಟೀಲ್ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, “ಪ್ರಧಾನಿ ಹುದ್ದೆಗೆ ನಮ್ಮಲ್ಲಿ ಯಾರೂ ಸಮರ್ಥರಿಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ. ನಮ್ಮಲ್ಲೂ ಹಿರಿಯರೂ, ಸಮರ್ಥರೂ ಇದ್ದಾರೆ” ಎನ್ನುವ ಮೂಲಕ ಪರೋಕ್ಷವಾಗಿ ಖರ್ಗೆ ಅವರ ಪರ ದನಿ ಎತ್ತಿದ್ದಾರೆ.
ಈ ನಡುವೆ, ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, "ನಾನು ಪ್ರಧಾನಿ ಹುದ್ದೆಯ ಪೈಪೋಟಿಯಲ್ಲಿ ಇಲ್ಲ ಎಂದಷ್ಟೇ ಹೇಳಿದ್ದೆ. ಆದರೆ ಕೆಲವು ಮಾಧ್ಯಮಗಳಲ್ಲಿ ಅದು ತಪ್ಪಾಗಿ ವರದಿಯಾಗಿದೆ" ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಪ್ರೆಸ್‌ಕ್ಲಬ್ ಸಂವಾದದ ವಿಡಿಯೋದಲ್ಲಿ ಅವರು “ಕರ್ನಾಟಕದಿಂದ ಯಾರೂ ಪ್ರಧಾನಮಂತ್ರಿಯಾಗುವುದಿಲ್ಲ” ಎಂದು ಹೇಳಿರುವುದು ವೈರಲ್ ಆಗಿದೆ.
ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್
ಈ ನಡುವೆ, ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಭವ ಮತ್ತು ಹಿರಿತನವನ್ನು ಕಡೆಗಣಿಸುವ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳಿಗೆ ಆಹಾರವಾಗುವ ಮುನ್ನ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಖಡಕ್ ಸೂಚನೆ ನೀಡಿ ಸ್ಪಷ್ಟನೆ ನೀಡಲು ಸೂಚಿಸಿದೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಗುರುವಾರ ಸಂಜೆ ಈ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು(ಅವರು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸಿಲ್ಲ), “ಮುಖ್ಯಮಂತ್ರಿಗಳ ಈ ಹೇಳಿಕೆ ಪಕ್ಷಕ್ಕೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮುಜಗರ ತಂದಿದೆ. ಅದರಲ್ಲೂ ದೇಶದಲ್ಲಿ ಲೋಕಸಭಾ ಚುನಾವಣೆ ಬಾಕಿ ಇರುವ ಈ ಹೊತ್ತಿನಲ್ಲಿ ಪ್ರಧಾನಿ ಹುದ್ದೆಯ ಕುರಿತ ಹೇಳಿಕೆಯ ಅಗತ್ಯವೇ ಇರಲಿಲ್ಲ. ಮಾಧ್ಯಮದವರ ಪ್ರಶ್ನೆಯನ್ನು ನಯವಾಗಿ ತಿರಸ್ಕರಿಸುವ ಬದಲು ಅವರು ತತಕ್ಷಣಕ್ಕೆ ಏನೋ ಹೊಳೆದಿದ್ದು ಹೇಳಿದ್ದಾರೆ. ಆದರೆ, ಖರ್ಗೆಯವರು ಮತ್ತು ಅವರ ನಡುವಿನ ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ” ಎಂದರು.
ಅಲ್ಲದೆ, “ಈ ಹೇಳಿಕೆಯ ಪರಿಣಾಮಗಳನ್ನು ಊಹಿಸಿ, ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕಮಾಂಡ್, ಆ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಅವರ ಮನಸ್ಸಿನಲ್ಲಿ ಅಂತಹ ದುರುದ್ದೇಶವಿರಲಿಕ್ಕಿಲ್ಲ. ಆದರೆ, ಸದ್ಯದ ರಾಜಕೀಯ ಸಂದರ್ಭದ ಹಿನ್ನೆಲೆಯಲ್ಲಿ ಈ ಹೇಳಿಕೆ ಪಕ್ಷಕ್ಕೆ ದುಬಾರಿಯಾಗುವ ಅಪಾಯವಿತ್ತು” ಎಂದೂ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಈ ಬಾರಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂಬ ಇತ್ತೀಚಿನ ಸಮೀಕ್ಷೆಗಳು ಮತ್ತು ರಾಜಕೀಯ ಪಂಡಿತರ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಒಂದು ವೇಳೆ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಪ್ರಧಾನಿ ಯಾರು? ಎಂಬ ಚರ್ಚೆಗಳು ರಾಷ್ಟ್ರಮಟ್ಟದಲ್ಲಿ ಗರಿಗೆದರಿವೆ. ಪ್ರಮುಖವಾಗಿ ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದೆ. ಮುಖ್ಯವಾಗಿ ದಲಿತ ನಾಯಕ ಹಾಗೂ ಅನುಭವಿ ನೇತಾರ ಎಂಬುದು ಖರ್ಗೆ ಅವರಿಗೆ ಪೂರಕ ಅಂಶಗಳಾಗಿದ್ದು, ಅದೇ ಮಾನದಂಡಗಳ ಮೇಲೆ ಒಕ್ಕೂಟದ ಒಮ್ಮತದ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗುವ ಸಾಧ್ಯತೆಗಳೂ ಇವೆ ಎಂಬ ಮಾತುಗಳು ಕೂಡ ರಾಷ್ಟ್ರರಾಜಕಾರಣದಲ್ಲಿ ಕೇಳಿಬರುತ್ತಿವೆ. ಅಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ದಿಢೀರ್ ಹೇಳಿಕೆ ಸಹಜವಾಗೇ ಕಾಂಗ್ರೆಸ್ ವಲಯದಲ್ಲಿ ಕಂಪನ ಮೂಡಿಸಿದೆ.
ಸಿದ್ದರಾಮಯ್ಯ ವರ್ಸಸ್ ಖರ್ಗೆ ಇತಿಹಾಸ
2006 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಾರಥ್ಯ ವಹಿಸಿದ್ದಾಗ ಜೆಡಿಎಸ್ ತೊರೆದಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಆ ಬಳಿಕ 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ಸೋತ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿ ಮುಂದುವರಿದಿತ್ತು. ನಂತರ 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭಾ ಚುನಾವಣಾ ಕಣಕ್ಕಿಳಿದು ಆಯ್ಕೆಯಾಗಿ ದೆಹಲಿ ರಾಜಕಾರಣಕ್ಕೆ ಹೋಗಿದ್ದರು. ಆ ಬಳಿಕ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಅಧಿಕಾರದ ಹಾದಿ ಸುಗಮವಾಗಿತ್ತು. ಬಳಿಕ 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದಾಗ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ʼದಲಿತ ಸಿಎಂʼ ಹೆಸರಿನಲ್ಲಿ ಖರ್ಗೆಯವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಆದರೆ, ತಮ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಹಕ್ಕು ಮಂಡಿಸಿ ಸಿಎಂ ಗಾದಿಗೆ ಏರುವಲ್ಲಿ ಯಶಸ್ವಿಯಾಗಿದ್ದರು.