ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

ರೈತ ಹೋರಾಟಗಾರ್ತಿ ಎಂದೇ ಗುರುತಿಸಿಕೊಂಡಿದ್ದ ಬೆಳಗಾವಿಯ ಜಯಶ್ರೀ ಗುರನ್ನವರ(40) ಬುಧವಾರ ನಿಧನರಾಗಿದ್ದಾರೆ.

Update: 2024-05-23 08:37 GMT
ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ ನಿಧನರಾಗಿದ್ದಾರೆ.
Click the Play button to listen to article

ಬೆಳಗಾವಿಯ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ(40) ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಮೇ 22) ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಓರ್ವ ಪುತ್ರ ಇದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ರೈತರು, ಕಾರ್ಮಿಕರ ಪರ ಗಟ್ಟಿದನಿಯಿಂದ ಹೋರಾಡುತ್ತಿದ್ದ ಜಯಶ್ರೀ, ಹೆಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟದ ಮೂಲಕ ಗಮನ ಸೆಳೆದಿದ್ದರು. ಕಬ್ಬಿನ ಬಾಕಿ ಬಿಲ್‌ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದರು. ಆ ವೇಳೆ ಅಂದಿನ ಸಿಎಂ ಕುಮಾರಸ್ವಾಮಿ, ಜಯಶ್ರೀ ಕುರಿತು ಹಗುರವಾಗಿ ಮಾತನಾಡಿ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದರು.

ಬಳಿಕ ಜಯಶ್ರೀ ಗುರನ್ನವರ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರು, ಮಹಿಳೆಯರು ಮತ್ತು ಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡಿದ್ದರು. ರೈತ ಹೋರಾಟದೊಂದಿಗೆ ನರೇಗಾ ಕೂಲಿ‌ ಕಾರ್ಮಿಕರ ಪರವಾಗಿ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಕಬ್ಬಿನ ಬೆಲೆ, ಬೆಂಬಲ ಬೆಲೆ, ರೈತರ ಹೊಲಗಳಿಗೆ ರಸ್ತೆ, ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಕಾರ್ಮಿಕರ ಬದುಕು ಬವಣೆಗಳ ಬಗೆಗೆ ತೀವ್ರ ಹೋರಾಟ ನಡೆಸಿದ್ದರು.

ಮೆದುಳಿನ ಸ್ಟ್ರೋಕ್‌ ನಿಂದ ಜಯಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಜಯಶ್ರೀ ಗುರನ್ನವರ ನಿಧನಕ್ಕೆ ಹಲವು ರಾಜಕೀಯ ನಾಯಕರು, ರೈತ ಮುಖಂಡರು ಸಂತಾಪ ಸೂಚಿಸಿದ್ದಾರೆ. ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.

Tags:    

Similar News