ಜಾತಿ ಗಣತಿ: "ಪ್ರಶ್ನೆಗಳು ಹೆಚ್ಚಾಗಿವೆ, ಸರಳೀಕರಿಸಬೇಕಿತ್ತು: ಡಿಸಿಎಂ ಡಿ.ಕೆ. ಶಿವಕುಮಾರ್
ಹೆಚ್ಚು ಪ್ರಶ್ನೆಗಳಿದ್ದು ಸರಳೀಕರಣ ಮಾಡಬೇಕಿತ್ತು ಎಂದು ಕೇಳಿದಾಗ, “ನಾನು ಕೂಡ ಇಂದೇ ಈ ಪ್ರಶ್ನೆಗಳನ್ನು ನೋಡಿದೆ. ಇವುಗಳನ್ನು ಸರಳೀಕರಣ ಮಾಡಬೇಕಿತ್ತು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆ” ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಪ್ರಶ್ನಾವಳಿಯು ದೀರ್ಘವಾಗಿದ್ದು, ಅದನ್ನು ಸರಳೀಕರಿಸಬೇಕಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ಸಮೀಕ್ಷೆಗೆ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ಪ್ರಶ್ನೆಗಳ ಸ್ವರೂಪದ ಬಗ್ಗೆಯೂ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಶನಿವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭವಾಗಿದೆ. ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದು, ಎಲ್ಲಾ ಮಾಹಿತಿ ನೀಡಿದ್ದೇನೆ. ಆದರೆ, ಪ್ರಶ್ನೆಗಳನ್ನು ನೋಡಿದಾಗ, ಇವುಗಳನ್ನು ಇನ್ನಷ್ಟು ಸರಳೀಕರಿಸಬಹುದಿತ್ತು ಎನಿಸಿತು. ವಿಶೇಷವಾಗಿ ನಗರ ಪ್ರದೇಶದ ಜನರಿಗೆ ಇಷ್ಟು ದೀರ್ಘ ಪ್ರಶ್ನೆಗಳಿಗೆ ಉತ್ತರಿಸಲು ತಾಳ್ಮೆ ಕಡಿಮೆ ಇರುತ್ತದೆ," ಎಂದು ಒಪ್ಪಿಕೊಂಡರು.
ಎಲ್ಲರೂ ಸಹಕರಿಸಿ, ಆನ್‌ಲೈನ್‌ನಲ್ಲೂ ಅವಕಾಶ
ಎಲ್ಲಾ ಸಮಾಜಗಳ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಈ ಸಮೀಕ್ಷೆ ಮಹತ್ವದ್ದಾಗಿದೆ ಎಂದು ಹೇಳಿದ ಡಿಸಿಎಂ, "ಎಲ್ಲಾ ಜಾತಿ, ಸಮುದಾಯದವರು ಸಮೀಕ್ಷೆಗೆ ಸಹಕಾರ ನೀಡಬೇಕು. ಕೆಲವರು ಮಾಹಿತಿ ನೀಡಲು ನಿರಾಕರಿಸುತ್ತಿರುವುದು ಗಮನಕ್ಕೆ ಬಂದಿದೆ. ಅವರಿಗೆ ತಿಳುವಳಿಕೆ ನೀಡುವುದು ನಮ್ಮ ಕರ್ತವ್ಯ," ಎಂದರು.
ಸಮೀಕ್ಷೆಯ ವೇಳೆ ಎದುರಾಗಬಹುದಾದ ಸರ್ವರ್ ಸಮಸ್ಯೆಯಂತಹ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ ಅವರು, ಶೀಘ್ರದಲ್ಲೇ ಆನ್‌ಲೈನ್‌ನಲ್ಲಿಯೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಲ್ಲ
ಸಮೀಕ್ಷೆಯಲ್ಲಿರುವ ಕೆಲವು ವೈಯಕ್ತಿಕ ಪ್ರಶ್ನೆಗಳ ಬಗ್ಗೆ ಮಾತನಾಡಿದ ಅವರು, "ಈ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ಯಾರೂ ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಜನರು ಇಚ್ಛಿಸಿದರೆ ಉತ್ತರಿಸಬಹುದು ಅಥವಾ ಬಿಡಬಹುದು. ಬೆಂಗಳೂರಿನಲ್ಲಿ ಸಮೀಕ್ಷೆ ನಡೆಸುವಾಗ ಸೂಕ್ಷ್ಮತೆಯಿಂದ ವರ್ತಿಸುವಂತೆ ಗಣತಿದಾರರಿಗೆ ಸೂಚಿಸಿದ್ದೇನೆ," ಎಂದು ಸ್ಪಷ್ಟಪಡಿಸಿದರು.
ಸಮೀಕ್ಷೆಯಿಂದ ಮತಾಂತರಕ್ಕೆ ದಾರಿಯಾಗುತ್ತದೆ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿದ ಅವರು, "ದೊಡ್ಡವರ ಬಗ್ಗೆ ನಾವೇನು ಹೇಳೋಣ?" ಎಂದು ವ್ಯಂಗ್ಯವಾಡಿದರು. ಇದೇ ವೇಳೆ, ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಪಾಲು ಹಂಚಿಕೆಯ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಅವರು ಪುನರುಚ್ಚರಿಸಿದರು.