The Federal Exclusive|ಪಾಕಿಸ್ತಾನದ ಎದೆ ನಡುಗಿಸಿದ ʼಆಕಾಶ್ʼ ಜನಕ ಕನ್ನಡಿಗ ಪ್ರಹ್ಲಾದ ರಾಮರಾವ್
Operation Sindoor: ಪಾಕಿಸ್ತಾನದ ಕ್ಷಿಪಣಿಗಳನ್ನು ಆಗಸದಲ್ಲೇ ಉಡಾಯಿಸಿದ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಕ್ಷಿಪಣಿ ವಿಜ್ಞಾನಿ ಬೆಂಗಳೂರಿನ ಪ್ರಹ್ಲಾದ ರಾಮರಾವ್.;
ಪಹಲ್ಗಾಮ್ ದಾಳಿ ನಂತರ ಭಾರತ-ಪಾಕಿಸ್ತಾನದ ನಡುವೆ ಪ್ರತೀಕಾರದ ಕ್ರಮಗಳು ಯುದ್ಧದ ಸ್ವರೂಪ ಪಡೆಯುತ್ತಿವೆ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭಾರತದ ಕ್ರಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದೆ. ಬೆಂಕಿಯ ಚೆಂಡುಗಳಂತೆ ಗಡಿಯೊಳಗೆ ಕ್ಷಿಪಣಿ, ಡ್ರೋನ್‌ಗಳನ್ನು ನುಗಿಸುತ್ತಿದೆ. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ಪಾಕಿಸ್ತಾನದ ಯಾವುದೇ ಪ್ರಯತ್ನ ಫಲಿಸುತ್ತಿಲ್ಲ.
ಅದಕ್ಕೆ ಕಾರಣ ಭಾರತದ ವಾಯುರಕ್ಷಣಾ ವ್ಯವಸ್ಥೆಯಲ್ಲಿ ಬ್ರಹ್ಮಾಸ್ತ್ರದಂತಿರುವ ಆಕಾಶ್ ಕ್ಷಿಪಣಿ ವ್ಯವಸ್ಥೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿಗಳನ್ನು ಆಗಸದಲ್ಲೇ ಧ್ವಂಸ ಮಾಡಿ ಪರಾಕ್ರಮ ಮೆರೆಯುತ್ತಿದೆ. ಅದರಲ್ಲೂ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಕನ್ನಡಿಗ ವಿಜ್ಞಾನಿಯೇ ಅಭಿವೃದ್ಧಿಪಡಿಸಿರುವ ವಿಚಾರ ಕನ್ನಡಿಗರನ್ನು ಹೆಮ್ಮೆ ಪಡುವಂತೆ ಮಾಡಿದೆ.
ಹೌದು, ಬೆಂಗಳೂರಿನ ಪ್ರಹ್ಲಾದ ರಾಮರಾವ್ ಸಾರಥ್ಯದಲ್ಲಿ 1000 ವಿಜ್ಞಾನಿಗಳ ತಂಡ ಆಕಾಶ್ ಕ್ಷಿಪಣಿ ವ್ಯವಸ್ಥೆ ಸಿದ್ಧಪಡಿಸಿದೆ. ಶತ್ರು ರಾಷ್ಟ್ರದ ಗುರಿಗಳನ್ನು ಕ್ಷಣಾರ್ಧದಲ್ಲಿ ಬೇಟೆಯಾಡಿ, ಸಂಹಾರ ಮಾಡುತ್ತಿದೆ. ಆಕಾಶ್ ಕ್ಷಿಪಣಿ ವ್ಯವಸ್ಥೆ ಯೋಜನೆಯ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರಹ್ಲಾದ ರಾಮರಾವ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಕ್ಷಿಪಣಿ ತಯಾರಿಕೆ ಅವಧಿಯಲ್ಲಿನ ಅನುಭವ, ಕಾರ್ಯತಂತ್ರ, ಇತ್ಯಾದಿ ವಿಚಾರಗಳ ಕುರಿತು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಪ್ರಹ್ಲಾದ ರಾಮರಾವ್ ಹಿನ್ನೆಲೆ ಏನು?
ಬೆಂಗಳೂರಿನ ಸುಲ್ತಾನ್‌ಪೇಟೆ ನಿವಾಸಿಯಾದ ಕ್ಷಿಪಣಿ ವಿಜ್ಞಾನಿ ಪ್ರಹ್ಲಾದ ರಾಮರಾವ್ ಅವರು 1947 ಫೆ.5 ರಂದು ಜನಿಸಿದರು. ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಸೆಂಟ್ರಲ್ ಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು.
ಬಾಲ್ಯದಲ್ಲೇ ಭಿನ್ನ ಆಲೋಚನೆಗಳಿಂದ ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದ ಪ್ರಹ್ಲಾದ ಅವರು ಮುಂದೊಂದು ದಿನ ಅಧ್ಬುತ ಸಾಧನೆ ಮಾಡುವ ವಿಶ್ವಾಸ, ಧೈರ್ಯ ಪೋಷಕರಲ್ಲೂ ಇತ್ತು. ಅದರಂತೆ ಬಡತನದ ನಡುವೆಯೂ ಉತ್ತಮ ಶಿಕ್ಷಣ ಕೊಡಿಸಿದರು.
ಬೆಂಗಳೂರಿನ ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ ಬಿಇ ಪದವಿ ಶಿಕ್ಷಣ ಪಡೆದರು. ತಮ್ಮ ಪ್ರತಿಭೆಗೆ ಮೆರಿಟ್ ಸ್ಕಾಲರ್ ಶಿಪ್ ಕೂಡ ದೊರೆತ ಕಾರಣ ವ್ಯಾಸಂಗ ನಿರಾಯಸವಾಗಿ ಪೂರ್ಣಗೊಂಡಿತು. ಬಿಇ ಪದವಿ ಮುಗಿದ ಕೂಡಲೇ ಬಿಇಎಲ್ ಸಂಸ್ಥೆಯಲ್ಲಿ ಟ್ರೈನಿ ಎಂಜಿನಿಯರಿಂಗ್ ಕೆಲಸ ಅರಸಿ ಬಂತು. ಆದರೆ, ತಾಯಿಯ ಆಸೆಯಂತೆ ಸ್ನಾತಕೋತ್ತರ ಪದವಿ ಮಾಡುವ ಅವಕಾಶ ಒದಗಿ ಬಂದಿತು. ಬೆಂಗಳೂರು ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ ಎಂಜಿನಿಯರಿಂಗ್ (ಎಂಇ) ಪ್ರವೇಶಾವಕಾಶದ ಜೊತೆಗೆ ಸ್ಕಾಲರ್ ಶಿಪ್ ದೊರೆಯಿತು.
ಇಸ್ರೋದಲ್ಲೂ ಕಾರ್ಯಾನುಭವ
ಎಂಇ ಪೂರ್ಣಗೊಳಿಸಿದ ಬಳಿಕ ತಿರುವನಂತರಪುರದ ಇಸ್ರೋ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾದರು. ಒಂದು ವರ್ಷ ಪೂರ್ಣಗೊಳಿಸುವ ವೇಳೆಗೆ ಹೈದರಾಬಾದ್‌ನ ಡಿಆರ್‌ಡಿಒ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಸುಮಾರು 27 ವರ್ಷಗಳ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ ಕ್ಷಿಪಣಿ ವಿಜ್ಞಾನಿಯಾಗಿ ಆಕಾಶ್ ಕ್ಷಿಪಣಿ ವ್ಯವಸ್ಥೆ ಅಭಿವೃದ್ಧಿಪಡಿಸಿದರು.
1983 ರಲ್ಲಿ ಕ್ಷಿಪಣಿ ಪಿತಾಮಹ ಡಾ. ಅಬ್ದುಲ್ ಕಲಾಂ ಅವರು ಪ್ರಹ್ಲಾದ ರಾಮರಾವ್ ಅವರನ್ನು ಆಕಾಶ್ ಕ್ಷಿಪಣಿ ಯೋಜನೆಯ ನಿರ್ದೇಶಕರನ್ನಾಗಿ ನೇಮಕ ಮಾಡಿದರು. 1000 ಮಂದಿ ಎಂಜಿನಿಯರ್ ಹಾಗೂ ತಂತ್ರಜ್ಞರ ತಂಡ ಇದಕ್ಕಾಗಿ ಸಿದ್ಧಗೊಂಡಿತು. ಪ್ರಹ್ಲಾದ ರಾಮರಾವ್ ಅವರು ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸಿದರೆ, ಇನ್ನೂ ಹಲವರು ಬೆಂಗಳೂರು, ಮೈಸೂರು, ಚೆನ್ನೈ, ಚಂಡಿಗಢ, ದೆಹಲಿ, ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸುಮಾರು 15 ವರ್ಷಗಳ ಸತತ ಪರಿಶ್ರಮದಿಂದ ಆಕಾಶ್ ಕ್ಷಿಪಣಿ ವ್ಯವಸ್ಥೆ ಸಿದ್ಧವಾಯಿತು.
ವೇಗ, ನಿಖರ ಗುರಿಯ ಸ್ವಯಂಚಾಲಿತ ಕ್ಷಿಪಣಿ
"ಸೂಪರ್‌ಸಾನಿಕ್, ಕುಶಲತೆ(ಮೆನೋವರೆಬಿಲಿಟಿ), ಮಾರಣಾಂತಿಕ(ಲಿಥಾಲಿಟಿ) ಹಾಗೂ ಇಂಟೆಲಿಜೆಂಟ್ ಅಂಶಗಳನ್ನು ಆಂಶೀಕರಿಸಿ ಆಕಾಶ್ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ. ಇಷ್ಟೆಲ್ಲಾ ಅಂಶಗಳನ್ನು ಒಟ್ಟಿಗೆ ಸೇರಿಸಿ ಕ್ಷಿಪಣಿ ಅಭಿವೃದ್ಧಿಪಡಿಸುವುದು ದೊಡ್ಡ ಸವಾಲು. ಆದರೆ, ಅದನ್ನು ಸಮರ್ಥವಾಗಿ ನಿಭಾಯಿಸಿದ್ದು ಇದೇ ಪ್ರಹ್ಲಾದ ರಾಮರಾವ್. ಒಂದೇ ರಾಡಾರ್ ಮೂಲಕ ಬಹುನಿರ್ದೇಶಿತ ಗುರಿಗಳನ್ನು ಹೊಡೆದುರಳಿಸಬಲ್ಲ ಕ್ಷಿಪಣಿ ತಯಾರಿಸುವಾಗ ಆರಂಭದಲ್ಲಿ ಅಳುಕಿತ್ತು, ಆದರೆ, ಕಲಾಂ ಅವರ ಬೆಂಬಲ ಹಾಗೂ ಪ್ರೋತ್ಸಾಹ ನುಡಿಗಳಿಂದ 15 ವರ್ಷಗಳ ಸ್ವದೇಶಿ ನಿರ್ಮಿತ ಹೊಸ ಅಸ್ತ್ರ ಸಿದ್ಧಪಡಿಸಲಾಯಿತು" ಎಂದು ಕ್ಷಿಪಣಿ ವಿಜ್ಞಾನಿ ಪ್ರಹ್ಲಾದ ರಾಮರಾವ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನುಭವ ಹಂಚಿಕೊಂಡರು.
"ನಾವು ತಯಾರಿಸಿದ ಕ್ಷಿಪಣಿಯು ಯುದ್ಧಕ್ಕೆ ಬಳಸುತ್ತೇವೆ ಎಂಬ ಕಲ್ಪನೆ ಇರಲಿಲ್ಲ. ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಪಾಕಿಸ್ತಾನದ ವಿರುದ್ಧ ಆಕಾಶ್ ಕ್ಷಿಪಣಿ ಬಳಕೆಯಾದ ಬಳಿಕ ನಮ್ಮ ಪರಿಶ್ರಮಕ್ಕೆ ಪ್ರತಿಫಲ ದೊರೆಯಿತು. ಕ್ಷಿಪಣಿ ತಯಾರಿಕೆ ಹಿಂದೆ 1000 ಜನರ ಪರಿಶ್ರಮ ಇದೆ, ಅವರ ಕುಟುಂಬದವರ ತ್ಯಾಗವಿದೆ. ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ" ಎಂದು ಹೇಳಿದರು.
ಆಕಾಶ್ ಕ್ಷಿಪಣಿ ಕಾರ್ಯ ನಿರ್ವಹಣೆ ಹೇಗೆ?
ಸಾಮಾನ್ಯವಾಗಿ ಕ್ಷಿಪಣಿಗೆ ಮುನ್ನುಗ್ಗುವಿಕೆ (ಪ್ರೊಪಲ್ಷನ್) ಗುಣ ಅಳವಡಿಸಲಾಗುತ್ತದೆ. ಕ್ಷಿಪಣಿಯು ಬೂಸ್ಟ್ ಆದ ಮೇಲೂ ನಿರಂತವಾಗಿ ಮುನ್ನುಗ್ಗುವಂತೆ ಮಾಡಲಾಗಿದೆ. ಕ್ಷಿಪಣಿ ಅಭಿವೃದ್ಧಿಗೆ ಐಐಎಸ್ಸಿ, ಐಐಟಿ ನೆರವಾಗಿವೆ. ಒಂದೇ ರಾಡಾರ್ ಮೂಲಕ ಬಹು ನಿರ್ದೇಶಿತ ಗುರಿಗಳನ್ನು ಆಕಾಶ್ ಕ್ಷಿಪಣಿ ಸ್ವಯಂಪ್ರೇರಿತವಾಗಿ ಬೇಧಿಸಲಿದೆ. ಇದು ನಮ್ಮ ತಂಡದ 15 ವರ್ಷಗಳ ತಪಸ್ಸು ಎಂಬುದು ಪ್ರಹ್ಲಾದ ರಾಮರಾವ್ ಅವರ ಮಾತು.
ಆಕಾಶ್ ಕ್ಷಿಪಣಿಯು ಶತ್ರುಗಳ ಜೆಟ್, ವಿಮಾನವನ್ನು ಪತ್ತೆ ಹಚ್ಚಿ ಸ್ವಯಂಪ್ರೇರಿತವಾಗಿ ಗುರಿ ನಿಗದಿಪಡಿಸಿ ಉಡಾಯಿಸಲಿದೆ. ಶತ್ರುರಾಷ್ಟ್ರದ ವಿಮಾನ ಎಷ್ಟು ದೂರದಲ್ಲಿದೆ. ಎಷ್ಟು ಎತ್ತರದಲ್ಲಿದೆ ಎಂಬ ರಾಡಾರ್ ಸೂಚನೆ ಆಧರಿಸಿ ಕ್ಷಿಪಣಿಯು ದಾಳಿ ಮಾಡಲಿದೆ. ಇದರ ಗುರಿಯ ಶೇ 99.5 ರಷ್ಟು ನಿಖರವಾಗಿದೆ ಎಂದು ಕ್ಷಿಪಣಿ ವಿಜ್ಞಾನಿ ಪ್ರಹ್ಲಾದ ರಾಮರಾವ್ ʼದ ಫೆಡರಲ್ ಕರ್ನಾಟಕʼದ ಸಂದರ್ಶನದಲ್ಲಿ ತಿಳಿಸಿದರು.
ಶತ್ರುಗಳು ಸಾಮಾನ್ಯವಾಗಿ ಕ್ಷಿಪಣಿ ಹಾಗೂ ವಾಯುದಾಳಿ ನಡೆಸುತ್ತಾರೆ. ನಮ್ಮ ಆಕಾಶ್ ಕ್ಷಿಪಣಿಯನ್ನು ಸುಲಭವಾಗಿ ಲಾಂಚರ್ ವಾಹನದಲ್ಲಿ ಕೊಂಡೊಯ್ಯಬಹುದು. ಒಂದು ರಾಡಾರ್‌ಗೆ ನಾಲ್ಕು ಲಾಂಚರ್‌ಗಳನ್ನು ಇರಿಸಬಹುದು. ಒಂದು ಲಾಂಚರ್‌ಗೆ ಮೂರು ಕ್ಷಿಪಣಿಗಳನ್ನು ಅಳವಡಿಸಬಹುದು. ರಾಡಾರ್ ಆನ್ ಆದ ಕೂಡಲೇ ಶತ್ರುಗಳ ವಾಹಕಗಳನ್ನು ಪತ್ತೆ ಹಚ್ಚಿ, ಕಮಾಂಡ್ ಸೆಂಟರ್‌ಗೆ ಮಾಹಿತಿ ಒದಗಿಸಲಿದೆ. ಶತ್ರು ವಿಮಾನ ಹತ್ತಿರವಾಗುತ್ತಿದ್ದಂತೆ ಮೂರೇ ಸೆಕೆಂಡ್‌ಗಳಲ್ಲಿ ಕ್ಷಿಪಣಿ ಉಡಾವಣೆ ಆಗಿ, ಗುರಿಯನ್ನು ಹೊಡೆಯಲಿದೆ ಎಂದು ವಿವರಿಸಿದರು.
ಶತ್ರುಗಳ ವಿಮಾನವನ್ನು ರಾಡಾರ್ ಕೇವಲ 50 ಕಿ.ಮೀ. ದೂರದಲ್ಲೇ ಪತ್ತೆ ಹಚ್ಚಲಿದೆ. ಅದು 30 ಕಿ.ಮೀ ಒಳಗೆ ಬರುವಷ್ಟರಲ್ಲಿ ಕ್ಷಿಪಣಿ ಅದನ್ನು ಹೊಡೆದು ಉರುಳಿಸಲಿದೆ ಎಂದರು.
ಕಡಿಮೆ ವೆಚ್ಚ; ಹೆಚ್ಚು ದಕ್ಷತೆಯ ಕ್ಷಿಪಣಿ
ವಿಶ್ವದ ಹಲವು ರಾಷ್ಟ್ರಗಳಲ್ಲಿರುವ ಕ್ಷಿಪಣಿಗಳ ಪೈಕಿ ಆಕಾಶ್ ಭಿನ್ನವಾಗಿ ನಿಲ್ಲುತ್ತದೆ. ದುಬಾರಿ ವೆಚ್ಚವಲ್ಲದ ಈ ಕ್ಷಿಪಣಿಯು ಹಲವು ಗುರಿಗಳನ್ನು ಅತ್ಯಂತ ನಿಖರವಾಗಿ ಹುಡುಕಿ ಹೊಡೆಯಲಿದೆ.
ಆಕಾಶ್ ಕ್ಷಿಪಣಿಯಂತೆ ಅಮೆರಿಕದಲ್ಲಿ ಪೇಟ್ರಿಯಟ್ ಕ್ಷಿಪಣಿ ಇದೆ. ಆದರೆ, ಅದು ದುಬಾರಿ. ನಮ್ಮ ಕ್ಷಿಪಣಿಯು ಕಡಿಮೆ ವೆಚ್ಚದ್ದಾಗಿದ್ದು, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಆತ್ಮನಿರ್ಭರ ಯೋಜನೆಯಡಿ ನಿರ್ಮಿಸಿರುವ ಆಕಾಶ್ ಕ್ಷಿಪಣಿ 2009 ರಲ್ಲಿ ಸೇನೆಗೆ ಸೇರ್ಪಡೆಯಾಗಿದೆ ಎಂದು ಹೇಳಿದರು.
ನನ್ನ ಮಗಳ ಕ್ಲಾಸ್ ಯಾವುದೆಂಬುದೇ ಮರೆತಿದ್ದೆ
15ವರ್ಷಗಳ ಆಕಾಶ್ ಕ್ಷಿಪಣಿ ಅಭಿವೃದ್ಧಿಪಡಿಸುವ ವೇಳೆ ಮನೆಯನ್ನೇ ಮರೆತಿದ್ದೆ. ನನ್ನ ಮಗಳು ಯಾವ ಕ್ಲಾಸ್ ಓದುತ್ತಿದ್ದಾಳೆ, ಆಕೆಯ ವ್ಯಾಸಂಗ ಹೇಗಿದೆ, ಪೋಷಕರ ಮೀಟಿಂಗ್ ಯಾವಾಗ ಎಂಬುದೇ ಮರೆತುಹೋಗಿತ್ತು. ಸದಾ ಮನಸ್ಸಿನಲ್ಲಿ ಆಕಾಶ ಧ್ಯಾನವೇ ಇತ್ತು. ಊರಿಂದ ಊರಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಬೆಳಿಗ್ಗೆ ಮನೆಯಿಂದ ಸೂಟ್‌ಕೇಸ್‌ನಲ್ಲಿ ಬಟ್ಟೆ ತೆಗೆದುಕೊಂಡು ಹೋದರೆ, ಎರಡು ದಿನದ ಬಳಿಕ ಮತ್ತೆ ಮನೆಗೆ ಬಂದು ಮತ್ತೊಂದು ಸೂಟ್ ಕೇಸ್ ನಲ್ಲಿ ಬಟ್ಟೆ ತೆಗೆದುಕೊಂಡು ಹೋಗುತ್ತಿದ್ದೆ. ನನ್ನ ಶ್ರೀಮತಿಯವರು ಇದನ್ನು ಗಮನಿಸಿ ಇದೇನು ದೋಬಿಘಾಟ್ ರೀತಿ ಇದೆಯಲ್ಲಾ ಎಂದು ತಮಾಷೆ ಮಾಡುತ್ತಿದ್ದರು. ಈಗ ಪಾಕಿಸ್ತಾನದ ಮೇಲೆ ಆಕಾಶ್ ಕ್ಷಿಪಣಿ ಬಳಸಿದ ನಂತರ ಆಕೆ ಕೂಡ ಖುಷಿಯಾಗಿದ್ದಾಳೆ ಎಂದು ಹೇಳಿದರು.
ಆಕಾಶ್ ಕ್ಷಿಪಣಿ ನಮ್ಮ ದೇಶದ ಹೆಮ್ಮೆ. ಇಂತದ್ದೊಂದು ನಿಖರವಾದ ಅಸ್ತ್ರ ತಯಾರಿಸುವ ಸಾಮರ್ಥ್ಯ ನಮಗೂ ಇದೆ ಎಂಬುದನ್ನು ಸಾಬೀತುಪಡಿಸಿದ್ದೇವೆ. ಕಡಿಮೆ ವೆಚ್ಚದ, ಹೆಚ್ಚು ಪರಿಣಾಮಕಾರಿಯಾದ ಕ್ಷಿಪಣಿ ನಮ್ಮಲ್ಲಿ ಬಿಟ್ಟರೆ ಬೇರಾವ ದೇಶದಲ್ಲೂ ಇಲ್ಲ ಎಂದು ಹೇಳಿದರು.
ಆಕಾಶ್ ಎಂದು ನಾಮಕರಣ ಮಾಡಿದ್ದ ಕಲಾಂ
ಸ್ವಯಂಚಾಲಿತ ಕ್ಷಿಪಣಿ ವ್ಯವಸ್ಥೆ ಸಿದ್ದವಾದ ಬಳಿಕ ಅದಕ್ಕೆ ಹೆಸರಿಡುವ ಬಗ್ಗೆ ಅಬ್ದುಲ್ ಕಲಾಂ ಅವರು ಎಲ್ಲರ ಸಲಹೆ ಕೇಳಿದರು. ಎಲ್ಲರೂ ಒಂದಷ್ಟು ಪಟ್ಟಿ ನೀಡಿದ್ದೆವು. ಆಗ ಇದ್ದಕ್ಕಿದ್ದಂತೆ ಕಲಾಂ ಅವರು ಆಕಾಶ್ ಎಂದು ನಾಮಕರಣ ಮಾಡಿದರು. ಏಕೆಂದರೆ ಕ್ಷಿಪಣಿಯು ಭೂಮಿಯಿಂದ ಆಕಾಶಕ್ಕೆ ಜಿಗಿಯುವ ಕಾರಣಕ್ಕೆ ಅದಕ್ಕೆ ಆಕಾಶ್ ಎಂದು ನಾಮಕರಣ ಮಾಡಿದ್ದಾಗಿ ಹೇಳಿಕೊಂಡರು. ಎಲ್ಲರೂ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆವು ಎಂದು ಸ್ಮರಿಸಿದರು.
ಕ್ಷಿಪಣಿ ತಯಾರಿಕೆ ಸವಾಲಾಗಿತ್ತು
ಕ್ಷಿಪಣಿಯನ್ನು ಸಂಪೂರ್ಣ ಸಿದ್ಧಪಡಿಸಿ ಪರೀಕ್ಷೆಗೆ ಒಳಪಡಿಸುವಾಗ ಹಲವು ಸವಾಲುಗಳು ಎದುರಾಗಿದ್ದವು. ಒಮ್ಮೆ ಭೂಮಿಯಿಂದ ಪರೀಕ್ಷೆಗೆ ಒಳಪಡಿಸಿದಾಗ ವಿಫಲವಾಗಿತ್ತು. ಫ್ಲೈಟ್ ಮೂಲಕ ಪರೀಕ್ಷೆ ನಡೆಸುವಾಗಲೂ ವಿಫಲವಾಗಿತ್ತು. ಹೀಗೆ ಒಟ್ಟು 60 ಬಾರಿಗೆ ಪರೀಕ್ಷಾರ್ಥ ಪ್ರಯೋಗಗಳು ವಿಫಲವಾಗಿದ್ದವು. ಪ್ರತಿ ವಿಫಲತೆಯ ಅವಧಿಯಲ್ಲೂ ಸೂಕ್ತ ಕಾರಣ ಪತ್ತೆ ಹಚ್ಚಿ, ಅಂತಿಮವಾಗಿ ಸುಧಾರಿತ ಕ್ಷಿಪಣಿ ನಿರ್ಮಿಸಿದೆವು ಎಂದು ಪ್ರಹ್ಲಾದ ರಾಮರಾವ್ ಹೇಳಿದರು.
ಪ್ರತಿಬಾರಿ ಪೋಖ್ರಾನ್‌ನಲ್ಲಿ ಪರೀಕ್ಷಾರ್ಥ ಪ್ರಯೋಗ ಮಾಡಬೇಕಾಗಿತ್ತು. ಸೇನಾ ಮುಖ್ಯಸ್ಥರ ಅಗತ್ಯತೆಗಳನ್ನು ಪೂರೈಸಬೇಕಾಗಿತ್ತು ಎಂದು ಹೇಳಿದರು.
ಎಸ್ 400- ಆಕಾಶ್ ಕ್ಷಿಪಣಿ ವ್ಯತ್ಯಾಸವೇನು?
ಎಸ್-400 ಕ್ಷಿಪಣಿ ವಿಭಿನ್ನ ಶ್ರೇಣಿಯದ್ದಾಗಿದ್ದು,100 ಕಿ,ಮೀ ದೂರ ಸಾಗಬಲ್ಲದ್ದಾಗಿದೆ. ಅದರ ವೆಚ್ಚವೂ ದುಬಾರಿಯಾಗಿದೆ. ಆದರೆ, ನಮ್ಮ ಆಕಾಶ್ ಕ್ಷಿಪಣಿ ಮಧ್ಯಮ ಶ್ರೇಣಿಯದ್ದಾಗಿದ್ದು, 35-40 ಕಿ.ಮೀ. ದೂರ ಸಾಗಲಿದೆ.
ರಷ್ಯಾ ಜೊತೆಗೂಡಿ ಎಸ್-400 ಅಭಿವೃದ್ಧಿಪಡಿಸಲಾಗಿದೆ. ಆದರೆ, ಆಕಾಶ್ ಕ್ಷಿಪಣಿ ಸಂಪೂರ್ಣ ಸ್ವದೇಶಿ ನಿರ್ಮಿವಾಗಿದೆ. ಅಮೆರಿಕಾದ ಪೇಟ್ರಿಯಟ್ ಕ್ಷಿಪಣಿಗಿಂತ ಭಿನ್ನ, ಉತ್ತಮವಾಗಿದೆ ಎನ್ನುತ್ತಾರೆ ಪ್ರಹ್ಲಾದ ರಾಮರಾವ್.
ಆಕಾಶ್ ಕ್ಷಿಪಣಿ ತಯಾರಿಕೆ ಒಟ್ಟು 200ಕೈಗಾರಿಕೆಗಳು ಉಪಕರಣ ಅಭಿವೃದ್ಧಿಪಡಿಸಿ, ಪೂರೈಸಿವೆ. ಇಂತಹ ಅದ್ಭುತವಾದ ಕ್ಷಿಪಣಿ ತಯಾರಿಕೆ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ. ಆಕಾಶ್ ಕ್ಷಿಪಣಿಯನ್ನು ಫಿಲಿಪೈನ್ಸ್‌ಗೂ ರಫ್ತು ಮಾಡಲಾಗುತ್ತಿದೆ ಎಂದು ಸ್ಮರಿಸಿದರು.
ಯುವ ಪೀಳಿಗೆಗೆ ಪ್ರಹ್ಲಾದ ರಾವ್ ಸಂದೇಶವೇನು?
ಪ್ರತಿಯೊಬ್ಬರು ತಮ್ಮ ಸಾಮರ್ಥ್ಯವನ್ನು ತಾವೇ ಅರಿಯಬೇಕು. ನಿಮ್ಮ ದೇಹ, ಮೆದುಳಿಗೆ ಅದ್ಭುತಗಳನ್ನು ಸೃಷ್ಟಿಸುವ ಶಕ್ತಿ ಇದೆ. ಯಾವುದೇ ಸಾಧನೆ ಮಾಡಬಹುದು. ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಸಾಮಾನ್ಯರೇ ಸೇರಿ ಆಕಾಶ್ ಕ್ಷಿಪಣಿ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದೇ ಇದಕ್ಕೆ ತಾಜಾ ನಿದರ್ಶನ ಎಂದು ಪ್ರಹ್ಲಾದ ರಾಮರಾವ್ ಹೇಳಿದರು.
ದ ಫೆಡರಲ್ ಕರ್ನಾಟಕ ಪ್ರಹ್ಲಾದ ರಾಮರಾವ್ ಅವರ ಜತೆ ನಡೆಸಿದ ವಿಶೇಷ ಸಂದರ್ಶನದ ಪೂರ್ಣಪಾಠ ಈ ವಿಡಿಯೋ ಲಿಂಕ್‌ನಲ್ಲಿದೆ.