ಬಿಜೆಪಿ ಶಾಸಕನ ವಿರುದ್ಧ ತೊಡೆತಟ್ಟಿದ ಆರ್‌ಟಿಐ ಕಾರ್ಯಕರ್ತನ ಸಾವು| ಪೊಲೀಸರು ಹೇಳಿದ್ದೇನು?

ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಾ ಬಂದಿದ್ದ ಪದ್ಮನಾಭ ಸಾಮಂತ್‌ ಅನುಮಾನಸ್ಪದ ಸಾವಿನ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ನಡೆಸುವುದಾಗಿ ದ.ಕ ಎಸ್‌ಪಿ ತಿಳಿಸಿದ್ದಾರೆ.

Update: 2024-04-03 01:19 GMT

ದಕ್ಷಿಣ ಕನ್ನಡದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಹಾಗೂ ಆರ್‌ಟಿಐ ಕಾರ್ಯಕರ್ತ ಪದ್ಮನಾಭ ಸಾಮಂತ್ ಅವರ ನಿಗೂಢ ಸಾವಿನ ಬಗ್ಗೆ ಅನುಮಾನಗಳು ಹೆಚ್ಚಾಗುತ್ತಿದ್ದು, ಕುಟುಂಬಸ್ಥರು, ಸ್ಥಳೀಯರು ಹೆಚ್ಚಿನ ತನಿಖೆಗೆ ಪಟ್ಟು ಹಿಡಿಯುತ್ತಿದ್ದಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ದಕ್ಷಿಣ ಕನ್ನಡ ಎಸ್ ಪಿ ಸಿ.ಬಿ ರಿಷ್ಯಂತ್ ಅವರು ತಿಳಿಸಿದ್ದಾರೆ.

ಸ್ಥಳೀಯಬಿಜೆಪಿ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಾ, ಶಾಸಕರ ವಿರುದ್ಧದ ಹೋರಾಟಕ್ಕೂ ಮುಂದಾಳತ್ವ ವಹಿಸಿಕೊಂಡು ಬಂದಿದ್ದ ಪದ್ಮನಾಭ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಅವರ ಮನೆ ಸಮೀಪದ ಗುಡ್ಡವೊಂದರಲ್ಲಿ ಪತ್ತೆಯಾಗಿತ್ತು.

ಈ ಹಿಂದೆಯೂ ಅವರ ಮೇಲೆ ದಾಳಿ ಯತ್ನಗಳು ನಡೆದಿದ್ದು, ಅದರ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಸಾಯುವ ಮುನ್ನವೂ ತಮ್ಮ ಫೇಸ್ ಬುಕ್ ಖಾತೆ ಮೂಲಕ ಭ್ರಷ್ಟರ ವಿರುದ್ಧ ಹೋರಾಡುವುದಾಗಿ ಹೇಳಿಕೊಂಡಿದ್ದ ಪದ್ಮನಾಭ್ ಧಿಡೀರ್ ನಾಪತ್ತೆಯಾಗಿದ್ದರು. ಮೂರು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.

ಈ ಬಗ್ಗೆ "ದ ಫೆಡೆರಲ್ ಕರ್ನಾಟಕʼದ ಜತೆ ಮಾತನಾಡಿರುವ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು, “ಈ ಬಗ್ಗೆ ದೂರು ಬಂದಿರುವ ಪ್ರಕಾರ, CrPC ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುವುದು. ಪೋಸ್ಟ್ ಮಾರ್ಟಮ್ ವರದಿ ಇನ್ನೂ ಬಂದಿಲ್ಲ. ಮರಣೋತ್ತರ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಬಹುದು” ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ರಮಾನಾಥ್ ರೈ, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಮೊದಲಾದವರು ಮೃತರ ಕುಟುಂಬವನ್ನು ಭೇಟಿ ಮಾಡಿದ್ದು, ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಒತ್ತಡ ಹಾಕುವುದಾಗಿ ಹೇಳಿದ್ದಾರೆ.

ಪದ್ಮನಾಭ್ ಸಾಮಂತ್ ಅವರ ಅನುಮಾನಸ್ಪದ ಸಾವಿನ ಕುರಿತಂತೆ ದಿ ಫೆಡೆರಲ್ ವಿಸ್ಕೃತ ವರದಿ ಪ್ರಕಟಿಸಿದ್ದು, ಪದ್ಮನಾಭ್ ಅವರ ಸಾವಿನ ಕುರಿತು ಅನುಮಾನ ಎದ್ದಿರುವ ಕಾರಣಗಳ ಬಗ್ಗೆ, ಹಾಗೂ ಅವರ ಹೋರಾಟಗಳ ಬಗ್ಗೆ ಈ ವರದಿಯಲ್ಲಿ ಹೆಚ್ಚಿನ ವಿವರಣೆ ಇದೆ. 

ಇದನ್ನೂ ಓದಿ:  ಶಾಸಕರ ಭ್ರಷ್ಟಾಚಾರದ ವಿರುದ್ಧ ಸವಾಲು ಹಾಕಿದ್ದ ಆರ್‌ಟಿಐ ಕಾರ್ಯಕರ್ತ ನಿಗೂಢ ಸಾವು!


 


Tags:    

Similar News