ಐಸಿಎಆರ್‌ ಮಾಜಿ ನಿರ್ದೇಶಕ, ಸುಬ್ಬಣ್ಣ ಅಯ್ಯಪ್ಪನ್‌ ಸಾವಿನ ಸುತ್ತ ಅನುಮಾನದ ಹುತ್ತ; ಸಿಬಿಐ ತನಿಖೆಗೆ ಒತ್ತಾಯ

ಐಸಿಎಅರ್‌ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ಬಳಿಕ ಅವರನ್ನು ಮೇ 5 ರಂದು ಐಸಿಎಆರ್ ನಿರ್ದೇಶಕ ಸ್ಥಾನದಿಂದ ವಜಾ ಮಾಡಿರವುದು ಅವರ ಸಾವಿಗೆ ಪರೋಕ್ಷ ಕಾರಣ ಇರಬಹುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.;

Update: 2025-05-13 14:28 GMT

ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ (70) ಸಾವಿನ ನಂತರ ಪೊಲೀಸ್‌ ತನಿಖೆಯ ಆಯಾಮಗಳು ವಿವಿಧ ದೃಷ್ಟಿಕೋನಗಳಿಂದ ನಡೆಯುತ್ತಿದೆ. ಐಸಿಎಅರ್‌ (ಭಾರತೀಯ ಕೃಷಿ ಸಂಶೋಧನಾ ಮಂಡಳಿ)ನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ಹಾಗೂ ಅವರನ್ನು ಮೇ 5 ರಂದು ಐಸಿಎಆರ್ ನಿರ್ದೇಶಕ ಸ್ಥಾನದಿಂದ ವಜಾ ಮಾಡಿರವುದು ಅವರ ಸಾವಿಗೆ ಪರೋಕ್ಷ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶ್ರೀರಂಗಪಟ್ಟಣದ ಸಾಯಿ ಆಶ್ರಮದ ಬಳಿಯ ಕಾವೇರಿ ನದಿಯಲ್ಲಿ ಅವರ ಶವ ಸಿಕ್ಕ ಬಳಿಕ ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ವಾಹನ ಮತ್ತು ದೇಹಗಳು ಪ್ರತ್ಯೇಕವಾಗಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದು, ಹೆಚ್ಚಿನ ತನಿಖೆಯನ್ನೂ ಕೈಗೊಂಡಿದ್ದಾರೆ.

ಇದೇ ಹಂತದಲ್ಲಿ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) ನ ಸದಸ್ಯರು, ಅಯ್ಯಪ್ಪನ್ ಅವರನ್ನು ಹತ್ತಿರದಿಂದ ಬಲ್ಲವರು ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಈ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಹಿರಿಯ ಕೃಷಿ ತಜ್ಞ, ಅಯ್ಯಪ್ಪನ್ ಹತ್ತಿರದ ಒಡನಾಡಿ ಡಾ. ವಸಂತ್ ಕುಮಾರ್ ತಿಮಕಾಪುರ ಮಾತನಾಡಿ, "ಅಯ್ಯಪ್ಪನ್ ಅವರನ್ನು ಜನವರಿಯಲ್ಲಿ ಕಡೆಯದಾಗಿ ನಾನು ಭೇಟಿಯಾಗಿದ್ದು. ಆಗ ಅವರಿಗೆ ಮಧುಮೇಹ ಕಾಯಿಲೆ ಉಲ್ಬಣವಾಗಿತ್ತು. ಈ ಬಗ್ಗೆ ಹೇಳಿಕೊಂಡಿದ್ದರು. ಇದರ ನಡುವಲ್ಲೇ ಅಧ್ಯಯನ, ಆಧ್ಯಾತ್ಮ ಗಳತ್ತಲೇ ಹೆಚ್ಚಿನ ಆಸಕ್ತಿ ಹೊಂದಿದ್ದರು. ತುಂಬಾ ಸೂಕ್ಷ್ಮ ವ್ಯಕ್ತಿತ್ವ ಅವರದ್ದು. ಈ ಸಂದರ್ಭದಲ್ಲಿ ಅವರ ಸಾವಿನ ಬಗ್ಗೆ ಸಹಜವಾಗಿಯೇ ಕೆಲವರಲ್ಲಿ ಅನುಮಾನ ಎದ್ದಿದೆ," ಎಂದು ಪ್ರತಿಕ್ರಿಯೆ ನೀಡಿದರು.

ಮೇ 5 ರಂದು ಐಸಿಎಆರ್ ನಿರ್ದೇಶಕ ಸ್ಥಾನದಿಂದ ಯಾವುದೇ ಕಾರಣ ನೀಡದೇ ತೆಗೆದು ಹಾಕಲಾಗಿತ್ತು. ಈ ಘಟನೆಯೂ ಅವರನ್ನು ಮಾನಸಿಕವಾಗಿ ಘಾಸಿಗೊಳಿಸಿತ್ತು. ಈ ಸಂಬಂಧ "ದ ಫೆಡರಲ್ ಕರ್ನಾಟಕ" ಜೊತೆಗೆ ಮಾತನಾಡಿದ ಅವರ ಆತ್ಮೀಯರೊಬ್ಬರು, "ಅಯ್ಯಪ್ಪನ್ ಅವರು ಐಸಿಎಆರ್ ನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದರು, ವ್ಯವಸ್ಥೆಯ ಲೋಪಗಳನ್ನು ಸರಿಮಾಡಲು ಮುಂದಾಗಿದ್ದರು. ಇದುವೇ ಅವರನ್ನು ಸಂಸ್ಥೆಯಿಂದ ಹೊರ ಹಾಕಲು ಕಾರಣವಾಗಿರಬಹುದು, ಇದರಿಂದ ಅಯ್ಯಪ್ಪನ್ ಆತ್ಮಹತ್ಯೆ ಮಾಡಿಕೊಂಡಿರಬಹುದು, ಅದಕ್ಕೂ ಮೀರಿ ಮತ್ತೇನಾದರೂ ನಡೆದಿದೆಯಾ ಎಂಬುದರ ಬಗ್ಗೆ ಸೂಕ್ತ ತನಿಖೆ ಆಗಬೇಕಾಗಿದೆ," ಎಂದು ತಿಳಿಸಿದರು.

ಇನ್ನು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆದರೆ ಸತ್ಯ ಹೊರಬರಬರುತ್ತದೆ. ಇಲ್ಲಿಯವರೆಗೂ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಖರ್ಗೆ ಸಂತಾಪ

ನನಗೆ ತುಂಬಾ ಪರಿಚಿತರಾಗಿದ್ದ, ಹೆಸರಾಂತ ಜಲಚರ ಸಾಕಣೆ (aquaculture) ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಪದ್ಮಶ್ರೀ ಪುರಸ್ಕೃತ ಮತ್ತು "ನೀಲಿ ಕ್ರಾಂತಿಯ ಪಿತಾಮಹ" ಎಂದು ಖ್ಯಾತಿ ಪಡೆದ ಅವರು, ಐಸಿಎಆರ್ ಮುಖ್ಯಸ್ಥರಾದ ವಿಜ್ಞಾನಿ.

ಅವರು ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಫ್ರೆಶ್ವಾಟರ್ ಅಕ್ವಾಕಲ್ಚರ್‌ನ ನಿರ್ದೇಶಕ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದರು ಮತ್ತು ಕರ್ನಾಟಕದ ಕಲಬುರಗಿಯಲ್ಲಿರುವ ಅಯಪ್ಪನ್ ಪ್ರಾದೇಶಿಕ ಸಂಶೋಧನಾ ಕೇಂದ್ರ ಮತ್ತು ಭಾರತೀಯ ದ್ವಿದಳ ಧಾನ್ಯಗಳ ಸಂಶೋಧನಾ ಸಂಸ್ಥೆಯ (ಐಐಪಿಆರ್) ಆಫ್-ಸೀಸನ್ ನರ್ಸರಿ ಸೇರಿದಂತೆ ಅನೇಕ ಕೃಷಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದರು. ಅವರ ನಿಧನದಿಂದ, ಭಾರತೀಯ ವೈಜ್ಞಾನಿಕ ಸಮುದಾಯವು ಜಲಚರ ಸಾಕಣೆಯಲ್ಲಿ ಪ್ರಮುಖ ಬೆಳಕನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ

ಡಾ. ಸುಬ್ಬಣ್ಣ ಅಯ್ಯಪ್ಪನ್  ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದರು. ಪೊಲೀಸರ ಪ್ರಕಾರ, ಶನಿವಾರ (ಮೇ 10) ಸ್ಥಳೀಯರು ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ನದಿಯಿಂದ ಮೇಲಕ್ಕೆ ತಂದಿದ್ದಾರೆ.

ಕೃಷಿ ಮತ್ತು ಮೀನುಗಾರಿಕೆ (ಜಲಕೃಷಿ) ವಿಜ್ಞಾನಿಯಾಗಿದ್ದ ಡಾ. ಅಯ್ಯಪ್ಪನ್ ಅವರು ಐಸಿಎಆರ್‌ನ ಮುಖ್ಯಸ್ಥರಾದ ಮೊದಲ ಬೆಳೆಯೇತರ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತದ 'ನೀಲಿ ಕ್ರಾಂತಿ'ಯಲ್ಲಿ ಅವರ ಕೊಡುಗೆ ಅಪಾರವಾಗಿದ್ದು, 2022ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ವೇಳೆ, ಅಯ್ಯಪ್ಪನ್ ಅವರ ದ್ವಿಚಕ್ರ ವಾಹನವು ನದಿಯ ದಡದಲ್ಲಿ ಪತ್ತೆಯಾಗಿತ್ತು. ಇದನ್ನು ಆಧರಿಸಿ, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಸಾವಿನ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆ ಮತ್ತು ಸಮಗ್ರ ತನಿಖೆಯ ನಂತರವೇ ಖಚಿತಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ಅಯ್ಯಪ್ಪನ್​

ಮೈಸೂರಿನ ವಿಶ್ವೇಶ್ವರ ನಗರದ ಕೈಗಾರಿಕಾ ಪ್ರದೇಶದಲ್ಲಿ ವಾಸವಾಗಿದ್ದ ಡಾ. ಅಯ್ಯಪ್ಪನ್ ಅವರು ಮೇ 7ರಿಂದ ನಾಪತ್ತೆಯಾಗಿದ್ದರು. ಅವರ ಕುಟುಂಬದವರು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಪೊಲೀಸರ ಪ್ರಕಾರ, ಡಾ. ಅಯ್ಯಪ್ಪನ್ ಅವರು ಶ್ರೀರಂಗಪಟ್ಟಣದ ಕಾವೇರಿ ನದಿಯ ದಡದಲ್ಲಿರುವ ಸಾಯಿಬಾಬಾ ಆಶ್ರಮದಲ್ಲಿ ಆಗಾಗ್ಗೆ ಧ್ಯಾನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಮೈಸೂರಿನ ರಾಮಕೃಷ್ಣ ಆಶ್ರಮಕ್ಕೂ ಆಗಾಗ ಭೇಟಿ ನೀಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಡಾ. ಅಯ್ಯಪ್ಪನ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

Tags:    

Similar News