ʼನಮ್ಮ ಮೌನ ಗೈರು ಹಾಜರಿಯಲ್ಲʼ- ಮೂರು ತಿಂಗಳ ಬಳಿಕ ಭಾವನಾತ್ಮಕ ಪತ್ರ ಬರೆದ ಆರ್‌ಸಿಬಿ

ಅಭಿಮಾನಿಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಿರುವುದು ನಮ್ಮ ಕಾಳಜಿಯ ಪ್ರತೀಕ. ನಿಮ್ಮೊಂದಿಗೆ ನಮ್ಮ ಸಂತಸ ಹಂಚಿಕೊಳ್ಳಲು, ನಿಮ್ಮೊಂದಿಗೆ ನಿಲ್ಲಲು, ಒಟ್ಟಾಗಿ ಮುಂದಕ್ಕೆ ಸಾಗಲು ನಾವು ಬದ್ಧವಾಗಿದ್ದೇವೆ ಎಂದು ಆರ್‌ಸಿಬಿ ಹೇಳಿದೆ.;

Update: 2025-08-28 06:49 GMT

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಡಳಿತ ಮಂಡಳಿಯು ಮೂರು ತಿಂಗಳ ನಂತರ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ. 

ಜೂನ್ 4ರಂದು ಸಂಭವಿಸಿದ ಘಟನೆ ಎಲ್ಲರ ಹೃದಯವನ್ನೇ ಮುರಿದಿತ್ತು. ಆ ದಿನದ ಮೌನ ನಮ್ಮ ಗೈರು ಹಾಜರಾತಿ ಅಲ್ಲ, ತೀವ್ರ ದುಃಖದಿಂದ ತುಂಬಿದ ಮೌನವಾಗಿತ್ತು. ನಾವು ಆ ಮೌನದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿದ್ದೆವು. ಆಳವಾಗಿ ಯೋಚಿಸಿದೆವು. ಅದರಿಂದ ಅನೇಕ ವಿಷಯಗಳನ್ನು ಕಲಿತೆವು. ಈ ಸಮಯದಲ್ಲಿ ಹುಟ್ಟಿಕೊಂಡಿದ್ದೇ ಆರ್‌ಸಿಬಿ ಕೇರ್ಸ್‌. ಇದು ಕೇವಲ ಪ್ರತಿಕ್ರಿಯೆಯಲ್ಲ, ಅಭಿಮಾನಿಗಳನ್ನು ಗೌರವಿಸುವ, ಗುಣಪಡಿಸುವ ಮತ್ತು ಅವರ ಜೊತೆ ನಿಲ್ಲುವ ಹೊಸ ವೇದಿಕೆ," ಎಂದು ಪತ್ರದಲ್ಲಿ ತಿಳಿಸಿದೆ.

ಆರ್‌ಸಿಬಿ ಅಭಿಮಾನಿಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಿರುವುದು ಹಬ್ಬವಲ್ಲ, ಕಾಳಜಿಯ ಪ್ರತೀಕ. ನಿಮ್ಮೊಂದಿಗೆ ನಮ್ಮ ಸಂತಸ ಹಂಚಿಕೊಳ್ಳಲು, ನಿಮ್ಮೊಂದಿಗೆ ನಿಲ್ಲಲು, ಒಟ್ಟಾಗಿ ಮುಂದಕ್ಕೆ ಸಾಗಲು ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯಲು ನಾವು ಬದ್ಧವಾಗಿದ್ದೇವೆ," ಎಂದು ತಂಡ ಹೇಳಿದೆ.

ಜೂನ್‌ 5 ರಂದು ಕೊಣೆಯ್ ಬಾರಿಗೆ ಪೋಸ್ಟ್‌ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಾಲ್ತುಳಿತ ದುರ್ಘಟನೆ ಆರ್‌ಸಿಬಿ ಕುಟುಂಬಕ್ಕೆ ಆಘಾತ ಮತ್ತು ದುಃಖ ಉಂಟು ಮಾಡಿದೆ. ಮೃತಪಟ್ಟಿರುವ 11 ಮಂದಿಯ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿತ್ತು.

ಅಲ್ಲದೆ, ದುರಂತದಲ್ಲಿ ಗಾಯಗೊಂಡ ಅಭಿಮಾನಿಗಳ ನೆರವಿಗಾಗಿ ʼಆರ್‌ಸಿಬಿ ಕೇರ್ಸ್‌ʼ ಎಂಬ ನಿಧಿಯನ್ನು ಸ್ಥಾಪಿಸಲಾಗುತ್ತಿದೆ. ನಮಗೆ ಅಭಿಮಾನಿಗಳೇ ನಮ್ಮ ಹೃದಯ. ಅವರಿಗಾಗಿ ನಾವು ಸದಾ ಇರುತ್ತೇವೆ.  ಈ ದುಃಖದ ಕ್ಷಣದಲ್ಲಿ ನಾವು ಎಲ್ಲರೂ ಒಂದಾಗಿ ನಿಲ್ಲುತ್ತೇವೆ ಎಂದು ಆರ್‌ಸಿಬಿ ಪೋಸ್ಟ್‌ ಮಾಡಿತ್ತು. 

ಕಾಲ್ತುಳಿತ ಘಟನೆಗೆ ಆರ್‌ಸಿಬಿಯೂ ಕಾರಣ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ನ್ಯಾ. ಮೈಕಲ್‌ ಕುನ್ಹಾ ಆಯೋಗದ ವರದಿ ದೂಷಿಸಿತ್ತು. ಪಂಜಾಬ್ ವಿರುದ್ಧ ಜಯ ಗಳಿಸಿದರೆ ಜೂನ್ 4 ರಂದೇ ವಿಜಯೋತ್ಸವ ಆಚರಿಸಬೇಕೆಂದು ಆರ್‌ಸಿಬಿ ಆಡಳಿತ ಮಂಡಳಿ ನಿರ್ಧಾರ ಮಾಡಿತ್ತು.

ಆರ್‌ಸಿಬಿ ಸಿಇಒ ರಾಜೇಶ್ ಮೆನನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದರು. ವಿರಾಟ್ ಕೊಹ್ಲಿ ಲಂಡನ್‌ ಗೆ ತೆರಳಿದರೆ ಮತ್ತೆ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂಬ ಕಾರಣ ಮುಂದಿಟ್ಟು, ಕೆಎಸ್‌ಸಿಎ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದರು ಎಂದು ವರದಿ ಹೇಳಿತ್ತು. 

ಈ ಮಧ್ಯೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಕೂಡ ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ 'ಪ್ರಾಥಮಿಕವಾಗಿ ಹೊಣೆಗಾರ' ಎಂದು ಆರೋಪಿಸಿತ್ತು. ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ನಂತರ, ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಮತ್ತು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿತ್ತು. ಈ ಘೋಷಣೆಯ ಪರಿಣಾಮ ಸುಮಾರು 2.5 ಲಕ್ಷದಿಂದ 5 ಲಕ್ಷದಷ್ಟು ಅಭಿಮಾನಿಗಳು ಎಂ.ಜಿ. ರಸ್ತೆ ಮತ್ತು ಕಬ್ಬನ್ ರಸ್ತೆ ಪ್ರದೇಶಗಳಲ್ಲಿ ಏಕಾಏಕಿ ಜಮಾಯಿಸಿದ್ದರು. ಆರ್‌ಸಿಬಿಯು ಪೊಲೀಸರಿಂದ ಸೂಕ್ತ ಅನುಮತಿ ಅಥವಾ ಒಪ್ಪಿಗೆ ಪಡೆದಿರಲಿಲ್ಲ ಎಂದು ನ್ಯಾಯಮಂಡಳಿ ಹೇಳಿತ್ತು.

Tags:    

Similar News