Belagavi session | ಅಧಿವೇಶನದಲ್ಲಿ ವಕ್ಫ್‌ ಹೋರಾಟ ಕಾವೇರಿಸಲು ಪ್ರತಿಪಕ್ಷ ಸಜ್ಜು; ನಿಲುವಳಿ ಸೂಚನೆ ಮಂಡನೆಗೆ ನಿರ್ಧಾರ

ರಾಜ್ಯಾದ್ಯಂತ ವಕ್ಸ್ ವಿರುದ್ಧ ಈಗಾಗಲೇ ಹೋರಾಟ ಆರಂಭಿಸಿರುವ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಪಕ್ಷಗಳು ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿವೆ.;

Update: 2024-12-09 06:00 GMT

ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರತಿಪಕ್ಷಗಳು ಚರ್ಚೆಯ ಅಸ್ತ್ರವಾಗಿಸಿಕೊಂಡರೆ, ವಿಪಕ್ಷಗಳ ಚುನಾವಣೆ ಸೋಲು, ಕೋವಿಡ್ ಹಗರಣವನ್ನು ಆಡಳಿತ ಪಕ್ಷ ಕಾಂಗ್ರೆಸ್‌ ಪ್ರತ್ಯಸ್ತ್ರವನ್ನಾಗಿ ಬಳಸಲು ಸಿದ್ಧವಾಗಿದೆ. ಅಧಿವೇಶನ ಆರಂಭಕ್ಕಕೂ ಮುನ್ನವೇ ವಕ್ಫ್ ವಿವಾದ ಕುರಿತಂತೆ ಪ್ರತಿಪಕ್ಷ ಹಾಗೂ ಸರ್ಕಾರದ ಮಧ್ಯೆ ವಾಕ್ಸಮರ ಮುಂದುವರಿದಿದೆ.

ರಾಜ್ಯಾದ್ಯಂತ ವಕ್ಸ್ ವಿರುದ್ಧ ಈಗಾಗಲೇ ಹೋರಾಟ ಆರಂಭಿಸಿರುವ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಪಕ್ಷಗಳು ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿವೆ.

ಅಧಿವೇಶನಕ್ಕೆ ಪೂರ್ವಭಾವಿಯಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾವೇರಿಯ ಜಿಲ್ಲೆಯ ರಾಣೇಬೆನ್ನೂರಿನ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ್ದಾರೆ.

ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಆದರೆ, ಮನೆಗಳ ಆಸ್ತಿ ಪತ್ರಗಳಲ್ಲಿ ವಕ್ಸ್ ಬೋರ್ಡ್ ಹೆಸರು ನಮೂದಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕಾಟಾಚಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಲ್ಲಿಯವರೆಗ ರೈತರ ಪಹಣಿಯ ಕಾಲಂ 9 ಮತ್ತು 11ರಿಂದ ಹೆಸರು ತೆಗೆದು ಹಾಕಿಲ್ಲ. ಈ ಬಗ್ಗೆ ಅಧಿವೇಶನದ ಒಳಗೆ ಹಾಗೂ ಹೊರಗೆ ಮೈತ್ರಿ ಪಕ್ಷಗಳು ಜಂಟಿ ಹೋರಾಟ ನಡೆಸಲಿವೆ ಎಂದು ಅಶೋಕ್ ಹೇಳಿದ್ದಾರೆ.

ಬಣ ಬಡಿದಾಟಕ್ಕೆ ಬ್ರೇಕ್

ಅಧಿವೇಶನದ ಸಂದರ್ಭದಲ್ಲಿ ಆಂತರಿಕ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಅಧಿವೇಶನದಲ್ಲಿ ಬಿಕ್ಕಟ್ಟು ತೋರಿಸದೇ ಒಗ್ಗಟ್ಟಿನಿಂದ ಆಡಳಿತ ಪಕ್ಷದ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್.ಅಶೋಕ್, ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ ಸೇರಿ ಎಲ್ಲ ನಾಯಕರು ಒಗ್ಗಟ್ಟಾಗಿ ವಿಧಾನಸಭೆ ಅಧಿವೇಶನದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸುತ್ತೇವೆ. ಪಕ್ಷದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರುವುದು ನಿಜ. ಅವನ್ನು ಸರಿಪಡಿಸಿಕೊಂಡು ಒಟ್ಟಾಗಿ ಹೋಗುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

ಬಿಜೆಪಿಯ ವಕ್ಫ್ ಹೋರಾಟಕ್ಕೆ ಪ್ರತಿತಂತ್ರ ರೂಪಿಸಿರುವ ಆಡಳಿತ ಪಕ್ಷ ಬಿಜೆಪಿ, ಅಂಕಿ ಅಂಶಗಳ ಸಮೇತ ಬಿಜೆಪಿ ಅಧಿಕಾರದ ಅವಧಿಯಲ್ಲಿ ನೀಡಿರುವ ನೋಟಿಸ್​ಗಳ ಕುರಿತು ಚರ್ಚೆಗೆ ಸಿದ್ಧವಾಗಿದೆ. ಈ ಕುರಿತು ರಾಯಚೂರಿನಲ್ಲಿ ಮಾತನಾಡಿರುವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಬಿಜೆಪಿ ಅವಧಿಯಲ್ಲಿ 2500 ರೈತರಿಗೆ ನೋಟಿಸ್ ನೀಡಲಾಗಿದೆ. ಅದರ ಮುಂದುವರೆದ ಭಾಗವಾಗಿ ನಮ್ಮ ಅವಧಿಯಲ್ಲಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ನೋಟಿಸ್ ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾಗಿ ಇದು ಮುಗಿದ ಅಧ್ಯಾಯ. ಹಾಗಿದ್ದರೂ ವಕ್ಫ್ ವಿಚಾರದಲ್ಲಿ ಪ್ರತಿಪಕ್ಷಗಳು ಚರ್ಚೆಗೆ ಪಟ್ಟುಹಿಡಿದರೆ, ದಾಖಲೆ, ಅಂಕಿ ಅಂಶಗಳ ಸಮೇತ ಬಣ್ಣ ಬಯಲು ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ನ್ಯಾಯಾಲಯದಲ್ಲಿರುವ ಮುಡಾ, ಮುಗಿದ ಹೋದ ವಕ್ಸ್ ಪ್ರಕರಣದ ಬಗ್ಗೆ ಚರ್ಚಿಸಿದರೆ ಯಾರಿಗೂ ಲಾಭವಿಲ್ಲ. ಉತ್ತರ ಕರ್ನಾಟಕದ ಜನರ ಇದನ್ನೆಲ್ಲಾ ಗಮನಿಸಲಿದ್ದಾರೆ. ಪ್ರತಿಪಕ್ಷಗಳಿಗೆ ಅವರೇ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

Tags:    

Similar News