NIMHANS |ಬೆಂಗಳೂರಿಗೆ ಮತ್ತೊಂದು ನಿಮ್ಹಾನ್ಸ್‌ ; ಕೇಂದ್ರ ಸರ್ಕಾರ ಒಪ್ಪಿಗೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕ್ಯಾಲಸನಹಳ್ಳಿ ಬಳಿ 498 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್‌ ಸ್ನಾತಕೋತ್ತರ ಕೇಂದ್ರ ಮತ್ತು 300 ಹಾಸಿಗೆಗಳ ಪಾಲಿಟ್ರಾಮ ಸೆಂಟರ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.;

Update: 2025-06-28 08:49 GMT

ನಿಮ್ಹಾನ್ಸ್‌ ಆಸ್ಪತ್ರೆ

ಬೆಂಗಳೂರಿನಲ್ಲಿ ಮತ್ತೊಂದು ನಿಮ್ಹಾನ್ಸ್‌  ಆಸ್ಪತ್ರೆ ತಲೆ ಎತ್ತಲಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನಿಮ್ಹಾನ್ಸ್‌ ಆಸ್ಪತ್ರೆಗೆ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 300 ಹಾಸಿಗೆಗಳ ಪಾಲಿಟ್ರಾಮ ಘಟಕ ಆರಂಭಿಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕ್ಯಾಲಸನಹಳ್ಳಿಯಲ್ಲಿ ನಿಮ್ಹಾನ್ಸ್‌ ಸ್ನಾತಕೋತ್ತರ ಕೇಂದ್ರ ಮತ್ತು 300 ಹಾಸಿಗೆಗಳ ಪಾಲಿಟ್ರಾಮ ಸೆಂಟರ್‌ ಸ್ಥಾಪನೆಗೆ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ. ಇದಕ್ಕಾಗಿ 498 ಕೋಟಿ ರೂ. ಖರ್ಚು ಮಾಡಲು ಇಲಾಖೆ ತಾತ್ವಿಕ ಅನುಮೋದನೆ ನೀಡಿದೆ. 

ಬೆಂಗಳೂರು ಸುತ್ತಮುತ್ತಲಿನ ಅಪಘಾತಕ್ಕೀಡಾದವರಿಗೆ ಜೀವ ಉಳಿಸುವ ಮತ್ತು ತುರ್ತು ಆರೈಕೆ ಒದಗಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್‌ ಅವರೊಂದಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದರು. 

 “ವಿಮಾನ ನಿಲ್ದಾಣದ ಸಮೀಪ ಪಾಲಿಟ್ರಾಮ ಕೇಂದ್ರ ಸ್ಥಾಪನೆಯು ಅಪಘಾತಕ್ಕೀಡಾದವರಿಗೆ ತುರ್ತು ಪರಿಹಾರ ನೀಡಲು ಸಹಾಯ ಮಾಡುತ್ತದೆ. ಪ್ರಸ್ತುತ ಈ ಪ್ರದೇಶದಲ್ಲಿ ಅಂತಹ ಆಘಾತ ಪ್ರಕರಣಗಳಿಗೆ ಸ್ಪಂದಿಸುವ ಯಾವುದೇ ಸಾರ್ವಜನಿಕ ಸೌಲಭ್ಯವಿಲ್ಲ. ಕೇಂದ್ರ ಸರ್ಕಾರವು ಈ ಪಾಲಿಟ್ರಾಮ ಕೇಂದ್ರವನ್ನು ಮಂಜೂರು ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ತುರ್ತು ಆರೈಕೆಗೆ ಸಹಕಾರಿ

ಅಪಘಾತಕ್ಕೀಡಾದವರಿಗೆ ನಿರ್ಣಾಯಕ ಸಮಯದಲ್ಲಿ ಆರೈಕೆ ಅತ್ಯಗತ್ಯ. ನಿಮ್ಹಾನ್ಸ್‌ನ ಪಾಲಿಟ್ರಾಮ ಕೇಂದ್ರವು ಈ ತುರ್ತು ಆರೈಕೆ ಒದಗಿಸುವುದರ ಜತೆಗೆ ಎತ್ತರದಿಂದ ಬಿದ್ದ, ಹಲ್ಲೆಗೊಳಗಾದ, ಗಂಭೀರ ಗಾಯಗೊಂಡ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೂ ಸೇವೆ ಸಲ್ಲಿಸಲಿದೆ.  

ಸಾವಿನ ಪ್ರಮಾಣ ಶೇ 9.4 ಹೆಚ್ಚಳ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2030ರ ವೇಳೆಗೆ ರಸ್ತೆ ಅಪಘಾತಗಳು ಸಾವಿಗೆ ಐದನೇ ಪ್ರಮುಖ ಕಾರಣವಾಗುವ ಸಾಧ್ಯತೆಯಿದೆ. ಭಾರತದಲ್ಲಿ 2022 ರಲ್ಲಿ 4,61,312 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ1,68,491 ಜನರು ಮೃತಪಟ್ಟಿದ್ದಾರೆ. 4,43,366 ಜನರಿಗೆ ಗಾಯಗಳಾಗಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪಘಾತಗಳಲ್ಲಿ ಶೇ.11.9 ಮತ್ತು ಸಾವುಗಳಲ್ಲಿ ಶೇ. 9.4 ಹೆಚ್ಚಳವಾಗಿದೆ.

ಸುತ್ತಮುತ್ತಲಿನ ನಗರಗಳಿಗೆ ಅನುಕೂಲ

ಪಾಲಿಟ್ರಾಮ ಕೇಂದ್ರವು ಕಾರ್ಯಾರಂಭ ಮಾಡಿದ ನಂತರ ರೋಗಿಗಳಿಗೆ ತುರ್ತು ಆರೈಕೆ ನೀಡಲು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಇತರ ನಗರಗಳಿಂದಲೂ ರೋಗಿಗಳು ಈ ಕೇಂದ್ರವನ್ನು ಸುಲಭವಾಗಿ ತಲುಪಲು ಸಾಧ್ಯವಾಗಲಿದೆ.  

ಆರೋಗ್ಯ ಸಚಿವಾಲಯದ ಅನುಮೋದನೆ ಬಾಕಿ

ಕ್ಯಾಲಸನಹಳ್ಳಿಯಲ್ಲಿ 39 ಎಕರೆ ಜಾಗವನ್ನು 2012 -13 ರಲ್ಲಿ ಅಂದಿನ ಬಿಜೆಪಿ ಸರ್ಕಾರ ನಿಮ್ಹಾನ್ಸ್‌ ಸ್ಥಾಪನೆಗೆ ಮೀಸಲಿಟ್ಟಿತ್ತು. ನಂತರ ಸಂಸ್ಥೆಯು 498 ಕೋಟಿ ರೂ. ಯೋಜನಾ ವೆಚ್ಚದಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಪಾಲಿಟ್ರಾಮ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಇದೀಗ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯಿಂದ ತಾತ್ವಿಕ ಅನುಮೋದನೆ ನೀಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಂತಿಮ ಅನುಮೋದನೆ ಬಾಕಿ ಇದೆ.  

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳ ರೋಗಿಗಳಿಗೂ ಅನುಕೂಲವಾಗಲಿದ್ದು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಿಮ್ಹಾನ್ಸ್‌ ಆಸ್ಪತ್ರೆಯ ಒತ್ತಡ ಕಡಿಮೆ ಮಾಡಲಿದೆ.  

Tags:    

Similar News