Om Prakash Murder | ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣ; ಪತ್ನಿ ಪಲ್ಲವಿ ಬಂಧನ
ವಿಚಾರಣೆ ವೇಳೆ ಪಲ್ಲವಿ ತಾನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಧಿಕೃತವಾಗಿ ಪಲ್ಲವಿಯನ್ನು ಬಂಧಿಸಿದ್ದಾರೆ.;
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ಪತ್ನಿ ಪಲ್ಲವಿಯನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಓಂ ಪ್ರಕಾಶ್ ಅವರ ಕೊಲೆಯ ಬಳಿಕ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಭಾನುವಾರ ವಿಚಾರಣೆ ವೇಳೆ ಪಲ್ಲವಿ ತಾನೇ ಕೊಲೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಧಿಕೃತವಾಗಿ ಪಲ್ಲವಿಯನ್ನು ಬಂಧಿಸಿದ್ದಾರೆ.
ಓಂ ಪ್ರಕಾಶ್ ಹಾಗೂ ಪಲ್ಲವಿ ದಂಪತಿ ಮಧ್ಯೆ ಕೌಟುಂಬಿಕ ವಿಚಾರವಾಗಿ ಪದೇ ಪದೇ ಜಗಳವಾಗುತ್ತಿತ್ತು. ಭಾನುವಾರವೂ ಇಬ್ಬರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಓಂ ಪ್ರಕಾಶ್ ಅವರು ನನಗೆ ಗನ್ ತೋರಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದರು. ಆತ್ಮರಕ್ಷಣೆಗಾಗಿ ಖಾರದಪುಡಿ ಎರಚಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಪಲ್ಲವಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಮಯದಲ್ಲಿ ಪುತ್ರಿ ಕೃತಿ ಕೂಡ ಇದ್ದುದರಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.