Covid-19| 200 ರ ಗಡಿ ದಾಟಿದ ಕೊರೊನಾ ಪ್ರಕರಣಗಳ ಸಂಖ್ಯೆ
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಶಾಲಾ ಕಾಲೇಜುಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ.;
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 200 ರ ಗಡಿ ದಾಟಿವೆ. ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ. 75 ಕ್ಕಿಂತ ಹೆಚ್ಚು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ.
ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಪ್ರತಿ ದಿನ 36 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ 25 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ರಾಜಧಾನಿಯಲ್ಲಿ ಗರಿಷ್ಠ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವುದರಿಂದ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತ್ಯೇಕವಾಗಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಕೋವಿಡ್ ಪ್ರಕರಣಗಳನ್ನು ನಿಯಂತ್ರಣದಲ್ಲಿಡುವ ದೃಷ್ಟಿಯಿಂದ ಸರ್ಕಾರ ನಿರಂತರ ಸಭೆ ನಡೆಸುತ್ತಲೇ ಇದೆ.
ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಇದ್ದರೆ ರಜೆ
ಶಾಲಾ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಇದ್ದರೆ ರಜೆ ನೀಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಪೋಷಕರು ಈ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಮತ್ತು ಶಾಲೆಗಳು ಇಂತಹ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಶಾಲೆಗಳು ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.