ಶಾಲಾ ಶಿಕ್ಷಣ ಇಲಾಖೆ | ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ನೋಟಿಸ್
ಅಜೀಂ ಪ್ರೇಮ್‌ಜಿ ಅವರ ಸಿಆರ್ಎಫ್ ಫೌಂಡೇಶನ್ ವತಿಯಿಂದ ಈ ಯೋಜನಗೆ 1591 ಕೋಟಿ ಹಣ ನೀಡಿದ್ದು ಪಿ.ಎಂ. ಪೋಷಣ್ ಯೋಜನೆ ಅಡಿ ರಾಜ್ಯ ಸರ್ಕಾರ ಎರಡು ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ ನಾಲ್ಕು ಸೇರಿ ಒಟ್ಟು ವಾರಕ್ಕೆ ಆರು ಮೊಟ್ಟೆಗಳನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ.;
ಉದ್ಯಮಿ ಅಜೀಂ ಪ್ರೇಮ್‌ಜಿ ಅವರ ಸಿಆರ್ಎಫ್ ಫೌಂಡೇಶನ್ ವತಿಯಿಂದ ವಾರದಲ್ಲಿ 1 ರಿಂದ 10 ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದ್ದು, ಇದೀಗ ಆರು ದಿನ ಬೇಯಿಸಿದ ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುವಲ್ಲಿ ವಿಫಲರಾದ 98 ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
ಅಜೀಂ ಪ್ರೇಮ್‌ಜಿ ಅವರ ಸಿಆರ್ಎಫ್ ಫೌಂಡೇಶನ್ ವತಿಯಿಂದ ಈ ಯೋಜನಗೆ 1591 ಕೋಟಿ ಹಣ ನೀಡಿದ್ದು ಪಿ.ಎಂ. ಪೋಷಣ್ ಯೋಜನೆ ಅಡಿ ರಾಜ್ಯ ಸರ್ಕಾರ ಎರಡು ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ ನಾಲ್ಕು ಸೇರಿ ವಾರಕ್ಕೆ ಆರು ಮೊಟ್ಟೆಗಳನ್ನು 48 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ.
ಮೊಟ್ಟೆ ತಿನ್ನುವುದಿಲ್ಲ ಎಂದು ಬೇಡಿಕೆ ಸಲ್ಲಿಸುವ ಮಕ್ಕಳಿಗೆ ನಿಯಮದಂತೆ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುತ್ತಿದೆ. ಸೆ.25ರಿಂದ ಆರಂಭವಾದ ಮೊಟ್ಟೆ ವಿತರಣೆಯ ಅನುಷ್ಠಾನ ಕ್ರಮ ಕುರಿತು ಫೌಂಡೇಷನ್ ಈಚೆಗೆ ಮೌಲ್ಯಮಾಪನ ನಡೆಸಿತ್ತು. ನಾಲ್ಕು ವಿಭಾಗಗಳ 357 ಶಾಲೆಗಳಿಗೆ ಭೇಟಿ ನೀಡಿದಾಗ 66 ಶಾಲೆಗಳು ಈವರೆಗೂ ಮೊಟ್ಟೆ ವಿತರಿಸದಿರುವುದನ್ನು ಪತ್ತೆ ಮಾಡಿತ್ತು. ಫೌಂಡೇಷನ್ ಪ್ರತಿನಿಧಿಗಳು ಸಿದ್ದಪಡಿಸಿದ ಅಧ್ಯಯನ ವರದಿ ಆಧರಿಸಿ ಅನುಷ್ಠಾನದ ಹೊಣೆ ಸಮರ್ಪಕವಾಗಿ ನಿಭಾಯಿಸದ 50 ಬಿಇಒಗಳು ಹಾಗೂ ಪಿ.ಎಂ. ಪೋಷಣ್ ಅಭಿಯಾನದ 48 ಸಹಾಯಕ ನಿರ್ದೇಶಕರೂ ಸೇರಿ 98 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
“ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು, ದೈಹಿಕ ಆರೋಗ್ಯದ ಬೆಳವಣಿಗೆಗೆ ಉತ್ತೇಜಿಸಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಲಾಗಿದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್ ನೆರವು ನೀಡುತ್ತಿದೆ. ಇಂತಹ ಮಹತ್ವಕಾಂಕ್ಷಿ ಯೋಜನೆ ಯಶಸ್ಸಿಗೆ ಶ್ರಮಿಸಬೇಕಾದ ಅಧಿಕಾರಿಗಳಿಂದ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಅಂಥವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯ' ಎಂದು ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಅವರು ಹೇಳಿದ್ದಾರೆ.