ನನಗೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಬಿಡುತ್ತಿಲ್ಲ; ಕೇಂದ್ರ ಸಚಿವ ಎಚ್ಡಿಕೆ ಆರೋಪ
ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಹಣವನ್ನು ಸಮರ್ಥವಾಗಿ ಬಳಸದಿರುವುದನ್ನು ಗಮನಿಸಿದ್ದೆ. ಈಗ ಕೇಂದ್ರ ಸಚಿವನಾಗಿ ಆ ತಪ್ಪುಗಳನ್ನು ಸರಿಪಡಿಸಲು ಯತ್ನಿಸುತ್ತಿದ್ದೇನೆ. ಆದರೆ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ ಎಂದು ಎಚ್ಡಿಕೆ ಹೇಳಿದರು.;
ಹಲಗೂರು ಸಮೀಪದ ಹಂಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ಧಿವಿನಾಯಕ ಗಣಪತಿ ದೇವಾಲಯ ಉದ್ಘಾಟನೆಗೊಂಡಿತು.
ರಾಜ್ಯದಲ್ಲಿ ತಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೇಸರ ತೋಡಿಕೊಂಡ ಪ್ರಸಂಗ ಸೋಮವಾರ ನಡೆದಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ತಮ್ಮ ಹೆಜ್ಜೆಹೆಜ್ಜೆಗೂ ಅಡ್ಡಿಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹಲಗೂರು ಸಮೀಪದ ಹಂಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ಧಿವಿನಾಯಕ ಗಣಪತಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವನಾಗಿ ಮತ್ತು ಮಂಡ್ಯದ ಸಂಸದನಾಗಿ ಜನರಿಗಾಗಿ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದರೂ, ರಾಜ್ಯ ಸರ್ಕಾರದಿಂದ ಸಹಕಾರದ ಬದಲು ವಿರೋಧವೇ ಎದುರಾಗುತ್ತಿದೆ ಎಂದು ಅವರು ದೂರಿದರು.
"ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಹಣ ತರುವ ಉದ್ದೇಶ ಹೊಂದಿದ್ದೇನೆ. ಆದರೆ, ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ. ನಾನು ಜನರ ಸಮಸ್ಯೆಗಳನ್ನು ಆಲಿಸಲು ಜನತಾ ದರ್ಶನ ನಡೆಸಿದರೆ, ಅಧಿಕಾರಿಗಳಿಗೆ ಬರಬಾರದೆಂದು ಸರ್ಕಾರ ಆದೇಶ ಹೊರಡಿಸುತ್ತದೆ. ಇದು ಜನಪ್ರತಿನಿಧಿಯೊಬ್ಬನಿಗೆ ಮಾಡುವ ಅವಮಾನವಲ್ಲವೇ?" ಎಂದು ಅವರು ಪ್ರಶ್ನಿಸಿದರು.
ಮುಂದುವರಿದ ಎಚ್ಡಿಕೆ, "ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಹಣವನ್ನು ಸಮರ್ಥವಾಗಿ ಬಳಸದಿರುವುದನ್ನು ಗಮನಿಸಿದ್ದೆ. ಈಗ ಕೇಂದ್ರ ಸಚಿವನಾಗಿ ಆ ತಪ್ಪುಗಳನ್ನು ಸರಿಪಡಿಸಲು ಯತ್ನಿಸುತ್ತಿದ್ದೇನೆ. ಆದರೆ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ" ಎಂದು ಆಕ್ಷೇಪಿಸಿದರು.
ಗಣಿಗಾರಿಕೆಗೆ ಅಡ್ಡಗಾಲು
‘ಕುದುರೆಮುಖ ಕಂಪನಿಗೆ ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಹಣದ ಅವಶ್ಯಕತೆ ಇತ್ತು. ₹ 1,700 ಕೋಟಿ ಮೊತ್ತದ ಹಣಕಾಸು ನೆರವು ಕೊಡುವ ಪ್ರಸ್ತಾವ ವಿತ್ತ ಸಚಿವಾಲಯಕ್ಕೆ ಹೋಗುವ ಕಡತಕ್ಕೆ ಸಹಿ ಹಾಕಿದೆ. ನನ್ನ ವಿರುದ್ಧ ಅಸೂಯೆ ಪಡುತ್ತಿರುವ ರಾಜ್ಯ ಸರ್ಕಾರ ಅದಕ್ಕೆ ಅಡ್ಡಿಪಡಿಸಿತು. ಮಂಗಳೂರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 2 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಕೊನೆಗೆ ಕಾರ್ಮಿಕರು ಮತ್ತು ರಾಜ್ಯದ ಹಿತಕ್ಕಾಗಿ ನಾನು ಕುದುರೆಮುಖ ಸಂಸ್ಥೆಯನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಜೊತೆಗೆ ವಿಲೀನ ಮಾಡುವ ನಿರ್ಧಾರ ಕೈಗೊಂಡೆ. ಅದೇ ರೀತಿ ಎಚ್.ಎಂ.ಟಿ ಅಭಿವೃದ್ಧಿ ವಿಷಯದಲ್ಲಿಯೂ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತ ಅಡ್ಡಗಾಲು ಹಾಕುತ್ತಿದೆ’ ಎಂದು ದೂರಿದರು.
‘ವೈಜಾಗ್ ಕಾರ್ಖಾನೆಯನ್ನು ಪುನಶ್ಚೇತನ ಮಾಡುವ ಉದ್ದೇಶದಿಂದ ಚಂದ್ರಬಾಬು ನಾಯ್ಡು ಅನೇಕ ಸಲ ನನ್ನನ್ನು ಭೇಟಿಯಾದರು. ಆ ರಾಜ್ಯದ ನಾಯಕರು ಪಕ್ಷಾತೀತವಾಗಿ ನನಗೆ ಬೇಡಿಕೆ ಇಟ್ಟರು. ಅವರ ಬದ್ಧತೆ ರಾಜ್ಯ ಸರ್ಕಾರಕ್ಕೆ ಏಕಿಲ್ಲ ಎಂದು ಪ್ರಶ್ನಿಸಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.