ವಿಧಾನ ಪರಿಷತ್ : ಶಿಕ್ಷಕರ, ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

ನವೆಂಬರ್ 1, 2025 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಈ ದಿನಾಂಕದೊಳಗೆ ಶಿಕ್ಷಕರಾಗಿ ಅಥವಾ ಪದವೀಧರರಾಗಿ ಅರ್ಹತೆ ಪಡೆದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ.

Update: 2025-10-09 11:18 GMT

ಕರ್ನಾಟಕ ವಿಧಾನ ಪರಿಷತ್ತಿನ ಎರಡು ಪ್ರಮುಖ ಕ್ಷೇತ್ರಗಳಿಗೆ 2026ರಲ್ಲಿ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಸಿದ್ಧತೆ ಆರಂಭಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರಗಳಿಗೆ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಆಯೋಗವು ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನವೆಂಬರ್ 1, 2025 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಈ ದಿನಾಂಕದೊಳಗೆ ಶಿಕ್ಷಕರಾಗಿ ಅಥವಾ ಪದವೀಧರರಾಗಿ ಅರ್ಹತೆ ಪಡೆದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ಮೂಲಕ ರಾಜ್ಯದ ಶಾಸಕಾಂಗದ ಮೇಲ್ಮನೆಯಾದ ವಿಧಾನ ಪರಿಷತ್ ಪ್ರವೇಶಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ನಮೂನೆ-18 ಅಥವಾ 19 ರ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 6ಕೊನೆಯ ದಿನಾಂಕವ. ಇದರ ನಂತರ, ಕರಡು ಮತದಾರರ ಪಟ್ಟಿಯನ್ನು ನವೆಂಬರ್ 25ರಂದು ಪ್ರಕಟಿಸಲಾಗುವುದು. ಕರಡು ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 25 ರಿಂದ ಡಿಸೆಂಬರ್ 10ರವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸ್ವೀಕರಿಸಿದ ಎಲ್ಲಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್ 25ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಅಂತಿಮವಾಗಿ, ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30ರಂದು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಕ್ಷೇತ್ರಗಳ ವ್ಯಾಪ್ತಿ ಮತ್ತು ನೋಂದಣಿ ಹೇಗೆ?

ಬೆಂಗಳೂರು ಶಿಕ್ಷಕರ ಕ್ಷೇತ್ರ: ಈ ಕ್ಷೇತ್ರದ ವ್ಯಾಪ್ತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಒಳಪಡುತ್ತವೆ. ಅರ್ಹ ಶಿಕ್ಷಕರು ನಮೂನೆ-19ನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ: ಈ ಕ್ಷೇತ್ರವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ (ದಾವಣಗೆರೆ, ಜಗಳೂರು, ಹರಿಹರ ತಾಲ್ಲೂಕುಗಳು ಮಾತ್ರ) ವ್ಯಾಪ್ತಿಯನ್ನು ಹೊಂದಿದೆ. ಅರ್ಹ ಪದವೀಧರರು ನಮೂನೆ-18ರ ಮೂಲಕ ನೋಂದಾಯಿಸಿಕೊಳ್ಳಬೇಕು.

ಆಧಾರ್ ಕಡ್ಡಾಯವಲ್ಲ

ಮತದಾರರಾಗಿ ನೋಂದಣಿ ಮಾಡಿಕೊಳ್ಳುವಾಗ ಅರ್ಜಿಯಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಸ್ವಯಂಪ್ರೇರಿತವಾಗಿದೆ. ಆಧಾರ್ ಸಂಖ್ಯೆ ನೀಡದ ಕಾರಣಕ್ಕೆ ಯಾವುದೇ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಪ್ರಾದೇಶಿಕ ಆಯುಕ್ತರ ಕಚೇರಿಯು ಈ ಪ್ರಕ್ರಿಯೆಯ ಮೇಲ್ವಿಚಾರಣೆ ವಹಿಸಲಿದ್ದು, ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ವಾರ್ತಾ ಇಲಾಖೆಗೆ ಸೂಚನೆ ನೀಡಿದೆ. 

Tags:    

Similar News