ಯೆಲ್ಲೋ ಲೈನ್ ಮೆಟ್ರೋ: ಆಸನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರ ಪರದಾಟ
ಯೆಲ್ಲೋ ಲೈನ್ನಲ್ಲಿ 25 ರಿಂದ 30 ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡುತ್ತಿವೆ. ಅಷ್ಟು ಹೊತ್ತು ಕಾಯುವಾಗ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಸಮಸ್ಯೆ ಆಗುತ್ತಿದೆ.;
ನಮ್ಮ ಮೆಟ್ರೋ ಯೆಲ್ಲೋ ಲೈನ್
ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ 'ಹಳದಿ ಮೆಟ್ರೋ' (ಯೆಲ್ಲೋ ಲೈನ್) ಮಾರ್ಗವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಈ ಮಾರ್ಗದ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಇಲ್ಲದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಸ್ತುತ, ಈ ಮಾರ್ಗದಲ್ಲಿ 25 ರಿಂದ 30 ನಿಮಿಷಗಳಿಗೊಮ್ಮೆ ಮಾತ್ರ ರೈಲುಗಳು ಲಭ್ಯವಿದ್ದು, ಇಷ್ಟು ದೀರ್ಘ ಸಮಯ ಕಾಯುವಾಗ ಆಸನಗಳ ಕೊರತೆಯು ಹಿರಿಯ ನಾಗರಿಕರು, ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟು ಮಾಡುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.
ಇದೇ ವೇಳೆ, ಶುಕ್ರವಾರ, ಶನಿವಾರ ಮತ್ತು ಭಾನುವಾರದ ಸರಣಿ ರಜೆಯ ನಂತರ ಬೆಂಗಳೂರಿಗೆ ವಾಪಸ್ಸಾಗುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನಮ್ಮ ಮೆಟ್ರೋ ವಿಶೇಷ ವ್ಯವಸ್ಥೆ ಮಾಡಿತ್ತು. ಸೋಮವಾರ, ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಎಂದಿನಂತೆ ಬೆಳಿಗ್ಗೆ 6.30ರ ಬದಲು, ಮುಂಜಾನೆ 5 ಗಂಟೆಯಿಂದಲೇ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಮಂಗಳವಾರದಿಂದ ಎಂದಿನಂತೆ ಬೆಳಿಗ್ಗೆ 6.30ಕ್ಕೆ ಸೇವೆ ಪುನರಾರಂಭವಾಗಲಿದೆ.
ಆದಾಗ್ಯೂ, ನೇರಳೆ ಮತ್ತು ಹಸಿರು ಮೆಟ್ರೋ ಮಾರ್ಗಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಈ ಮಾರ್ಗಗಳಲ್ಲಿ ಎಂದಿನಂತೆ ಬೆಳಿಗ್ಗೆ 4:15ರಿಂದಲೇ ರೈಲು ಸಂಚಾರ ಆರಂಭವಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.