ನಂದಿನಿ ತುಪ್ಪಕ್ಕೆ ವಿದೇಶಗಳಲ್ಲೂ 'ಫುಲ್ ಡಿಮ್ಯಾಂಡ್': ಸೌದಿ, ಅಮೆರಿಕ, ಆಸ್ಟ್ರೇಲಿಯಾಗೆ ರಫ್ತು ಆರಂಭ

ಈ ಐತಿಹಾಸಿಕ ಕ್ಷಣಕ್ಕೆ ನಾಳೆ ಅಧಿಕೃತ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿದೇಶಗಳಿಗೆ ನಂದಿನಿ ತುಪ್ಪ ರಫ್ತು ಮಾಡುವ ವಾಹನಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

Update: 2025-11-24 15:34 GMT

ನಂದಿನಿ ತುಪ್ಪ

ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' (Nandini) ಈಗ ಗಡಿ ದಾಟಿ, ಸಾಗರೋತ್ತರ ದೇಶಗಳಿಗೂ ಲಗ್ಗೆ ಇಡುತ್ತಿದೆ. ರಾಜ್ಯದ ಜನರ ಮನ ಗೆದ್ದಿರುವ ಕೆಎಂಎಫ್‌ನ (KMF) ನಂದಿನಿ ತುಪ್ಪಕ್ಕೆ ಇದೀಗ ವಿದೇಶಗಳಲ್ಲೂ ಭಾರಿ ಬೇಡಿಕೆ ಕುದುರಿದ್ದು, ನಾಳೆ (ಮಂಗಳವಾರ) ಅಧಿಕೃತವಾಗಿ ಮೂರು ಪ್ರಮುಖ ದೇಶಗಳಿಗೆ ರಫ್ತು ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಕರ್ನಾಟಕ ಹಾಲು ಒಕ್ಕೂಟ (KMF) ತನ್ನ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ನಂದಿನಿ ತುಪ್ಪವನ್ನು ರಫ್ತು ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಸ್ಥಳೀಯರಿಂದ ನಂದಿನಿ ಉತ್ಪನ್ನಗಳಿಗೆ, ಅದರಲ್ಲೂ ವಿಶೇಷವಾಗಿ ತುಪ್ಪಕ್ಕೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ನಾಳೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಈ ಐತಿಹಾಸಿಕ ಕ್ಷಣಕ್ಕೆ ನಾಳೆ ಅಧಿಕೃತ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿದೇಶಗಳಿಗೆ ನಂದಿನಿ ತುಪ್ಪ ರಫ್ತು ಮಾಡುವ ವಾಹನಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಮೂಲಕ ಕೆಎಂಎಫ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಡಲಿದೆ.

ಜಾಗತಿಕ ಮಾರುಕಟ್ಟೆ ವಿಸ್ತರಣೆ

ಕೆಎಂಎಫ್ ಈಗಾಗಲೇ ನೆರೆಯ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ. ಇದೀಗ ಹೊರದೇಶಗಳಲ್ಲೂ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಯೋಜನೆ ರೂಪಿಸಿದೆ. ತಿರುಪತಿ ಲಡ್ಡುವಿಗೆ ಬಳಕೆಯಾಗುವ ನಂದಿನಿ ತುಪ್ಪದ ಗುಣಮಟ್ಟಕ್ಕೆ ಈಗಾಗಲೇ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಗುಣಮಟ್ಟ ಮತ್ತು ಸ್ವಾಗತವನ್ನು ವಿದೇಶಿ ಮಾರುಕಟ್ಟೆಯಲ್ಲೂ ಪಡೆಯುವ ವಿಶ್ವಾಸವನ್ನು ಕೆಎಂಎಫ್ ಹೊಂದಿದೆ.

ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯಾಗುವುದರಿಂದ ನೇರವಾಗಿ ರಾಜ್ಯದ ಹೈನುಗಾರರಿಗೆ ಲಾಭವಾಗಲಿದೆ. ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ಮತ್ತು ಆರ್ಥಿಕ ಭದ್ರತೆ ಒದಗಿಸಲು ಈ ನಡೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Tags:    

Similar News