Brand Nandini | ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ನಂದಿನಿ; ಕೆಎಂಎಫ್ ಉತ್ಪನ್ನ ಬಿಡುಗಡೆ ಮಾಡಲಿರುವ ಸಿಎಂ
ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಆಯ್ಕೆಯಾದ ಬಳಿಕ ಭಾರೀ ಬೇಡಿಕೆ ಬಂದಿದೆ. ಈಗಾಗಲೇ ನಂದಿನಿ ಉತ್ಪನ್ನಗಳು ಮುಂಬೈ, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರ, ಗೋವಾ, ಹೈದರಾಬಾದ್, ಪಟನಾ, ಚೆನ್ನೈ ಮತ್ತು ಕೇರಳಕ್ಕೆ ಲಗ್ಗೆ ಇಟ್ಟಿವೆ.;
ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳ ಮಾರುಕಟ್ಟೆ ಈಗ ರಾಜಧಾನಿ ದೆಹಲಿಗೂ ವಿಸ್ತರಿಸಿದೆ. ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಖರೀದಿಸಿದ ನಂತರ ರಾಜ್ಯದ ಡೈರಿ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ ಹಾಗೂ ಇನ್ನಿತರೆ ಉತ್ಪನ್ನಗಳು ಕರ್ನಾಟಕ ಅಲ್ಲದೇ, ಮುಂಬೈ, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರ, ಗೋವಾ, ಹೈದರಾಬಾದ್, ಪಟನಾ, ಚೆನ್ನೈ ಮತ್ತು ಕೇರಳದಲ್ಲಿ ಮಾರಾಟವಾಗುತ್ತಿವೆ.
ಅಮೂಲ್‌ಗೆ ಪೈಪೋಟಿ
ದೆಹಲಿಯಲ್ಲಿ ಗುಜರಾತ್‌ನ ಅಮೂಲ್ ಬ್ರ್ಯಾಂಡ್ ಉತ್ಪನ್ನಗಳು ಮಾರುಕಟ್ಟೆ ಆವರಿಸಿವೆ. ಈಗ ಅಮೂಲ್ ಉತ್ಪನ್ನಗಳಿಗೆ ನಂದಿನಿ ಬ್ರ್ಯಾಂಡ್ ಪೈಫೋಟಿ ನೀಡಲಿದೆ. ದೆಹಲಿಯಲ್ಲಿ ಮದರ್ ಡೈರಿ, ಅಮೂಲ್, ಮಧುಸೂದನ್ ಹಾಗೂ ನಮಸ್ತೆ ಇಂಡಿಯಾ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹಾಲು, ಮೊಸರು ಮಾರಾಟ ಹೆಚ್ಚಿದೆ. ಈಗ ರಾಜ್ಯದ ಅತಿ ಹೆಚ್ಚು ಹಾಲು ಉತ್ಪಾದನೆಯಾಗುವ ಮಂಡ್ಯದಿಂದ (ಮನ್ಮುಲ್) ಕೆಎಂಎಫ್ ಹಾಲಿನ ಉತ್ಪನ್ನಗಳನ್ನು ದೆಹಲಿಗೆ ಸರಬರಾಜು ಮಾಡಲು ಟೆಂಡರ್ ಪಡೆಯಲಾಗಿದೆ.
ಹಾಲಿನ ಉತ್ಪನ್ನ ಬಿಡುಗಡೆಗೆ ಸಿಎಂ
ಸಿಎಂ ಸಿದ್ದರಾಮಯ್ಯ ಅವರು ಗುರುವಾರ(ನ.21)ದೆಹಲಿಯಲ್ಲಿ ನಂದಿನಿ ಬ್ರ್ಯಾಂಡ್ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಾಯೋಗಿಕ ಹಂತವಾಗಿ ದೆಹಲಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಹೆಚ್ಚಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿದ್ದಾರೆ.
ಮಂಡ್ಯದ ಮನ್ಮುಲ್ ಒಕ್ಕೂಟದಿಂದ ಹಾಲನ್ನು ರಸ್ತೆ ಮೂಲಕ ದೆಹಲಿಗೆ ಕಳಿಹಿಸಲು 54 ಗಂಟೆ ಹಿಡಿಯಲಿದೆ. ಆದರೆ, ಈ ಅವಧಿಯಲ್ಲಿ ಹಾಲು ಕೆಡದಂತೆ ಕ್ರಮ ಕೈಗೊಂಡಿದ್ದೇವೆ. ಹಾಲಿನ ಗುಣಮಟ್ವ ಹಾಗೂ ಸುರಕ್ಷತೆಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ದೆಹಲಿ ಹಾಗೂ ಹರಿಯಾಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಲು ಸರಬರಾಜು ಮಾಡಲು 2,190 ಟ್ಯಾಂಕರ್‌ಗಳನ್ನು ಬಳಸಲು ಕೆಎಂಎಫ್ ಯೋಜನೆ ರೂಪಿಸಿದೆ. ಹಾಲಿನ ಟ್ಯಾಂಕರ್‌ಗಳು 2,400 ರಿಂದ 2,500 ಕಿ.ಮೀ ಸಾಗಬೇಕಾಗುತ್ತದೆ. ಹೀಗಾಗಿ, ಹಾಲು ತಾಜಾತನ ಉಳಿಸಿಕೊಳ್ಳಲು ಗುಣಮಟ್ಟದ ನಿಯಂತ್ರಕಗಳನ್ನು ಬಳಸಲಾಗಿದೆ ಎಂದು ವಿವರಿಸಿದ್ದಾರೆ.
ನಿತ್ಯ 84ಲಕ್ಷ ಲೀಟರ್ ಹಾಲು ಉತ್ಪಾದನೆ
ಕರ್ನಾಟಕ ಹಾಲು ಒಕ್ಕೂಟ ನಿತ್ಯ 84 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದೆ. ರಾಜ್ಯದ 22ಸಾವಿರ ಗ್ರಾಮಗಳಿಂದ 15 ಒಕ್ಕೂಟಗಳು ಹಾಲು ಸಂಗ್ರಹಿಸುತ್ತಿವೆ. 24 ಲಕ್ಷ ಹಾಲು ಉತ್ಪಾದಕರು ಮತ್ತು 14 ಸಾವಿರ ಸಹಕಾರಿ ಸಂಘಗಳ ವ್ಯಾಪಕ ಜಾಲ ಹೊಂದಿದೆ. ಪ್ರತಿದಿನ 84 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಿ ಸಂಸ್ಕರಣೆ ಮಾಡಲಾಗುತ್ತದೆ. ಇದರಿಂದ 65ಕ್ಕೂ ಹೆಚ್ಚು ಹಾಲಿನ ಉಪ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೆಎಂಎಫ್ ರೈತರಿಗೆ ಪ್ರತಿದಿನ 17 ಕೋಟಿ ರೂ. ಹಣ ನೀಡುತ್ತದೆ. 2021-22 ರಲ್ಲಿ ಸುಮಾರು 19,800 ಕೋಟಿ ರೂ. ವಹಿವಾಟು ದಾಖಲಿಸಿದೆ.
ನ.26ರಂದು ಇಡ್ಲಿ-ದೋಸಾ ಹಿಟ್ಟು ಬಿಡುಗಡೆ
ಕೆಎಂಎಫ್ ನಂದಿನಿ ಉತ್ಪನ್ನಗಳ ಸಾಲಿಗೆ ನ.26ರಂದು ಇಡ್ಲಿ ಹಾಗೂ ದೋಸಾ ಹಿಟ್ಟು ಸೇರ್ಪಡೆಯಾಗಲಿದೆ. ಬೆಂಗಳೂರಿನಲ್ಲಿ ಐಡಿ (ಇಂಟಿಗ್ರೇಟೆಡ್ ಡೈರಿ). ಅಸಲ್ ಹಾಗೂ ಎಂಟಿಆರ್ ಕಂಪನಿಗಳ ರೆಡಿಮೇಡ್ ದೋಸೆ ಮತ್ತು ಇಡ್ಲಿ ಹಿಟ್ಟು ಸಿಗುತ್ತಿದೆ. ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕೆಎಂಎಫ್ ಕೂಡ ಇಡ್ಲಿ ಮತ್ತು ದೋಸೆ ಹಿಟ್ಟು ಪೂರೈಸಲಿದೆ. ಇದು 900 ಗ್ರಾಂ ಪೌಚ್‌ನಲ್ಲಿ ಪ್ಯಾಕಿಂಗ್ ಆಗಿದ್ದು, ಒಂದು ಪ್ಯಾಕ್‌ನಿಂದ 18 ಇಡ್ಲಿಗಳು ಅಥವಾ 12ರಿಂದ 14 ದೋಸೆಗಳನ್ನು ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಇತರ ನಗರಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ಎಂ.ಕೆ. ಜಗದೀಶ್ ತಿಳಿಸಿದ್ದಾರೆ.