Namma Metro | ಪ್ರಯಾಣ ದರ ಹೆಚ್ಚಳ: ಬಿಎಂಟಿಸಿ ಬಳಿಕ ಇದೀಗ ʼನಮ್ಮ ಮೆಟ್ರೋʼ ಸರದಿ!
ಮಂಡಳಿಯು ಜನವರಿ 17 ರಂದು ಈ ಪ್ರಸ್ತಾಪವನ್ನು ಅನುಮೋದಿಸುವ ಸಾಧ್ಯತೆಯಿದೆ. ಸಮಿತಿಯ ವಿಶ್ಲೇಷಣೆಯ ಆಧಾರದ ಮೇಲೆ 40-45% ದರ ಏರಿಕೆಗೆ ಶಿಫಾರಸು ಮಾಡಿದೆ.;
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ದುಬಾರಿ ದುನಿಯಾ ಎಂದು ಜನ ತಲೆ ಮೇಲೆ ಕೈಹೊತ್ತು ಕೂತಿರುವಾಗಲೇ ಬೆಂಗಳೂರಿಗರ ಪ್ರಯಾಣದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ʼನಮ್ಮ ಮೆಟ್ರೋʼ ಕೂಡ ದರ ಹೆಚ್ಚಳಕ್ಕೆ ಮುಂದಾಗಿದೆ.
ಸುಮಾರು ಎಂಟು ವರ್ಷಗಳ ಬಳಿಕ ʻನಮ್ಮ ಮೆಟ್ರೋʼ ಪ್ರಯಾಣ ದರವನ್ನು ಶೇ.40-45 ರಷ್ಟು ಏರಿಕೆ ಮಾಡಲು ಮುಂದಾಗಿದೆ. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಸರ್ಕಾರದ ಸಮಿತಿ ಈಗಾಗಲೇ ನೀಡಿರುವ ಶಿಫಾರಸುಗಳನ್ನು ಅನುಸರಿಸಿ ದರ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ದರ ಪರಿಷ್ಕರಣೆಗಾಗಿ ನ್ಯಾಯಮೂರ್ತಿ (ನಿವೃತ್ತ) ಆರ್ ಥರಾಣಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್ ಮತ್ತು ಕರ್ನಾಟಕ ನಿವೃತ್ತ ಐಎಎಸ್ ಅಧಿಕಾರಿ ಇವಿ ರಮಣ ರೆಡ್ಡಿ ಅವರನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯು ಪ್ರಯಾಣ ದರ ಹೆಚ್ಚಳ ಶಿಫಾರಸು ಮಾಡುವ ಮೊದಲು ವಿವಿಧ ಅಂಶಗಳನ್ನು ವಿಶ್ಲೇಷಿಸಿದೆ.
ಅಕ್ಟೋಬರ್ 2024 ರಲ್ಲಿ ಸಾರ್ವಜನಿಕ ಪ್ರತಿಕ್ರಿಯೆಯನ್ನು ಇದಕ್ಕಾಗಿ ಕೋರಲಾಗಿತ್ತು. ಡಿಸೆಂಬರ್ 16 ರಂದು ಸಾರ್ವಜನಿಕ ಪ್ರತಿಕ್ರಿಯೆಗಳ ಕೋರಿಕೆಯೂ ಮುಕ್ತಾಯಗೊಂಡಿತ್ತು. ಇದೀಗ ಈ ಸಮಿತಿಯು ಪ್ರಯಾಣಿಕರ ಅಭಿಪ್ರಾಯ, ನಿಗಮದ ಸ್ಥಿತಿಗತಿ, ದರ ಹೆಚ್ಚಳದ ಪ್ರಮಾಣ ಸಹಿತ ಎಲ್ಲಾ ಮಾಹಿತಿ ಒಳಗೊಂಡ ಅಂತಿಮ ವರದಿಯನ್ನು ಕಳೆದ ವಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಂಡಳಿಗೆ ಸಲ್ಲಿಕೆ ಮಾಡಿತ್ತು.
40-45% ದರ ಏರಿಕೆಗೆ ಸಮಿತಿ ಶಿಫಾರಸು
ಮಂಡಳಿಯು ಜನವರಿ 17 ರಂದು ಈ ಪ್ರಸ್ತಾಪವನ್ನು ಅನುಮೋದಿಸುವ ಸಾಧ್ಯತೆಯಿದೆ. ಸಮಿತಿಯ ವಿಶ್ಲೇಷಣೆಯ ಆಧಾರದ ಮೇಲೆ 40-45% ದರ ಏರಿಕೆಗೆ ಶಿಫಾರಸು ಮಾಡಿದೆ. ಮೆಟ್ರೋದ ಮೂಲ ದರ ಪ್ರಸ್ತುತ ಇರುವ 10 ರೂ.ನಿಂದ ಸುಮಾರು 15 ರೂ.ಗೆ ಏರಿಕೆಯಾಗಲಿದ್ದು, ಗರಿಷ್ಠ ದರ ಈಗಿರುವ 60 ರೂ.ನಿಂದ 85 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ ಜನದಟ್ಟಣೆ ಇಲ್ಲದ ಸಮಯದಲ್ಲಿ ಹಾಗೂ ಭಾನುವಾರದಂದು ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರು ಶೇ.5 ರಷ್ಟು ರಿಯಾಯಿತಿಯನ್ನು ಪಡೆಯಬಹುದು.
ಜನವರಿ ಅಂತ್ಯಕ್ಕೆ ದರ ಹೆಚ್ಚಳ ಸಾಧ್ಯತೆ
ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ, 2002 ರ ಸೆಕ್ಷನ್ 37 ರ ಅಡಿಯಲ್ಲಿ ಸಮಿತಿಯ ಶಿಫಾರಸುಗಳು ಬಿಎಮ್‌ಆರ್‌ಸಿಎಲ್ ಗೆ ಬದ್ಧವಾಗಿರುತ್ತವೆ. ಪರಿಷ್ಕೃತ ದರಗಳು ಜನವರಿ ಅಂತ್ಯದಿಂದ ಜಾರಿಗೆ ಬರಲಿವೆ. 2017 ರಲ್ಲಿ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ತನ್ನ ನಾಲ್ಕನೇ ದರ ನಿಗದಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಏಳು ವರ್ಷಗಳ ನಂತರ 25-67 ಶೇಕಡಾ ದರ ಹೆಚ್ಚಳವನ್ನು ಜಾರಿಗೆ ತಂದಿತ್ತು. ಜನವರಿ 17 ರಂದು ಸಭೆ ಸೇರಲಿರುವ BMRCL ಮಂಡಳಿಯು ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತದೆ ಎಂದು ಮೂಲಗಳು ಹೇಳಿವೆ.
ಸಮಿತಿಯ ನಿರ್ಧಾರಗಳು ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ 2002 ರ ಸೆಕ್ಷನ್ 37 ರ ಅಡಿಯಲ್ಲಿ, ಸಮಿತಿಯ ಶಿಫಾರಸುಗಳು BMRCL ಗೆ ಬದ್ದವಾಗಿರಬೇಕಾಗುತ್ತದೆ. ಪರಿಷ್ಕೃತ ದರಗಳು ಜನವರಿ ಅಂತ್ಯದಿಂದ ಜಾರಿಗೆ ಬರಲಿವೆ. 2017 ರಲ್ಲಿ, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ತನ್ನ ನಾಲ್ಕನೇ ದರ ನಿಗದಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಏಳು ವರ್ಷಗಳ ನಂತರ ಶೇ. 25 ರಿಂದ 67ರಷ್ಟು ದರ ಹೆಚ್ಚಳವನ್ನು ಜಾರಿಗೆ ತಂದಿತ್ತು.
2017 ರಲ್ಲಿ ಕೊನೆಯ ಪರಿಷ್ಕರಣೆ
ದರವನ್ನು ಏರಿಕೆಗೆ ಶೀಫಾರಸು ಮಾಡುವ ಮುನ್ನ ಈ ಸಮಿತಿಯು ಹಲವು ಅಂಶಗಳನ್ನು ಮೌಲ್ಯಮಾಪನ ಮಾಡಿದೆ. ಜೂನ್ 2017 ರಲ್ಲಿ ಮೆಟ್ರೋ ಪ್ರಯಾಣ ದರವನ್ನು ಕೊನೆಯದಾಗಿ ಶೇಕಡಾ 10-15 ರಷ್ಟು ಪರಿಷ್ಕರಣೆ ಮಾಡಿತ್ತು. ಆಗ ಬೆಂಗಳೂರು 43.2 ಕಿಮೀ ಮೆಟ್ರೋ ಕಾರ್ಯಾಚರಣೆಯ ಜಾಲವನ್ನು ಹೊಂದಿತ್ತು. ಬಳಿಕ ಇದು 76.95 ಕಿಮೀ (ಶೇಕಡಾ 73.13 ರಷ್ಟು) ವಿಸ್ತರಿಸಿತ್ತು. ಬಳಿಕ 2, 2 ಎ ಮತ್ತು 2 ಬಿ ಹಂತಗಳನ್ನು ಪೂರ್ಣಗೊಳಿಸುವುದರೊಂದಿಗೆ ಡಿಸೆಂಬರ್ 2026 ರ ವೇಳೆಗೆ 175.55 ಕಿಮೀ (ಶೇಕಡಾ 306) ಕ್ಕೆ ವಿಸ್ತರಣೆಯಾಗುತ್ತಿದೆ.
ಕೊನೆಯ ಪರಿಷ್ಕರಣೆಯ ಬಳಿಕ ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಾಗಿದೆ. ವಿದ್ಯುತ್ ವೆಚ್ಚ ಮತ್ತು ಮೂಲಸೌಕರ್ಯದ ವೆಚ್ಚ ಸೇರಿದಂತೆ ಹೆಚ್ಚುತ್ತಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳಿಂದಾಗಿ ದರ ಅನಿವಾರ್ಯವಾಗಿದೆ. ಆಗಾಗ್ಗೆ ದುರಸ್ತಿ ಮತ್ತು ದುಬಾರಿ ಬಿಡಿಭಾಗಗಳ ಅಗತ್ಯದಿಂದಾಗಿ ನಿರ್ವಹಣಾ ವೆಚ್ಚ ಮಾತ್ರ ಶೇಕಡಾ 300 ರಷ್ಟು ಹೆಚ್ಚಾಗಿದೆ. ಹೀಗಾಗಿ ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.